Bengaluru: ಅಂಗಾಂಗ ದಾನದ ಬಗ್ಗೆ ಜಾಗೃತಿ ಹೆಚ್ಚಿಸಿ: ಸಚಿವ ಸುಧಾಕರ್‌

First Published Jan 29, 2022, 5:42 AM IST

ಬೆಂಗಳೂರು(ಜ.29):  ದೇಶದಲ್ಲಿ ಅಂಗಾಂಗ(Organ Donation) ಕಸಿಗೆ ಬೇಡಿಕೆ ಇರುವುದರಲ್ಲಿ ಶೇ.4ರಷ್ಟು ಮಾತ್ರ ಅಂಗಾಂಗಗಳು ಲಭ್ಯವಿದ್ದು, ರಕ್ತದಾನ ಮಾಡುವಂತೆಯೇ ಮೃತರಾದ ಬಳಿಕ ಅಂಗಾಂಗ ದಾನ ಮಾಡಲು ಮುಂದಾಗಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌(Dr K Sudhakar) ಮನವಿ ಮಾಡಿದರು.

ಸ್ಪರ್ಶ್‌ ಆಸ್ಪತ್ರೆಯು(Sparsh Hospital) ನೂತನವಾಗಿ ನಿರ್ಮಿಸಿರುವ ಬಹು ಅಂಗಾಂಗ ಕಸಿ ಕೇಂದ್ರ ಶುಕ್ರವಾರ ಚಾಲನೆ ನೀಡಿದ ಅವರು, ದೇಶದಲ್ಲಿ ಸುಮಾರು 2 ಲಕ್ಷ ಅಂಗಾಂಗ ಕಸಿಗೆ ಬೇಡಿಕೆ ಇದೆ. ಆದರೆ ಇದರಲ್ಲಿ ಶೇ.4ರಷ್ಟು ಅಂಗಾಂಗ ದೊರೆಯುತ್ತಿವೆ. ