ಒಂದೆಡೆ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಶಾಲೆಗಳನ್ನು ಆರಂಭಿಸಬೇಕೇ ಬೇಡವೇ ಎಂಬ ಚರ್ಚೆ ಇನ್ನೂ ನಡೆಯುತ್ತಲೇ ಇದೆ. ಈ ಮಧ್ಯೆ ಸರ್ಕಾರಿ ಶಾಲೆಗಳಲ್ಲಿ ‘ವಿದ್ಯಾಗಮ’ ಕಾರ್ಯಕ್ರಮದ ಮೂಲಕ ಕಲಿಕೆಯ ನಿರಂತರತೆಯನ್ನು ಕಾಪಾಡುವ ಕಾರ್ಯ ನಡೆದಿದೆ. ಅಲ್ಲದೇ ಇದೇ ಅವಧಿಯಲ್ಲಿ ಶಾಲೆಗಳು ದುರಸ್ತಿ ಭಾಗ್ಯವನ್ನು ಕಂಡಿದ್ದು, ಹಲವು ಕೊಠಡಿ ನಿರ್ಮಾಣವೂ ಪ್ರಗತಿಯಲ್ಲಿದೆ.
undefined
ಲಾಕ್‌ಡೌನ್ ಅವಧಿಯಲ್ಲಿ ಶಾಲಾ ಕೈತೋಟ ನಿರ್ಮಾಣ, ಸುಣ್ಣ ಬಣ್ಣ, ಚಿತ್ತಾಕರ್ಷಕ ಕಲೆಗಳಿಂದ ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸಲಾಗಿದೆ. ಇದು ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಮುಖ ಮಾಡುವಂತೆ ಮಾಡಿದೆ. ಪಾಲಕರು ಖಾಸಗಿ ಶಾಲೆಗಳಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಜಿಲ್ಲೆಯ ಮಟ್ಟಿಗೆ ಕೊರೋನಾದಿಂದ ಸರ್ಕಾರಿ ಶಾಲೆಗಳು ಮತ್ತೆ ಗತವೈಭವದ ದಿನಗಳನ್ನು ಮರುಕಳಿಸುವಂತೆ ಮಾಡಿದೆ.
undefined
ಜಿಲ್ಲೆಯಲ್ಲಿ 7127 ಪ್ರಾಥಮಿಕ ಶಾಲಾ ಕೊಠಡಿ ಹಾಗೂ 1090 ಪ್ರೌಢಶಾಲೆ ಕೊಠಡಿ ಸೇರಿ 8217 ಕೊಠಡಿಗಳಿವೆ. ಕಳೆದ ವರ್ಷದ ನೆರೆ ಸಂದರ್ಭದಲ್ಲಿ ನೂರಾರು ಶಾಲೆಗಳಿಗೆ ಹಾನಿಯಾಗಿತ್ತು. ಜಿಲ್ಲೆಯ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಆರ್‌ಐಡಿಎಫ್ ಯೋಜನೆಯಡಿ 18 ಕೋಟಿ, ಸಮಗ್ರ ಶಿಕ್ಷಣ ಯೋಜನೆಯಡಿ 4 ಕೋಟಿ ಸೇರಿದಂತೆ 34.44 ಕೋಟಿ ಅನುದಾನ ಬಂದಿದೆ. ಇದರಲ್ಲಿ ಚಾವಣಿ, ಸಣ್ಣಪುಟ್ಟದುರಸ್ತಿ ಇರುವ ಕೊಠಡಿಗಳನ್ನು ಈಗಾಗಲೇ ರಿಪೇರಿ ಮಾಡಲಾಗಿದೆ.
