ಬೆಂಗಳೂರಿನಲ್ಲಿವೆ 2320 ಅನಧಿಕೃತ ಪಿಜಿಗಳು: ಒಂದೇ ದಿನ 21 ಪಿಜಿ ಮುಚ್ಚಿದ ಬಿಬಿಎಂಪಿ!

First Published Oct 10, 2024, 5:55 PM IST

ಬೆಂಗಳೂರು (ಅ.10): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬರೋಬ್ಬರಿ 2,320 ಅನಧಿಕೃತ ಪೇಯಿಂಗ್ ಗೆಸ್ಟ್ (ಪಿಜಿ)ಗಳು ಇದ್ದು, ಬಿಬಿಎಂಪಿ ದಾಳಿಯ ವೇಳೆ ಒಂದೇ ದಿನ 21 ಪಿಜಿಗಳನ್ನು ಮುಚ್ಚಲಾಗಿದೆ. ನೀವು ಯಾವ ಪಿಜಿಯಲ್ಲಿದ್ದೀರಿ, ಅಧಿಕೃತವೇ ಅಥವಾ ಅನಧಿಕೃತ ಪಿಜಿ ಎಂಬುದನ್ನು ಈಗಲೇ ಲೈಸೆನ್ಸ್ ನೋಡಿ ಖಚಿತಪಡಿಸಿಕೊಳ್ಳಿ. ಇಲ್ಲವೆಂದರೆ ಬಿಬಿಎಂಪಿ ದಾಳಿಯಿಂದ ನೀವು ಬೀದಿ ಪಾಲಾಗಬಹುದು.

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಅಧಿಕೃತ ಹಾಗೂ ಅನಧಿಕೃತ ಪಿ.ಜಿಗಳಿಗೆ ಭೇಟಿ ನೀಡಿ ಪಾಲಿಕೆ ಮಾರ್ಗಸೂಚಿಗಳನ್ನು ಪಾಲಿಸದ ಪಿಜಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಇನ್ನು ಪಿಜಿ ನಡೆಸಲು ಲೈಸೆನ್ಸ್ ಪಡೆದಿದ್ದರೂ ಮಾರ್ಗಸೂಚಿ ಪಾಲನೆ ಮಾಡದ ಎಲ್ಲ ಪಿಜಿಗಳುಳಿಗೆ ನೋಟೀಸ್ ಜಾರಿ ಮಾಡಲಾಗುತ್ತಿದೆ. ಉಳಿದಂತೆ ಪಾಲಿಕೆಯಿಂದ ಲೈಸೆನ್ಸ್ ಪಡೆಯದೇ ನಡೆಸಲಾಗುತ್ತಿರುವ ಪಿಜಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಲಾಗುತ್ತಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ 2193 ಅಧಿಕೃತ ಪಿಜಿಗಳು: ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2193 ಅಧಿಕೃತ ಪಿ.ಜಿ.ಗಳಿರುತ್ತದೆ. ಇದರಲ್ಲಿ 1578 ಪಿ.ಜಿ.ಗಳು ಮಾರ್ಗಸೂಚಿಗಳಲ್ಲಿ ಸೂಚಿಸಿರುವ ಅಂಶಗಳನ್ನು ಪಾಲಿಸುತ್ತಿದ್ದು, 615 ಪಿ.ಜಿ.ಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವುದಿಲ್ಲ. ಮಾರ್ಗಸೂಚಿ ಗಳನ್ನು ಅನುಸರಿಸದ ಪಿ.ಜಿ.ಗಳನ್ನು ಸೇರಿ ಇಲ್ಲಿಯವರೆಗೆ 1011 ಅಧಿಕೃತ ಪಿ.ಜಿ. ಗಳಿಗೆ ನೋಟೀಸ್‌ನ್ನು ಜಾರಿ ಮಾಡಲಾಗಿರುತ್ತದೆ.

