ಬ್ರಿಟಿಷರ ಜೊತೆಗೆ ಸಶಸ್ತ್ರವಾಗಿ ಹೋರಾಡಿದ್ದ ಇಂಚಗೇರಿ ಮಠದ ಕ್ರಾಂತಿಯೋಗಿಯ ಪುಣ್ಯಸ್ಮರಣೆ

First Published May 30, 2023, 4:06 PM IST

ವರದಿ:  ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಮೇ 30):  ಭಾರತ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾತ್ಮರು ಹೋರಾಟ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳು. ಓರ್ವ ಮಠದ ಮಠಾಧೀಶರಾಗಿ ಮಾಧವಾನಂದ ಶ್ರೀಗಳು ಬ್ರೀಟಿಷರ ವಿರುದ್ಧ ಸಶಸ್ತ್ರವಾಗಿ ಹೋರಾಡಿದ್ದರು. ಆಧಾತ್ಮಿಕ ಜೀವಿಗಳು ಆಗಿದ್ದ ಮಾಧವಾನಂದ ಪ್ರಭುಜಿಗಳು ನಮ್ಮನ್ನೆಲ್ಲ ಅಗಲಿ ಇಂದಿಗೆ 43 ವರ್ಷಗಳು ಕಳೆದಿವೆ.

ಬ್ರೀಟಿಷರ ವಿರುದ್ಧ ಸಶಸ್ತ್ರವಾಗಿ ಹೋರಾಡಿ ದೇಶಕ್ಕೆ ಸ್ವಾತಂತ್ರ ತಂದುಕೊಡಲು ಕಾರಣಿಕರ್ತರಾದ ಇಂಚಗೇರಿ ಮಠದ ಮಾಧವಾನಂದ ಶ್ರೀಗಳ 43ನೇ ಪುಣ್ಯ ಸ್ಮರಣೆ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯುವ ಪುಣ್ಯ ಸ್ಮರಣೆ ಕಾರ್ಯಕ್ರಮ ದಿನಾಂಕ ೩೧ ರಂದು ಪುಷ್ಪವೃಷ್ಟಿಯೊಂದಿಗೆ ಮಂಗಲಗೊಳ್ಳಲಿದೆ ಎಂದು ಶ್ರೀಕ್ಷೇತ್ರ ಇಂಚಗೇರಿ ಮಠದ ರೇವಣಸಿದ್ದೇಶ್ವ ಮಹಾರಾಜರು ತಿಳಿಸಿದ್ದಾರೆ. ಸ್ಮರಣೋತ್ಸವ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ವಿವಿಧ ಕಾರ್ಯಕ್ರಮಗಳು, ಮಾಧವಾನಂದರ ಕ್ರಾಂತಿಕಾರಿ ಹೋರಾಟಗಳು, ಆಧ್ಯಾತ್ಮಿಕ ಸಾಧನೆ ಹಾಗೂ ದೇವರ ಜನ ಸೇವೆಗಳ ಬಗ್ಗೆ ಉಪನ್ಯಾಸಗಳು ನಡೆಯಲಿವೆ. ವಿವಿಧ ಆಧ್ಯಾತ್ಮೀಕ ಕೇಂದ್ರಗಳ ಶ್ರೀಗಳು, ಜನಪ್ರತಿನಿಧಿಗಳು ಮಾಧವಾನಂದ ಶ್ರೀಗಳ ಸಮಾಜ ಸುಧಾರಣೆಗಳ ಬಗ್ಗೆ ಮಾತನಾಡಲಿದ್ದಾರೆ. 

ಶ್ರೀಮಠಕ್ಕೆ ಭೇಟಿ ನೀಡಲಿರುವ ನೂತನ ಶಾಸಕರು

ಮಾಧವಾನಂದ ಪ್ರಭುಜಿಗಳ ಪುಣ್ಯಸ್ಮರಣೆ ಹಿನ್ನೆಲೆ‌ ಹಲವಾರು ನೂತನ ಶಾಸಕರು ಇಂಚಗೇರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಅಥಣಿ ಶಾಸಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಸೇರಿದಂತೆ ಬೆಳಗಾವಿ ಜಿಲ್ಲೆಯ ಕೆಲ ನೂತನ ಶಾಸಕರು ಮಠಕ್ಕೆ ಆಗಮಿಸಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಬ್ರೀಟಿಷರ ವಿರುದ್ಧ ಉಗ್ರ ಹೋರಾಟ ನಡೆಸಿದ್ದ ಮಹಾದೇವರು

