ಅರುಣಾಚಲ ಪ್ರದೇಶದಲ್ಲಿ ಐಟಿಬಿಎಫ್ ಯೋಧರಾಗಿ ಕಾರ್ಯ ನಿರ್ವಹಿಸುತ್ತಿರುವ ಯೋಧ ಪ್ರಕಾಶ್ ಹೈಗಾರ್ ಸದ್ಯಕ್ಕೆ ರಜೆ ಮೇಲೆ ಊರಿಗೆ ಆಗಮಿಸಿದ್ದು, ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಈಗಾಗಲೇ 6 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದು, ಇನ್ನು 8 ದಿನ ಬಾಕಿ ಇದೆ. ಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನು ತರುವ ಸಹೋದರರು 5 ಮೀಟರ್ ದೂರದಲ್ಲಿಯೇ ಆಹಾರ ಇಟ್ಟು ಹೋಗುತ್ತಾರೆ.
ರಜೆಯಿಂದ ಊರಿಗೆ ಬರುವುದು ಖಚಿತವಾಗಿ ಕ್ವಾರಂಟೈನ್ ಆಗುವುದು ಕಡ್ಡಾಯ ವಾಗುತ್ತಿದ್ದಂತೆ ಅವರು ಯಾವುದೇ ಹೊಟೆಲ್ ಸರ್ಕಾರದ ಕ್ವಾರಂಟೈನ್ ಕೇಂದ್ರಗಳಿಗೆ ತೆರಳದೇ ಜಿಲ್ಲಾಡಳಿತದ ಅನುಮತಿ ಪಡೆದು ತಮ್ಮ ಹೊಲದ ಮಧ್ಯದಲ್ಲಿಯೇ ತಮ್ಮ ಟ್ರ್ಯಾಕ್ಟರ್ ಟೇಲರ್ ತಂದು ನಿಲ್ಲಿಸಿಕೊಂಡು, ಸುತ್ತಲೂ 30 ಅಡಿಗೂ ಹೆಚ್ಚು ಕಂಬಗಳನ್ನು ಹಾಕಿಕೊಂಡು ಹಗ್ಗ ಹಾಕಿ ಅದರಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಮುಖ್ಯವಾಗಿ ತಮ್ಮ ಬಟ್ಟೆಗಳನ್ನು ತಾವೇ ತೊಳೆದು ಅಲ್ಲಿಯೇ ಒಣಗಿಸಿಕೊಂಡು, ಅಲ್ಲಿಯೇ ಜಳಕ ಸೇರಿದಂತೆ ನಿತ್ಯದ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ.
ಗ್ರಾಮದ ಹೊರ ವಲಯದಲ್ಲಿರುವ ತಮ್ಮ ಜಮೀನನಲ್ಲಿಯೇ ಟ್ರ್ಯಾಕ್ಟರ್ ಟೇಲರ್ ನಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಶೆಡ್ ನಿರ್ಮಾಣವಾಗಿದೆ ಎನ್ನುವುದನ್ನು ಖಚಿತ ಪಡಿಸಿಕೊಂಡು, ನೇರವಾಗಿ ಅಲ್ಲಿಯೇ ಬಂದು ಕ್ವಾರಂಟೈನ್ ಆಗಿದ್ದು, ಕಳೆದ 6 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇನ್ನು 8 ದಿನಗಳನ್ನು ಹೊಲದಲ್ಲಿಯೇ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ನಂತರ ಮನೆಗೆ ತೆರಳುವ, ಊರು ಪ್ರವೇಶಿಸುವ ಇಚ್ಚೆ ಹೊಂದಿದ್ದು, ಇದು ದೂರ ದೂರ ರಾಜ್ಯಗಳಿಂದ ಬರುವವರಿಗೆ ಪ್ರೇರಣೆಯಾಗಿದೆ.
ಅರುಣಾಚಲ ಪ್ರದೇಶದಿಂದ ವಿಮಾನ ಮೂಲಕ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಖಾಸಗಿ ವಾಹನದ ಮೂಲಕ ಸ್ವಗ್ರಾಮಕ್ಕೆ ಆಗಮಿಸಿದ ಯೋಧ ಪ್ರಕಾಶ್ ನಿಗೆ ಬೆಂಗಳೂರಿನಲ್ಲಿ ಕೋವಿಡ್ ಟೆಸ್ಟ್ ಸಹ ಮಾಡಿದ್ದಾರೆ. ಅಲ್ಲಿ ನೆಗೆಟಿವ್ ಬಂದಿದ್ದರೂ, ಬೆಂಗಳೂರಿನ ವೈದ್ಯರು ಹೋಮ್ ಕ್ವಾರಂಟೈನ್ ಇರುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ನನ್ನಿಂದ ಯಾರಿಗೂ ಸೋಂಕು ಹರಡುಬಾರದು ಅಂತಾ ಏಕಾಂಗಿಯ ಜಮೀನಿನಲ್ಲಿ ಹಗಲು ರಾತ್ರಿ ಮಳೆ ಗಾಳಿ ಎನ್ನದೆ ಜೀವನ ಸಾಗಿಸುತ್ತಿದ್ದಾರೆ.
ನಮ್ಮ ಮನೆಯಲ್ಲಿ ವೃದ್ಧ ತಾಯಿ, ಸಣ್ಣ ಮಕ್ಕಳು ಸೇರಿದಂತೆ ನಮ್ಮದು ಅವಿಭಕ್ತ ಕುಟುಂಬವಾಗಿರುವ ಹಿನ್ನೆಲೆಯಲ್ಲಿ ನಾನೇ ಸ್ವಯಂ ಪ್ರೇರಣೆಯಿಂದ ಹೊಲದ ಮಧ್ಯದಲ್ಲಿ ಕ್ವಾರಂಟೈನ್ ಆಗಿದ್ದೇನೆ, ಇದರಿಂದಾಗಿ ನಾನು 14 ದಿನಗಳ ಕ್ವಾರಂಟೈನ್ ಅವಧಿಯನ್ನು ನನ್ನೂರಿನಲ್ಲಿಯೇ ಕಳೆದಂತಾಗುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ ನಡೆಸಿದ ಕೋವಿಡ್ ಟೆಸ್ಟ್ ನಲ್ಲಿ ವರದಿ ನೆಗೆಟಿವ್ ಬಂದಿವೆ, ಮುಂಜಾಗ್ರತಾ ಕ್ರಮವಾಗಿ ನಮ್ಮ ಮನೆಯವರು ಹಾಗು ಊರಿನ ಜನರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕಾಗಿ ಹೊಲದಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ ಎಂದು ಯೋಧ ಪ್ರಕಾಶ ಹೈಗಾರ್ ಅವರು ತಿಳಿಸಿದ್ದಾರೆ.