ಕೆಮ್ಮಣ್ಣು ಗ್ರಾಮದ ನಿವಾಸಿಗಳಾದ ಇಮ್ತಿಯಾಸ್, ಇಲ್ಯಾಸ್ ಮತ್ತು ಸುಹಾನ್ ಅವರು ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯ ಗ್ರಾಮಗಳ ಪ್ರವಾಹದಲ್ಲಿ ಸಿಲುಕಿದ್ದವರನ್ನು ತಮ್ಮ ಎರಡು ಕಯಾಕಿಂಗ್ ಎಂಬ ಸಣ್ಣ ಹುಟ್ಟು ಹಾಕಿ ನಡೆಸುವ ದೋಣಿಗಳಲ್ಲಿ ರಕ್ಷಿಸಿದ್ದಾರೆ.
ನಿಟ್ಟೂರಿನಲ್ಲಿ ಪ್ರವಾಹದಲ್ಲಿ ಮುಳುಗಿದ್ದ ತಮ್ಮ ಮನೆಯ ಮಾಡು ಹಿಡಿದು ನೇತಾಡುತಿದ್ದ ವೃದ್ಧ ಕೂಲಿ ಕಾರ್ಮಿಕ ದಂಪತಿಯನ್ನು ಸೇರಿದಂತೆ, ಇಲ್ಲಿನ ಕಲ್ಯಾಣಪುರ, ತಾರಕಟ್ಟ, ತಿಮ್ಮಣ್ಣಕುದ್ರು, ಹೊನ್ನಣ್ಣಕುದ್ರು, ಕಂಬಳತೋಟ, ಪಡುಕುದ್ರು ಮುಂತಾದ ಕಡೆಗಳಿಂದ ಜನರನ್ನು ಎತ್ತರದಲ್ಲಿರುವ ಕಲ್ಯಾಣಪುರದ ಶಾಲೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.
ಭಾನುವಾರ ಮಧ್ಯರಾತ್ರಿ 2 ಗಂಟೆಗೆ ಗೆಳೆಯರೊಬ್ಬರು ಇಮ್ತಿಯಾಜ್ ಅವರಿಗೆ ಕರೆ ಮಾಡಿ 15 ಮಂದಿ ಅಪಾಯದಲ್ಲಿದ್ದಾರೆ ಸಹಾಯ ಮಾಡಬಹುದೇ ಎಂದು ವಿನಂತಿಸಿದ್ದರು.
ಅಷ್ಟಕ್ಕೆ ಸಹೋದರರು ತಮ್ಮ ದೋಣಿಗಳನ್ನು ಓಮ್ನಿಯಲ್ಲಿ ತುಂಬಿಸಿ ಧಾವಿಸಿದರು. ಅವರನ್ನು ರಕ್ಷಿಸುವಷ್ಟರಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ನೂರಾರು ಮನೆಗಳು ಜಲಾವೃತವಾಗಿರುವುದನ್ನು ಕಂಡು, ಸುರಿಯುತಿದ್ದ ಭಾರೀ ಮಳೆಯ ನಡುವೆಯೂ ಅಪಾಯದಲ್ಲಿದ್ದ ಮನೆಗಳನ್ನು ಹುಡುಕಿಕೊಂಡು ಹೋಗಿ ಅಲ್ಲಿದ್ದವರನ್ನು ರಕ್ಷಿಸಿದ್ದಾರೆ. ಸಂಜೆ 7 ಗಂಟೆಯವರೆಗೆ ಮಳೆ ಕಡಿಮೆಯಾಗುವವರೆಗೆ ಅವರು ಜನರನ್ನು ರಕ್ಷಿಸಿದ್ದಾರೆ.
ಒಂದು ಕಯಾಕಿಂಗ್‌ನಲ್ಲಿ 2 ಮಂದಿಗೆ ಮಾತ್ರ ಕುಳಿತುಕೊಳ್ಳುವ ಅವಕಾಶ ಇದೆ. ಆದರೆ ಈ ಸಹೋದರರು 4 ಮಂದಿಯನ್ನು ಕುಳ್ಳಿರಿಸಿ ರಕ್ಷಿಸಿದ್ದಾರೆ.
ಕೊಡಂಕೂರಿನ ಮನೆಯೊಂದರಲ್ಲಿ 7- 8 ಅಡಿ ನೀರು ತುಂಬಿತ್ತು, ಹತ್ತಿರ ಹೋಗಿ ನೋಡಿದರೆ, ಇಬ್ಬರು ವಯಸ್ಸಾದ ಕೂಲಿ ಕಾರ್ಮಿಕರರು ಮಾಡು ಹಿಡಿದು ನೇತಾಡುತಿದ್ದರು. ನೀರಿನ ರಭಸ ಎಷ್ಟಿಂತ್ತೆಂದರೆ ನನ್ನ ದೋಣಿ ನಿಲ್ಲಿಸಲಿಕ್ಕಾಗುತ್ತಿರಲಿಲ್ಲ.
ದೋಣಿ ಹತ್ತಲಿಕ್ಕೆ ಅವರಿಗೆ ಆಗುತ್ತಿರಲಿಲ್ಲ. ಅವರು ನಮ್ಮನ್ನು ರಕ್ಷಿಸಿ, ನಿಮ್ಮ ಕಾಲು ಹಿಡಿಯುತ್ತೇವೆ ಎಂದು ಅಳುತ್ತಾ ಬೇಡುತಿದ್ದರು. ಕೊನೆಗೆ ನಾನು ಅವರಿಗೆ ಲೈಫ್ ಜಾಕೆಟ್ ತೊಡಿಸಿ, ಸಮೀಪದ ಬೇರೆ ಮನೆಗೆ ಹೋಗಿ ಕುರ್ಚಿಯನ್ನು ತಂದು, ವೃದ್ಧ ದಪಂತಿಗಳನ್ನು ಕುರ್ಚಿಯ ಮೇಲೆ ನಿಲ್ಲಿಸಿ ಅವರನ್ನು ದೋಣಿಗೆ ಹತ್ತಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದೆ. ಇದು ನನ್ನ ಜೀವನದ ಅತ್ಯಂತ ಸಾರ್ಥಕ ಕೆಲಸ ಎನ್ನುತ್ತಾರೆ ಇಮ್ತಿಯಾಜ್.
ಮಹಾಮಳೆಗೆ ಅಲೆವೂರು ಪರಿಸರದಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 20ಕ್ಕೂ ಹೆಚ್ಚು ಜನರನ್ನು ಮತ್ತು ಜಾನುವಾರುಗಳನ್ನು ಅಪದ್ಭಾಂದವ ಶೇಖರ್ ಮಡಿವಾಳ (ಶೇಖರಣ್ಣ) ಅವರು ತನ್ನ ಜೀವದ ಹಂಗನ್ನು ತನ್ನ ದೋಣಿಲ್ಲಿ ರಕ್ಷಿಸಿದ್ದಾರೆ.