ಇಂಚಗೇರಿ ಮಠದ ಶ್ರೀ ಗಿರಿಮಲ್ಲೇಶ್ವರ ಆದೇಶದಂತೆ 1929 ರಲ್ಲಿ ಮಾಧವಾನಂದ ಪ್ರಭುಜಿಗಳು ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು. ತಮ್ಮ ಇಂಚಗೇರಿ ಮಠದ ಭಕ್ತರನ್ನ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಸಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಹಾಗೂ ಮಹಾರಾಷ್ಟ್ರದ ಜತ್‌ ತಾಲೂಕಿನ ಸೊನ್ಯಾಳ ಗ್ರಾಮದಲ್ಲಿ ಸೇರಿ ಎರಡು ಬಂದೂಕು ಫ್ಯಾಕ್ಟರಿ ನಿರ್ಮಿಸಿ ಸಶಸ್ತ್ರವಾಗಿ ಬ್ರೀಟಿಷರ ವಿರುದ್ಧ ಹೋರಾಡಿದ್ದರು. ತಮ್ಮ ಅನುಯಾಯಿಗಳೊಂದಿಗೆ ಸೇರಿ ಹುಲಕೋಟೆ, ಸಾವಳಗಿ, ಇಂಚಗೇರಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನ ಅಪಹರಿಸಿದ್ದರು. ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ದರು. ಬ್ರಿಟಿಷರ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನ ಕಿತ್ತಹಾಕಿ ಠಾಣೆಗಳನ್ನ ಧ್ವಂಸಗೊಳಿಸಿದ್ದರು. ಇನ್ನು ಬ್ರಿಟಿಷರ ಸರ್ಕಾರಕ್ಕೆ ಸೇರಬೇಕಿದ್ದ ಬೊಕ್ಕಸವನ್ನ ದೋಚಿದ್ದು ಆ ಸಮಯದಲ್ಲಿ ಬಾರಿ ಸಾಹಸ ಪ್ರಕರಣವಾಗಿತ್ತು. ಇದರ ಫಲವಾಗಿ 27 ಬಾರಿ ಜೈಲು ವಾಸ ಅನುಭವಿಸಿದ್ದಾರೆ.

ವಿದೇಶಿ ಪತ್ರಿಕೆಗಳಲ್ಲು ಮಹಾದೇವರ ಆಧ್ಯಾತ್ಮ ಕ್ರಾಂತಿ ಪ್ರಕಟ

ಸ್ವಾತಂತ್ರ ನಂತರ ಮಠಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿಯವ್ರ ಮೊಮ್ಮಗ ಅರುಣ ಗಾಂಧಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಮಾಧವಾನಂದರ ಕೊಡುಗೆ ಹಾಗೂ ಇಂಚಗೇರಿ ಸಾಂಪ್ರದಾಯದ ಆಧ್ಯಾತ್ಕೀಯ ಕ್ರಾಂತಿಯ ಬಗ್ಗೆ ವಿದೇಶಗಳಲ್ಲಿ ಅತ್ಯಧಿಕ ಪ್ರಸಾರ ಉಳ್ಳ “ದಿ ಇಂಪ್ರಿಂಟ್” ಇಂಗ್ಲಿಷ ಪತ್ರಿಕೆಯಲ್ಲಿ ಬರೆದಿದ್ದರು. ಇದನ್ನ ಓದಿನ ಅದೇಷ್ಟೋ ವಿದೇಶಿಗರು ಕೂಡ ಸಧ್ಯ ಮಠದ ಭಕ್ತರಾಗಿದ್ದಾರೆ. ಇಂದಿಗೂ ಶ್ರೀಮಠಕ್ಕೆ ಫಾರೀನ್ಸ್‌ ಭೇಟಿ ನೀಡಿ ಗದ್ದುಗೆಗಳ ದರ್ಶನ ಮಾಡಿಕೊಂಡು ಭಕ್ತಿಭಾವಗಳಿಂದ ಭಜನೆಗಳನ್ನ ಮಾಡುವುದು ವಿಶೇಷವಾಗಿದೆ.