undefined
2018- 19ನೇ ಸಾಲಿನಲ್ಲಿ 4 ಕೋಟಿ ವೆಚ್ಚದಲ್ಲಿ 112 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದ್ದರೆ. ಪ್ರಸಕ್ತ ಸಾಲಿನಲ್ಲಿ 290 ಕೊಠಡಿ ನಿರ್ಮಾಣ ಪ್ರಗತಿಯಲ್ಲಿದೆ. ಇನ್ನೂ ಸುಮಾರು 350 ಕೊಠಡಿಗಳ ದುರಸ್ತಿ ಕಾರ್ಯ ಆಗಬೇಕಿದ್ದು, ಅದಕ್ಕಾಗಿ ಅನುದಾನ ಕೋರಿ ಶಿಕ್ಷಣ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೇ ನರೇಗಾ ಯೋಜನೆಯಡಿ ಶಾಲಾ ಶೌಚಾಲಯ, ಕಾಂಪೌಂಡ್ ನಿರ್ಮಾಣ, ಶಾಲಾ ಕೈತೋಟ, ಆಟದ ಮೈದಾನ ಸೇರಿದಂತೆ ಹಲವು ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ಮೂಲ ಸೌಲಭ್ಯದಲ್ಲಿ ಗಣನೀಯ ಹೆಚ್ಚಳವಾಗಿದೆ.
undefined
ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಗಳಿಗೆ 2,58,713 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆದಿದ್ದಾರೆ. ಇನ್ನೂ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು 17500 ಮಕ್ಕಳು ಪ್ರವೇಶ ಪಡೆಯುವ ನಿರೀಕ್ಷೆ ಹೊಂದಲಾಗಿದೆ. ಬ್ಯಾಡಗಿ ತಾಲೂಕಿನಲ್ಲಿ 23837, ಹಾನಗಲ್ಲ 41587, ಹಾವೇರಿ 49201, ಹಿರೇಕೆರೂರು 34595, ರಾಣಿಬೆನ್ನೂರು 53358, ಸವಣೂರು 24539 ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ 31596 ವಿದ್ಯಾರ್ಥಿಗಳು ಸೇರಿದಂತೆ 2.58 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
undefined
ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲೆಯ ಕಲಾ ಶಿಕ್ಷಕರು ಸೇರಿದಂತೆ ಉತ್ಸಾಹಿ ಶಿಕ್ಷಕರು ತಮ್ಮ ಶಾಲೆಗಳನ್ನು ಆಕರ್ಷಣೀಯಗೊಳಿಸುವಲ್ಲಿ ನಿರತರಾಗಿದ್ದರು. ಅನೇಕ ಶಾಲೆಗಳು ಸುಣ್ಣಬಣ್ಣಗಳಿಂದ ಮಿಂಚುತ್ತಿದೆ. ಕೆಲವು ಶಾಲೆಗಳ ಆವರಣ, ಗೋಡೆಗಳಿಗೆಲ್ಲ ವರ್ಲಿ ಕಲೆಯಿಂದ ಮಿಂಚುತ್ತಿವೆ. ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗದಿದ್ದರೂ ಶಿಕ್ಷಕರು ಕಳೆದ ಮೂರು ತಿಂಗಳಿಂದ ಶಾಲೆಗೆ ಹೋಗುತ್ತಿದ್ದಾರೆ. ಶಾಲೆಯ ಕೊಠಡಿಗಳನ್ನು ಸ್ವಚ್ಛಗೊಳಿಸುವುದು, ಆವರಣ, ಅಡುಗೆ ಕೋಣೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಲು ಶ್ರಮಿಸಿದ್ದಾರೆ. ಇದರಿಂದ ಸರ್ಕಾರ ಶಾಲಾ ಆರಂಭಕ್ಕೆ ಯಾವಾಗ ಅನುಮತಿ ನೀಡಿದರೂ ಅದಕ್ಕೆ ಸಿದ್ಧ ಎಂಬಂತೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಅಣಿಯಾಗಿವೆ.
undefined
ಕೊರೋನಾ ಆತಂಕದ ಮಧ್ಯೆಯೂ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಶಾಲಾ ಕೊಠಡಿ ದುರಸ್ತಿ, ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ದಾಖಲಾತಿ ಸಂಖ್ಯೆಯೂ ಹೆಚ್ಚಿದೆ. ಸರ್ಕಾರ ಅನುಮತಿ ನೀಡಿದ ತಕ್ಷಣ ಶಾಲೆ ಪುನಾರಂಭಕ್ಕೆ ಬೇಕಾದ ಎಲ್ಲ ಸಿದ್ಧತೆ ನಡೆದಿದೆ ಎಂದು ಹಾವೇರಿ ಡಿಡಿಪಿಐ ಅಂದಾನಪ್ಪ ವಡಗೇರಿ ಅವರು ತಿಳಿಸಿದ್ದಾರೆ.
undefined