10 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಆದರೆ ಸಂಪರ್ಕ ರಸ್ತೆಗೆ ಒಬ್ಬ ವ್ಯಕ್ತಿ ಜಮೀನು ನೀಡದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದಾಗಿ ಗ್ರಾಮಸ್ಥರು ಇಂದಿಗೂ ದೋಣಿಯಲ್ಲೇ ಅಪಾಯಕಾರಿ ಪ್ರಯಾಣ ಮಾಡುತ್ತಿದ್ದಾರೆ.
ಈ ಫೋಟೋದಲ್ಲಿರುವ ಕಾಣುತ್ತಿರುವ ಸೇತುವೆ ಯಾವುದೇ ಬಿಹಾರ ಅಥವಾ ಉತ್ತರ ಪ್ರದೇಶವಲ್ಲ. ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯದ್ದು. ಸೇತುವೆ ನಿರ್ಮಾಣವಾಗಿದ್ದು, ಆದ್ರೆ ಇದಕ್ಕೆ ರಸ್ತೆಯೇ ಇಲ್ಲ. ಏನಿದು ಸೇತುವೆ ಎಂಬುದನ್ನು ನೋಡೋಣ ಬನ್ನಿ.
25
ಸೇತುವೆ ಇದ್ರೂ ಸಂಪರ್ಕ ಇಲ್ಲ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಉಂಬಳೆಜೂಗ ದ್ವೀಪ ಗ್ರಾಮದ ಸುಮಾರು 30 ಕುಟುಂಬಗಳು ಕಳೆದ ಮೂರು ವರ್ಷಗಳಿಂದ ಸೇತುವೆ ಇದ್ದೂ ಸಂಪರ್ಕ ರಸ್ತೆ ಇಲ್ಲದೇ ಪರದಾಡುವಂತಾಗಿದೆ. ಸದ್ಯ ಸೇತುವೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
35
ರಸ್ತೆ ನಿರ್ಮಾಣಕ್ಕೆ ತಕರಾರು
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಅವರ ಪ್ರಯತ್ನದಿಂದ ಬರೋಬ್ಬರಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಈ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಿಸಲು ಮೂಲತಃ ಇದೇ ಊರಿನವರಾಗಿದ್ದು, ಪ್ರಸ್ತುತ ಕಾರವಾರ ನಗರದಲ್ಲಿ ನೆಲೆಸಿರುವ ವಿಠ್ಠಲ್ ವಾರ್ಕರ್ ಎಂಬ ವ್ಯಕ್ತಿ ತಕರಾರು ತೆಗೆದಿರುವುದು ಇಡೀ ಗ್ರಾಮಕ್ಕೆ ಶಾಪವಾಗಿ ಪರಿಣಮಿಸಿದೆ.
ಸಂಪರ್ಕ ರಸ್ತೆಗೆ ಅಗತ್ಯವಿರುವ ಮೂರು ಗುಂಟೆ ಜಮೀನನ್ನು ನೀಡಲು ಅವರು ಸತಾಯಿಸುತ್ತಿದ್ದು, ಗ್ರಾಮದ ಉಳಿದೆಲ್ಲಾ ಜನರು ಉಚಿತವಾಗಿ ಜಮೀನು ದಾನ ಮಾಡಲು ಸಿದ್ಧರಿದ್ದರೂ ಈ ಒಬ್ಬ ವ್ಯಕ್ತಿಯ ಹಠದಿಂದಾಗಿ ಕಾಮಗಾರಿ ಅರ್ಧಕ್ಕೇ ನಿಂತಿದೆ.
55
ದೋಣಿಯನ್ನೇ ನಂಬಿಕೊಂಡಿರು ಸ್ಥಳೀಯರು
ರಸ್ತೆ ನಿರ್ಮಾಣಕ್ಕೆ ಉಂಟಾದ ತೊಡಕಿನಿಂದ ಗುತ್ತಿಗೆದಾರರು ಕೆಲಸವನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದು, ಲಕ್ಷಾಂತರ ವೆಚ್ಚದ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಗ್ರಾಮಸ್ಥರು ಇಂದಿಗೂ ದೋಣಿಯನ್ನೇ ನೆಚ್ಚಿಕೊಂಡು ಅಪಾಯಕಾರಿ ಪ್ರಯಾಣ ಬೆಳೆಸುವ ಅನಿವಾರ್ಯತೆ ಎದುರಾಗಿದೆ.