ಮೈಸೂರು: ಡ್ರಗ್ ಉತ್ಪಾದನೆಯ ಎರಡನೇ ರಹಸ್ಯ ಘಟಕ ಪತ್ತೆ ಹಚ್ಚಿದ ಹೊರರಾಜ್ಯ ಪೊಲೀಸ್! 10 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ

Published : Feb 03, 2026, 12:24 PM IST

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎನ್‌ಸಿಬಿ ಅಧಿಕಾರಿಗಳು ಬೃಹತ್ ಡ್ರಗ್ ತಯಾರಿಕಾ ಜಾಲವನ್ನು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, ರಹಸ್ಯ ಪ್ರಯೋಗಾಲಯವನ್ನು ಪತ್ತೆಹಚ್ಚಿ, 10 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿ, ರಾಜಸ್ಥಾನ ಮೂಲದ ನಾಲ್ವರನ್ನು ಬಂಧಿಸಲಾಗಿದೆ.  

PREV
18
ಬೃಹತ್ ಡ್ರಗ್ ತಯಾರಿಕೆಗೆ ವೇದಿಕೆಯಾಯ್ತಾ ಸಾಂಸ್ಕೃತಿಕ ನಗರಿ ಮೈಸೂರು?

ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಮಾದಕವಸ್ತುಗಳ ಅಕ್ರಮ ಜಾಲದ ಕೇಂದ್ರವಾಗುತ್ತಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಉದ್ಭವಿಸಿದೆ. ಮೈಸೂರಿನಲ್ಲಿ ಡ್ರಗ್ ತಯಾರಿಸಿ ಅಂತರರಾಜ್ಯಗಳಿಗೆ ಸರಬರಾಜು ಮಾಡಲು ರೂಪಿಸಲಾಗಿದ್ದ ದೊಡ್ಡ ಮಟ್ಟದ ಯೋಜನೆಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಭೇದಿಸಿದ್ದು, ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

28
ರಹಸ್ಯ ಪ್ರಯೋಗಾಲಯ ಪತ್ತೆ

ಮೈಸೂರಿನಲ್ಲೇ ರಹಸ್ಯ ಪ್ರಯೋಗಾಲಯ ಸ್ಥಾಪಿಸಿ ಮಾದಕವಸ್ತು ಉತ್ಪಾದನೆಗೆ ಸಜ್ಜಾಗಿದ್ದ ಅಂತರರಾಜ್ಯ ಮಾದಕವಸ್ತು ಕಳ್ಳಸಾಗಣೆ ಸಿಂಡಿಕೇಟ್ ಅನ್ನು ಎನ್‌ಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ವಿಶೇಷವೆಂದರೆ, ಇದು ಮೈಸೂರಿನಲ್ಲಿ ಪತ್ತೆಯಾಗಿರುವ ಎರಡನೇ ಡ್ರಗ್ ತಯಾರಿಕಾ ಘಟಕ ಆಗಿದ್ದು, ಈ ಬಾರಿ ಘಟಕವನ್ನು ಪತ್ತೆ ಹಚ್ಚಿದವರು ಹೊರರಾಜ್ಯದ ಪೊಲೀಸ್ ಅಧಿಕಾರಿಗಳಾಗಿರುವುದು ಸ್ಥಳೀಯ ಪೊಲೀಸರ ಕಾರ್ಯವೈಖರಿಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.

38
ಮೈಸೂರು ಪೊಲೀಸರ ವಿಫಲ

ಮೈಸೂರಿನಲ್ಲಿ ಡ್ರಗ್ ತಯಾರಿಕೆ ನಡೆಯುತ್ತಿದ್ದುದು ಗೊತ್ತಾಗಿದ್ದರೂ, ತಮ್ಮ ವ್ಯಾಪ್ತಿಯಲ್ಲೇ ಬೆಳೆಯುತ್ತಿದ್ದ ಅಕ್ರಮ ಜಾಲವನ್ನು ಪತ್ತೆಹಚ್ಚಲು ಮೈಸೂರು ಪೊಲೀಸರು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರವು ನಿಧಾನವಾಗಿ ಮಾದಕವಸ್ತುಗಳ ಹಬ್ ಆಗುತ್ತಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಹೆಚ್ಚುತ್ತಿದೆ.

