ಬನ್ನೂರು ಪಂಚಾಯಿತಿಯಲ್ಲಿ ತುಕ್ಕು ಹಿಡಿದ ಸೇತುವೆ; ಅಪಾಯವಿದ್ದರೂ ಕಣ್ಮುಚ್ಚಿ ಕುಳಿತ ಸರ್ಕಾರ!

First Published | Oct 13, 2024, 8:40 PM IST

ಚಿಕ್ಕಮಗಳೂರು ಜಿಲ್ಲೆಯ ಜಕ್ಕಣಕ್ಕಿ ಗ್ರಾಮದಲ್ಲಿ ಶಿಥಿಲಗೊಂಡಿರುವ ಕಿರುಸೇತುವೆಯಿಂದಾಗಿ ಗ್ರಾಮಸ್ಥರು ಪ್ರಾಣಭಯದಲ್ಲಿ ಸಂಚರಿಸುವಂತಾಗಿದೆ. ಸೇತುವೆ ಕುಸಿದು ಬೀಳುವ ಭೀತಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಸಂಪರ್ಕ ಕಡಿತವಾಗುವ ಭೀತಿಯೂ ಎದುರಾಗಿದೆ.

ಇಲ್ಲಿ ಕಾಣುತ್ತಿರುವ ತುಕ್ಕು ಹಿಡಿದಿರುವ ಹಾಗೂ ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿರುವ ಈ ಕಿರುಸೇತುವೆ ನಿರ್ಮಾಣವಾಗಿ ಹಲವು ದಶಕಗಳೆ ಕಳೆದಿದೆ. ಇಲ್ಲಿ ನಿತ್ಯ ಸಂಚಾರಿಸುವ ಜನರು ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚಾರ ಮಾಡುವ ದುಸ್ಥಿತಿ ಎದುರಾಗಿದೆ. ಆದರೆ, ಇದನ್ನು ದುರಸ್ತಿ ಮಾಡಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಿದ್ದು, ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್ ಅರ್ ಪುರ ತಾಲೂಕಿನ ಬನ್ನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಜಕ್ಕಣಕ್ಕಿ ಗ್ರಾಮದಲ್ಲಿ ಕಿರುಸೇತುವೆ ಶಿಥಲ ವ್ಯವಸ್ಥೆಗೆ ತಲುಪಿ ಹಲವು ದಶಕಗಳೆ ಕಳೆದಿದೆ. ಇರೋದು ನಾಲ್ಕು ಅಡಿ ಕಿರು ಸೇತುವೆ. ಕೆಳ ಭಾಗದಲ್ಲಿ ತುಕ್ಕು ಹಿಡಿದಿರೋ ಕಬ್ಬಿಣ, ಶಿಥಲ ವ್ಯವಸ್ಥೆಗೆ ತಲುಪಿ ಯಾವಾಗ ಕುಸಿದು ಬಿಳಿತೋ ಎನ್ನುವ ಪರಿಸ್ಥಿತಿಗೆ ತಲುಪಿದೆ. ಆದರೆ, ಇದನ್ನು ಸರ್ಕಾರದ ಯಾವುದೇ ಅಧಿಕಾರಿಗಳು ನಿರ್ವಹಣೆ ಮಾಡದೇ ನಿರಲ್ಕ್ಷ್ಯವಹಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಪಂಚಾಯಿತಿಗೆ, ತಾಲೂಕು ಕಚೇರಿಗೆ ದುರಸ್ತಿ ಮಾಡುವಂತೆ ಅಥವಾ ಇದನ್ನು ತೆರವುಗೊಳಿಸಿ ಹೊಸ ಸೇತುವೆ ಕಟ್ಟುವಂತೆ ಮನವಿ ಮಾಡಿದರೂ ಯಾವುದೇ ಕವಡೆ ಕಾಸಿನ ಕಿಮ್ಮತ್ತೂ ಕೊಟ್ಟಿಲ್ಲ.

Tap to resize

ಜಕ್ಕಣಕ್ಕಿ ಗ್ರಾಮದಲ್ಲಿ ಕಿರುಸೇತುವೆ ನಿರ್ಮಾಣವಾಗಿ 15ರಿಂದ 20 ವರ್ಷಗಳೆ ಕಳೆದಿದೆ. ಈ ಕಿರು ಸೇತುವೆ ದಾಟಿಕೊಂಡೇ ಹೋದರೆ ಮುಂದಿನ  10 ರಿಂದ 20 ಮನೆಗಳಿಗೆ ಹೋಗೋಕೆ ಸಾಧ್ಯ. ಆದರೆ, ಕೆಲವು ವರ್ಷದಿಂದ ಈ ಕಿರು ಸೇತುವೆ ಶಿಥಿಲವಾಗಿದೆ. ಮೊದಲೇ ಈ ಕಿರುಸೇತುವೆ ಚಿಕ್ಕದ್ದು , ಸೇತುವೆಯ ಅಕ್ಕ ಪಕ್ಕದಲ್ಲಿ ತಡೆಗೋಡೆಯು ಇಲ್ಲ, ಅಪ್ಪಿತಪ್ಪಿ ಬೈಕ್ , ವಾಹನದಲ್ಲಿ ಹೋಗುವಾಗ ಆಯತಪ್ಪಿ  ಕೆಳಗೆ ಬಿದ್ರೆ ಅಪಾಯ ಗ್ಯಾರಂಟಿ. ಇನ್ನು ಮಳೆಗಾಲದ ಅವಧಿ ಆಗಿದ್ದರೆ, ಜೀವವೇ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಇದೇ ಶಿಥಲಗೊಂಡಿರುವ ಸೇತುವೆಯಿಂದ ಬೈಕ್ ಓಡಿಸಬೇಕು. ಈ ವೇಳೆ ಕಣ್ಣು ಮಿಟುಕಿಸದಂತೆ ಹೋಗಬೇಕು. ಕೊಂಚ ಯಾಮಾರಿದರೂ ಧರೆಗೆ ಬಿಳೋದು ಪಿಕ್ಸ್. ಇನ್ನು ಈ ಮೇಲ್ಸೇತುವೆ ಪೂರ್ಣವಾಗಿ ಶಿಥಿಲಗೊಂಡಿದ್ದು, ಜನರು ಕಾಲ್ನಡಿಗೆಯಲ್ಲಿ ಹೋಗುವುದಕ್ಕೆ ಭಯ ಪಡುವಂತಾಗಿದೆ. ಈ ಸೇತುವೆ ಯಾವಾಗ ಕುಸಿದು ಬಿಳುತ್ತೋ ಅನ್ನೋ ಆತಂಕ ಮಲೆನಾಡಿನಲ್ಲಿ ಜನರಲ್ಲಿ ಮನೆ ಮಾಡಿದೆ.

ಇದನ್ನೂ ಓದಿ: ಭದ್ರಾ ವನ್ಯಜೀವಿ ಅಭಯಾರಣ್ಯಕ್ಕೆ 25ರ ಸಂಭ್ರಮ: ಹುಲಿ, ಆನೆಗಳ ಎಷ್ಟಿದೆ ಗೊತ್ತಾ?