Latest Videos


ಬೆಂಗಳೂರಿನಲ್ಲಿ 2,320 ಅನಧಿಕೃತ ಪಿಜಿಗಳು: ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2320 ಅನಧಿಕೃತ ಪಿ.ಜಿ.ಗಳಿರುತ್ತದೆ. ಇದರಲ್ಲಿ 1674 ಪಿ.ಜಿ.ಗಳು ಮಾರ್ಗಸೂಚಿಗಳಲ್ಲಿ ಸೂಚಿಸಿರುವ ಅಂಶಗಳನ್ನು ಪಾಲಿಸುತ್ತಿರುತ್ತಾರೆ. 646 ಪಿ.ಜಿ.ಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವುದಿಲ್ಲ. ಮಾರ್ಗಸೂಚಿ ಗಳನ್ನು ಅನುಸರಿಸದ ಪಿ.ಜಿ.ಗಳನ್ನು ಸೇರಿ ಇಲ್ಲಿಯವರೆಗೆ 2320 ಅಧಿಕೃತ ಪಿ.ಜಿ. ಗಳಿಗೆ ನೋಟೀಸ್‌ನ್ನು ಜಾರಿ ಮಾಡಲಾಗಿರುತ್ತದೆ.

ಮಾರ್ಗಸೂಚಿ ಅನುಸರಿಸದ 21 ಪಿ.ಜಿ.ಗಳಿಗೆ ಬೀಗ: ಪಾಲಿಕೆಯಿಂದ ಉದ್ದಿಮೆ ಪರವಾನಿಗೆ ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವ ಹಾಗೂ ಮಾರ್ಗಸೂಚಿಗಳನ್ನು ಪಾಲಿಸದ ಪಿ.ಜಿ ಉದ್ದಿಮೆಗಳಿಗೆ 2/3 ಬಾರಿ ನೋಟೀಸ್ ನೀಡಿದ್ದರೂ ಕೂಡಾ ಯಾವುದೇ ಕ್ರಮಗಳನ್ನು ಪಾಲಿಸುಲುವಲ್ಲಿ ವಿಫಲರಾಗಿರುತ್ತಾರೆ. ಈ ಸಂಬಂಧ ಪಿಜಿಗಳನ್ನು ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 305 ಮತ್ತು 308ರಡಿಯಲ್ಲಿ ತಕ್ಷಣದಿಂದ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಅದರಂತೆ 1 ಅಧಿಕೃತ ಪಿಜಿ ಹಾಗೂ 20 ಅನಧಿಕೃತ ಸೇರಿ 21 ಪಿಜಿಗಳು ಮಾರ್ಗಸೂಚಿ ಅನುಸರಿಸದೇ ಇರುವ ಕಾರಣ ಮುಚ್ಚಲಾಗಿದೆ.