48
10 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತು ಜಪ್ತಿ

ಎನ್‌ಸಿಬಿ ನಡೆಸಿದ ದಾಳಿ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ 25.6 ಲಕ್ಷ ರೂಪಾಯಿ ನಗದು, ಒಂದು ಕರ್ನಾಟಕ ನೋಂದಣಿ ಹೊಂದಿರುವ ಕಾರು ಹಾಗೂ 500 ಕಿಲೋಗ್ರಾಂಕ್ಕೂ ಅಧಿಕ ಪ್ರಮಾಣದ ವಿವಿಧ ರಾಸಾಯನಿಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ರಾಸಾಯನಿಕಗಳನ್ನು ಮಾದಕವಸ್ತು ತಯಾರಿಕೆಗೆ ಬಳಸಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

58
ನಾಲ್ವರು ಮಾದಕವಸ್ತು ಕಳ್ಳಸಾಗಣೆದಾರ ಬಂಧನ

ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಸೇರಿ ನಾಲ್ವರು ಮಾದಕವಸ್ತು ಕಳ್ಳಸಾಗಣೆದಾರರನ್ನು ಎನ್‌ಸಿಬಿ ಬಂಧಿಸಿದೆ. ಬಂಧಿತರಾದ ಎಲ್ಲ ಆರೋಪಿಗಳೂ ರಾಜಸ್ಥಾನದ ಜಲೋರ್ ಜಿಲ್ಲೆಯ ನಿವಾಸಿಗಳು ಎಂಬುದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ. ಪ್ರಮುಖ ಆರೋಪಿ ಜೈಲಲ್ಲಿದ್ದಾಗಲೇ ತನ್ನ ಸಂಬಂಧಿಯೊಬ್ಬರ ಮೂಲಕ ಮೈಸೂರಿನಲ್ಲಿ ಬಾಡಿಗೆ ಜಾಗವನ್ನು ಪಡೆದು, ಅಲ್ಲಿ ಡ್ರಗ್ ತಯಾರಿಕಾ ಲ್ಯಾಬ್ ಸ್ಥಾಪಿಸುವ ಪ್ಲಾನ್ ರೂಪಿಸಿದ್ದಾನೆ ಎಂದು ತನಿಖೆ ವೇಳೆ ಬಹಿರಂಗವಾಗಿದೆ.

68
ಮೈಸೂರೇ ಅವರಿಗೆ ಸುರಕ್ಷಿತ ತಾಣ

ಮೈಸೂರಿನಲ್ಲಿ ರಹಸ್ಯವಾಗಿ ಲ್ಯಾಬ್ ನಡೆಸಿ, ಅಲ್ಲಿ ತಯಾರಿಸಿದ ಮಾದಕವಸ್ತುಗಳನ್ನು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡುವ ಉದ್ದೇಶ ಈ ಗ್ಯಾಂಗ್ ಹೊಂದಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸಾಂಸ್ಕೃತಿಕ ಹಾಗೂ ಪ್ರವಾಸಿ ನಗರಿಯಾಗಿರುವ ಮೈಸೂರನ್ನು ಅಕ್ರಮ ಡ್ರಗ್ ಜಾಲದ ಸುರಕ್ಷಿತ ತಾಣವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿರುವುದು ಗಂಭೀರ ವಿಚಾರವಾಗಿದೆ.

78
ಈ ಹಿಂದೆ ಕೂಡ ಘಟಕ ಪತ್ತೆ

ಈ ಹಿಂದೆ ಕೂಡ ಮೈಸೂರಿನಲ್ಲಿ ಡ್ರಗ್ ಸಂಬಂಧಿತ ಘಟಕ ಪತ್ತೆಯಾಗಿದ್ದರೂ, ನಿರಂತರವಾಗಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಪೊಲೀಸ್ ನಿಗಾವ್ಯವಸ್ಥೆಯ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆ ಎಬ್ಬಿಸಿದೆ. ಡ್ರಗ್ ತಯಾರಿಕಾ ಘಟಕಗಳನ್ನು ಪತ್ತೆಹಚ್ಚುವಲ್ಲಿ ಮೈಸೂರು ಪೊಲೀಸರು ವಿಫಲರಾಗಿರುವುದು, ಹೊರಗಿನ ಸಂಸ್ಥೆಗಳೇ ಇಂತಹ ದೊಡ್ಡ ಜಾಲಗಳನ್ನು ಭೇದಿಸುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಹುಟ್ಟಿಸಿದೆ.

88
ಕಠಿಣ ಕ್ರಮ ಅಗತ್ಯ

ಒಟ್ಟಿನಲ್ಲಿ, ಮೈಸೂರು ಮಾದಕವಸ್ತುಗಳ ಅಕ್ರಮ ಜಾಲದ ಕೇಂದ್ರವಾಗುತ್ತಿದೆಯೇ ಎಂಬ ಆತಂಕಕಾರಿ ಬೆಳವಣಿಗೆಗಳು ಗಂಭೀರ ಚರ್ಚೆಗೆ ಕಾರಣವಾಗಿದ್ದು, ಇನ್ನು ಮುಂದೆ ಪೊಲೀಸ್ ಇಲಾಖೆ ಹಾಗೂ ಮಾದಕವಸ್ತು ನಿಯಂತ್ರಣ ಸಂಸ್ಥೆಗಳು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂಬ ಒತ್ತಾಯ ಜೋರಾಗಿದೆ.

Read more Photos on
click me!

Recommended Stories