ಇಂಚಗೇರಿ ಮಠದ ನಡೆದಿದ್ದ ಆಜಾದಿಕಾ ಅಮೃತ ಮಹೋತ್ಸವ

ಮಾಧವಾನಂದ ಪ್ರಭುಜಿಗಳ ಸ್ವಾತಂತ್ರ್ಯ ಹೋರಾಟ, ಇಂಚಗೇರಿ ಸಾಂಪ್ರದಾಯದ ದೇಶಭಕ್ತಿಯ ಬಗ್ಗೆ ಅರಿತ ವಿಜಯಪುರ ಜಿಲ್ಲಾಡಳಿತ ಇಂಚಗೇರಿ ಮಠದಲ್ಲಿಯೇ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಿತ್ತು. ಜಿಲ್ಲಾಧಿಕಾರಿ ವಿಜಮಹಾಂತೇಶ ದಾನಮ್ಮನವರ್‌ ಮಾಧವಾನಂದ್ರ ಪ್ರಭುಜಿಗಳ ಸ್ವಾತಂತ್ರ್ಯ ಹೋರಾಟವನ್ನ ಕೊಂಡಾಡಿದ್ದರು. 

25 ಸಾವಿರ ಅಂತರ್‌ ಜಾತಿ, ಅಂತರ್‌ ಧರ್ಮಿಯ ಮದುವೆ!
ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳು ಜ್ಯಾತ್ಯಾತೀತ ಚಿಂತನೆಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದರು. ತಮ್ಮ ಜೀವಿತಾವಧಿಯಲ್ಲಿ ಇಂಚಗೇರಿ ಮಠದಲ್ಲಿ 25 ಸಾವಿರಕ್ಕು ಅಧಿಕ ಅಂತರ್‌ ಜಾತಿ ಹಾಗೂ ಅಂತರ್‌ ಧರ್ಮಿಯ ಮದುವೆಗಳನ್ನ ಮಾಡಿಸಿದ್ದರು. ಸ್ವತಃ ತಮ್ಮ ಮೊಮ್ಮಗಳು ಕಾಳಮ್ಮದೇವಿಯನ್ನ ಮುಸ್ಲಿಂ ಧರ್ಮಿಯ ಆದಾಮ್‌ ಸಾಬ್‌ ಗೆ ಕೊಟ್ಟು ಮದುವೆ ಮಾಡಿದ್ದರು ಅನ್ನೋದು ಗಮನಾರ್ಹ ಸಂಗತಿಯಾಗಿದೆ.

ಸ್ವಾತಂತ್ರ್ಯ ಹೋರಾಟದ ಬಳಿಕ ಪಿಂಚಣಿ ತಿರಸ್ಕರಿಸಿದ್ದ ಶ್ರೀಗಳು

ಸ್ವಾತಂತ್ರ್ಯ ಹೋರಾಟದ ಬಳಿಕ ಭಾರತ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಇಂಚಗೇರಿ ಸಾಂಪ್ರದಾಯದ ಮಾಧವಾನಂದ ಶ್ರೀಗಳಿಗೆ ಪಿಂಚಣಿ ನೀಡುವುದಾಗಿ ಹೇಳಿತ್ತು. ಆಗ ಮಾಧವಾನಂದ ಶ್ರೀ ಮಠಕ್ಕೆ ಬಂದಿದ್ದ ಅಧಿಕಾರಿಗೆ ನಾನು ನನ್ನ ತಾಯಿಯನ್ನ ಬಂಧನದಿಂದ ಮುಕ್ತ ಮಾಡಲು ಹೋರಾಟ ಮಾಡಿದ್ದೀನಿ, ನಿಮ್ಮ ಸರ್ಕಾರದ ಪಿಂಚಣಿಗಾಗಿ ಅಲ್ಲಾ ಎನ್ನುವ ಮೂಲಕ ಪಿಂಚಣಿ ತಿರಸ್ಕರಿಸಿದ್ದರಂತೆ. ಸ್ವತಃ ಮಾಧವಾನಂದ ಶ್ರೀಗಳೇ ಪಿಂಚಣಿ ಬೇಡ ಎಂದಿದ್ದರಿಂದ 2 ಸಾವಿರಕ್ಕು ಅಧಿಕ ಇಂಚಗೇರಿ ಮಠದ ಸ್ವಾತಂತ್ರ್ಯ ಹೋರಾಟಗಾರರು ಪಿಂಚಣಿ ತಿರಸ್ಕರಿಸಿದ್ದರು ಅನ್ನೋದು ಗಮನಾರ್ಹ ಸಂಗತಿ..!

click me!