ಪೇಯಿಂಗ್ ಗೆಸ್ಟ್(PGs)ಗಳು ಅನುಸರಿಸಬೇಕಾದ ಮಾರ್ಗಸೂಚಿಗಳು:
1. ಪೇಯಿಂಗ್ ಗೆಸ್ಟ್ ಗಳ ಪ್ರವೇಶ, ನಿರ್ಗಮನ ಮತ್ತು ಆವರಣಗಳ ಸುತ್ತಮುತ್ತಲೂ ನಡೆಯುವ ಘಟನೆಗಳನ್ನು ಚಿತ್ರೀಕರಿಸುವ ಸಿ.ಸಿ ಟಿ.ವಿ. ಗಳನ್ನು ಅಳವಡಿಸಿ, ಸಿ.ಸಿ ಟಿ.ವಿ ವೀಡಿಯೋ ಮತ್ತು ಫೋಟೇಜ್‌ಗಳನ್ನು 30 ದಿನಗಳ ಬ್ಯಾಕಪ್ ಇರುವಂತೆ ಅಳವಡಿಸುವುದು.
2. ವಾಸಕ್ಕೆ ಸಂಬಂಧಿತ ಕಟ್ಟಡದ ನಿಯಮಗಳ ಪ್ರಕಾರ, ಪ್ರತಿಯೊಬ್ಬ ನಿವಾಸಿಯು ತಲಾ 70 ಚದರ ಅಡಿಗಳಿಗಿಂತ ಕನಿಷ್ಠ ಜಾಗವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಟ್ಟಡದಲ್ಲಿ ಒದಗಿಸಲಾದ / ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ನಿರ್ಧಿಷ್ಟ ಸಂಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಿಗೆಯನ್ನು ನೀಡತಕ್ಕದ್ದು. 
3. ಪೇಯಿಂಗ್ ಗೆಸ್ಟ್ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯಗಳ ಸೇವೆಯನ್ನು ಒದಗಿಸಿರತಕ್ಕದ್ದು. 
4. ಪೇಯಿಂಗ್ ಗೆಸ್ಟ್ ಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿರತಕ್ಕದ್ದು. ಪ್ರತಿಯೊಬ್ಬ ನಿವಾಸಿಗೆ 135 ಐPಅಆ ನೀರಿನ ಲಭ್ಯತೆ ಇರುವುದನ್ನು ಮಾಲೀಕರು / ಉದ್ದಿಮೆದಾರರು ಖಚಿತಪಡಿಸಿಕೊಳ್ಳತಕ್ಕದ್ದು.
5. ಪೇಯಿಂಗ್ ಗೆಸ್ಟ್ ಗಳಲ್ಲಿ ಉದ್ದಿಮೆದಾರರು ತಮ್ಮದೇ ಆದ ಅಡುಗೆಮನೆ ಹೊಂದಿದ್ದಲ್ಲಿ, ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ 03 ತಿಂಗಳ ಅವಧಿಯೊಳಗೆ FSSAI ಇಲಾಖೆಯಿಂದ ಲೈಸೆನ್ಸ ಅನ್ನು ಪಡೆದುಕೊಳ್ಳತಕ್ಕದ್ದು.

6. ಉದ್ದಿಮೆದಾರರು / ಮಾಲೀಕರು ಪೇಯಿಂಗ್ ಗೆಸ್ಟ್ಗಳಲ್ಲಿ ವಾಸಿಸುವ ನಿವಾಸಿಗಳ ಸುರಕ್ಷತಾ ದೃಷ್ಟಿಯಿಂದ ಕನಿಷ್ಠ ಪಕ್ಷ 01 ಸಿಬ್ಬಂದಿಯನ್ನಾದರೂ ಕಡ್ಡಾಯವಾಗಿ 24*7 ಸೇವೆಯಡಿಯಲ್ಲಿ ನಿಯೋಜಿಸಿರತಕ್ಕದ್ದು.
7. ಪೇಯಿಂಗ್ ಗೆಸ್ಟ್ ಉದ್ದಿಮೆಗಳಿಗೆ ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಪತ್ರ ವಿತರಿಸುವ ಮುನ್ನ ಉದ್ದೇಶಿತ ಕಟ್ಟಡದಲ್ಲಿ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
8. ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ, ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯವಾಣಿ ಸಂಖ್ಯೆ : 1533 ಮತ್ತು ಪೋಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ : 101 ಅನ್ನು ಪ್ರದರ್ಶಿಸುವ ಫಲಕವನ್ನು ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
9. ಪೇಯಿಂಗ್ ಗೆಸ್ಟ್ ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ (First Aid Kits) ಗಳನ್ನು ಅಳವಡಿಸಿರತಕ್ಕದ್ದು.
10. ಪೇಯಿಂಗ್ ಗೆಸ್ಟ್ ನ ಮಾಲೀಕರು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿಗೊಳಿಸಲು ಕ್ರಮವಹಿಸತಕ್ಕದ್ದು.

click me!