ಇನ್ನೂ ಈ ಸೇತುವೆ ಮೇಲೆ ಜನರು ಓಡಾಡೋಕೆ ಭಯಪಡುವ ವಾತವರಣವಿದೆ. ಅದು ಯಾವಾಗ ಕುಸಿದು ಬೀಳುತ್ತೋ ಎಂಬ ಭೀತಿ ಜಕ್ಕಣಕ್ಕಿ ಗ್ರಾಮಸ್ಥರನ್ನು ಆವರಿಸಿದೆ. ಮಳೆಗಾಲದಲ್ಲಿ ಹಳ್ಳ ಹರಿಯುವುದಕ್ಕೆಂದು ನಿರ್ಮಾಣ ಮಾಡಲಾದ ಈ ಕಿರು ಸೇತುವೆಯ ಮೇಲ್ಬಾಗದಲ್ಲಿ ಹಳ್ಳದ ನೀರು ತುಂಬಿ ಹರಿಯುತ್ತದೆ. ಮಳೆಗಾಲದಲ್ಲಿ ಸತತವಾಗಿ ಸೇತುವೆ ನೀರಿನಲ್ಲಿ ಮುಳುಗುತ್ತಿರುವುದರಿಂದ ಕಿರು ಸೇತುವೆಯ ಬಹುತೇಕ ಕಬ್ಬಿಣದ ಸರಳುಗಳು ತುಕ್ಕು ಹಿಡಿದ್ದು, ಸಿಮೆಂಟ್ ಕೂಡ ಶಕ್ತಿ ಕಳೆದುಕೊಂಡಿದೆ. ಇನ್ನು ಕೆಲವು ಬಾರಿ ಬೈಕ್‌ನಲ್ಲಿ ಭಾರದ ವಸ್ತುಗಳನ್ನು ತಂದೆ ಕಿರು ಸೇತುವೆ ಅಲುಗಾಡಿದ ಅನುಭವ ಆಗುತ್ತದೆ. ಇದರಂದ ಜನರು ಭಯದಲ್ಲಿಯೇ ಸಂಚಾರ ಮಾಡುತ್ತಿದ್ದಾರೆ.

ಸಂಪರ್ಕ ಕಡಿತವಾಗುವ ಭೀತಿ :
ಒಂದು ವೇಳೆ ಈ ಸೇತುವೆ ಕುಸಿದರೆ ಹಳ್ಳದ ಆಚೆಗಿರುವ ಸಂಪರ್ಕ ಕಡಿತವಾಗುತ್ತದೆ. ಇನ್ನೂ ಪ್ರತಿ ಬಾರಿಯೂ ಚುನಾವಣೆ ಸಮಯದಲ್ಲಿ ಹಲವು ನಾಯಕರು ನಮಗೆ ಮತ ಹಾಕಿ ನಾವು ನಿಮ್ಮ ಸಮಸ್ಯೆ ಬಗೆಹರಿಸ್ತೇವೆ ಎಂದು ಭರವಸೆ ನೀಡುತ್ತಾರೆ. ಅವರು ಗೆದ್ದು ಆಯ್ಕೆಯಾಗಿ ಕುರ್ಚಿಯಲ್ಲಿ ಕುಳಿತುಕೊಂಡರೆ ಪುನಃ ಚುನಾವಣೆ ಸಂದರ್ಭದಲ್ಲಿಯೇ ಇಲ್ಲಿಗೆ ಬರೋದು ಎಂದು ಜಕ್ಕಣಕ್ಕಿ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಾರೆ. ಸರ್ಕಾರದಿಂದ ಸುಸಜ್ಜಿತ ಮತ್ತು ಹೈಫೈ ಸೌಲಭ್ಯಗಳನ್ನು ಒದಗಿಸಲಾಗದಿದ್ದರೂ, ಜೀವನ ಮಾಡುವುದಕ್ಕೆ ಅನುಕೂಲ ಆಗುವ ಕನಿಷ್ಠ ಸೌಲಭ್ಯಗಳನ್ನಾದರೂ ಮಲೆನಾಡಿಗರಿಗೆ ಕಲ್ಪಿಸಲಿ ಎನ್ನುವುದು ಇಲ್ಲಿನವರ ಒತ್ತಾಯವಾಗುದೆ. ಇನ್ನು ಈ ಕಿರುಸೇತುವೆ ಸರಿಪಡಿಸಲಿಲ್ಲ ಅಂದ್ರೆ ಮುಂದೆ ಹೋರಾಟದ ಉತ್ತರ ನೀಡ್ತೇವೆ ಅಂತಾ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

Latest Videos

click me!