ಮಣಿಪಾಲ ಮಾಧವ ಕೃಪಾ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಇಶಿತಾ ಆಚಾರ್, 2 ತಿಂಗಳ ಲಾಕ್‌ಡೌನ್ ಸಂದರ್ಭದಲ್ಲಿ ತಾನು ಮನೆಯಲ್ಲಿಯೇ ಹೊಲಿದ 300 ಮಾಸ್ಕ್‌ಗಳನ್ನು ಆರ್ಮಿಯ ಯೋಧರಿಗೆ ಕಳುಹಿಸಿದ್ದಳು.
ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಇಶಿತಾಳ ತಾಯಿ ನಂದಿತಾ ಆಚಾರ್ ಅವರಿಗೆ ಪತ್ರ ಬರೆದಿದ್ದು, ದೇಶದ ಸೈನಿಕರ ಬಗ್ಗೆ ನಿಮ್ಮ ಮಗಳು ಇಶಿತಾಳ ಭಾವನೆ ಮತ್ತು ಕೋವಿಡ್ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತೆಯ ಬಗ್ಗೆ ಆಕೆಯ ಜಾಗೃತಿಯು ಮೆಚ್ಚುವಂತಹದ್ದು ಎಂದು ಹೇಳಿದ್ದಾರೆ.
ಶಾಲೆಯಲ್ಲಿ ಸ್ಕೌಟ್ ಶಿಕ್ಷಕರು, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೀಡುವುದಕ್ಕಾಗಿ ಮಾಸ್ಕ್ ತಯಾರಿಸುವಂತೆ ಹೇಳಿದ್ದರು. ಅದರಂತೆ ಇಶಿತಾ ಆಚಾರ್ ಮಾಸ್ಕ್‌ಗಳನ್ನು ತಯಾರಿಸಿ ನೀಡಿದ್ದರು. ಇದರಿಂದ ಸ್ಫೂರ್ತಿಗೊಂಡು ಇನ್ನಷ್ಟು ಮಾಸ್ಕ್ ತಯಾರಿಸಿದ್ದಳು.
ಮಾಸ್ಕ್‌ಗಳನ್ನು ಅರ್ಹರಿಗೆ ನೀಡಬೇಕು ಎಂದು ಯೋಚಿಸಿದೆ, ಯಾರೋ ಸೈನಿಕರಿಗೆ ನೀಡಿ ಎಂದು ಸಲಹೆ ಮಾಡಿದರು. ಆದರೆ ನಮ್ಮಲ್ಲಿ ಆರ್ಮಿಯ ವಿಳಾಸ ಇರಲಿಲ್ಲ, ಇಂಟರ್ ನೆಟ್‌ನಲ್ಲಿ ಹುಡುಕಿದಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕಚೇರಿ ವಿಳಾಸ ಸಿಕ್ಕಿತು. ಅದಕ್ಕೆ 300 ಮಾಸ್ಕ್‌ಗಳನ್ನು ಕೊರಿಯರ್ ಮಾಡಿದೆವು. ಅದು ತಲುಪಿರಬಹುದು ಎಂಬ ವಿಶ್ವಾಸದಲ್ಲಿದ್ದೆವು, ಆದರೆ ರಾಜನಾಥ್ ಸಿಂಗ್ ಅವರೇ ಪತ್ರ ಬರೆಯುತ್ತಾರೆ ಎಂದು ಯೋಚಿಸಿಯೇ ಇರಲಿಲ್ಲ, ಪತ್ರ ಬಂದದ್ದು ನೋಡಿ ತುಂಬಾನೇ ಖುಷಿಯಾಗಿದೆ ಎಂದು ಇಶಿತಾ ರೋಮಾಂಚಿತರಾಗಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ್ದಾಳೆ.
ಕೊರಿಯರ್‌ನವರು, ಪ್ಯಾಕೇಟ್ ಮೇಲೆ ರಾಜನಾಥ್ ಸಿಂಗ್ ಅವರ ಫೋನ್ ನಂಬರ್ ಬರೆಯಬೇಕು, ಇಲ್ಲದಿದ್ದಲ್ಲಿ ಈಗ ಲಾಕ್‌ಡೌನ್ ಇರುವುದರಿಂದ, ನಮ್ಮಲ್ಲಿ ಸಿಬ್ಬಂದಿಗಳು ಕಡಿಮೆಯಾಗಿರುವುದರಿಂದ, ಕೊರಿಯರ್ ತಲುಪುತ್ತದೆಯೋ ಹೇಳುವುದಕ್ಕಾಗುವುದಿಲ್ಲ ಎಂದು ಹೇಳಿದ್ದರು. ಆದರೂ ನಾವು ಕಳಿಸಿದ್ದೆವು. 2 ತಿಂಗಳಾಯಿತು, ತಲುಪಿದೆಯೋ ಇಲ್ಲವೋ ಗೊತ್ತಾಗಲಿಲ್ಲ. ಆದರೆ ಈಗ ಪತ್ರ ಬಂದಾಗ, ನಾವು ಕಳುಹಿಸಿದ ಮಾಸ್ಕ್ ಸದಾ ನಮ್ಮನ್ನು ರಕ್ಷಿಸುತ್ತಿರುವ ಸೈನಿಕರಿಗೆ ನಮ್ಮದೊಂದು ಸಣ್ಣ ಕೊಡುಗೆ ತಲುಪಿದೆ ಎಂದು ಖಾತರಿಯಾಯಿತು, ಅದೇ ದೊಡ್ಡ ಸಂತೋಷ ಎಂದು ನಂದಿತಾ ಆಚಾರ್ ಹೇಳಿದ್ದಾರೆ.
ಉಡುಪಿಯ ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳು ಸುಮಾರು 15 ಸಾವಿರ ಮಾಸ್ಕ್‌ಗಳನ್ನು ಹೊಲಿದಿದ್ದಾರೆ, ಅವುಗಳನ್ನು ಎಸ್ಸೆಸ್ಸೆಲ್ಸಿ - ಪಿಯುಸಿ ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳಿಗೆ ನೀಡಿದ್ದೇವೆ. ಇಶಿತಾ ಅದನ್ನು ಇನ್ನೂ ಮುಂದುವರಿಸಿ 300 ಮಾಸ್ಕ್‌ಗಳನ್ನು ಮನೆಯಲ್ಲಿ ತಯಾರಿಸಿ ಆರ್ಮಿಗೆ ಕಳುಹಿಸಿದ್ದಾಳೆ, ಇದು ಬಹಳ ಹೆಮ್ಮೆಯ ವಿಷಯ ಎನ್ನುತ್ತಾರೆ ಆಕೆಯ ಸ್ಕೌಟ್ ಶಿಕ್ಷಕ ನಿತಿನ್.