ಶಿರಸಿಯ ಜಿಲ್ಲಾ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಇಲ್ಲಿಯ ಜೀವನ್ಮುಖಿ ಸಂಸ್ಥೆಯನ್ನು ಉದ್ಘಾಟಿಸಲೆಂದು 2009ರ ಮಾರ್ಚ್ 13ರಂದು ಶಿರಸಿಗೆ ಎಸ್ಪಿಬಿ ಆಗಮಿಸಿದ್ದರು. ಇಲ್ಲಿಯ ರಮಾನಂದ ಐನಕೈ, ನಾಗರಾಜ್ ಮಡಿವಾಳ, ಉಷಾ ಐನಕೈ, ಬಾಲಕೃಷ್ಣ ಗೌಡ, ಗಜಾನನ ಸಕಲಾತಿ ಇನ್ನಿತರರು ಜಂಟಿಯಾಗಿ ಕಟ್ಟಿದ್ದ ಸಂಸ್ಥೆಯು ಎಸ್ಪಿಬಿ ಗಾನಸುಧೆಯ ಮೂಲಕ ಉದ್ಘಾಟನೆಗೊಂಡಿತ್ತು.
undefined
ಅಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದ ಕಾರ್ಯಕ್ರಮದ ಮೆಲಕು ಹಾಕಿದ ಐನಕೈ, ಗಾಯಕರಾದ ಅರ್ಚನಾ ಉಡುಪ, ಎಂ.ಡಿ. ಪಲ್ಲವಿ ಅವರೂ ಎಸ್ಪಿ ಅವರ ಜೊತೆಗೆ ಬಂದಿದ್ದರು. ಎದೆ ತುಂಬಿ ಹಾಡುವೆನು ಹಿನ್ನೆಲೆಯ ವೇಣುಗೋಪಾಲ ತಂಡವೂ ಕಾರ್ಯಕ್ರಮಕ್ಕೆ ಬಂದಿತ್ತು. ಧ್ವನಿ ಬೆಳಕಿನ ತಂಡವೂ ಬೆಂಗಳೂರಿಂದ ಬಂದಿತ್ತು. ಸಾಮಾನ್ಯವಾಗಿ ಒಂದು ಕಾರ್ಯಕ್ರಮದಲ್ಲಿ ಆರೆಂಟು ಹಾಡು ಹಾಡುತ್ತಿದ್ದ ಎಸ್‌ಪಿಬಿ ಅವರು ಅಂದು 19 ಹಾಡುಗಳನ್ನು ಹಾಡಿ ಹಿನ್ನೆಲೆ ಸಂಗೀತಗಾರರನ್ನೂ ಅಚ್ಚರಿಗೊಳಿಸಿದ್ದರು.
undefined
ಸ್ನೇಹದ ಕಡಲಲ್ಲಿ, ಜೊತೆಯಲಿ ಜೊತೆ ಜೊತೆಯಲಿ, ನಗುವ ನಯನ, ಮಾಮರವೆಲ್ಲೋ ಕೋಗಿಲೆಯೆಲ್ಲೋ, ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು, ನೂರೊಂದು ನೆನಪು, ಆಸೆಯ ಭಾವ, ಇದೇ ನಾಡು ಇದೇ ಭಾಷೆ ಸೇರಿದಂತೆ ಅನೇಕ ಪದ್ಯ ಹಾಡಿದ್ದ ಎಸ್ಪಿಬಿ ಸರಳತೆಯಲ್ಲೇ ಜಿಲ್ಲೆಯ ಜನರ ಮನವನ್ನೂ ಗೆದ್ದಿದ್ದರು. ಅಡಿಕೆ ಹಾರ, ಮಾರಿಕಾಂಬಾ ದೇವಿಯ ಮೂರ್ತಿ ಕೊಟ್ಟು ಗೌರವಿಸಿದ್ದೆವು. ಅಮ್ಮನ ಮೂರ್ತಿಯನ್ನು ತಲೆಯ ಮೇಲೆ ಎತ್ತಿ ಹಿಡಿದು ಗೌರವಿಸಿದ್ದರು ಎಂದರು.
undefined
ಕಾರ್ಯಕ್ರಮಕ್ಕೂ ಮುನ್ನ ಮಲೆನಾಡ ಕಬ್ಬಿನ ರಸದಿಂದ ಮಾಡಿದ್ದ ತೊಡದೇವಿಗೆ ಹಾಲು, ತುಪ್ಪ ಹಚ್ಚಿಕೊಂಡು ಸವಿದಿದ್ದ ಎಸ್ಪಿಬಿ ರುಚಿಯನ್ನು ವೇದಿಕೆಯಲ್ಲೂ ಬಣ್ಣಿಸಿದ್ದರು. ಜಿಲ್ಲೆಗೆ ಇನ್ನೊಮ್ಮೆ ಬರುತ್ತೇನೆಂದು ಹೇಳಿದ್ದರು. ತದನಂತರ ಮಾರಿಕಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಚನ್ನೈಗೆ ತೆರಳಿದ್ದ ಅವರು, ಅಲ್ಲಿಯೂ ಶಿರಸಿಯ ಆತಿಥ್ಯ ಕೊಂಡಾಡಿದ್ದರು ಎಂದು ಐನಕೈ ರಮಾನಂದ ಹೆಗಡೆ ಸ್ಮರಿಸಿಕೊಂಡರು.
undefined
ಹತ್ತು ವರ್ಷಗಳ ಹಿಂದೆ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದಿದ್ದ ಎಸ್ಪಿಬಿ ಅವರ ನೇರ ಗಾಯನ ವೀಕ್ಷಿಸಲೆಂದು ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಟಿವಿಯಲ್ಲಿ ಬರುತ್ತಿದ್ದ ಎದೆತುಂಬಿ ಹಾಡುವೆನು ಕಾರ್ಯಕ್ರಮ ಮನೆ ಮನೆ ತಲುಪಿತ್ತು ಎಂಬುದಕ್ಕೆ ಎಸ್ಪಿ ಸರಳತೆಯೆ ಮುಖ್ಯ ಕಾರಣವಾಗಿತ್ತು.
undefined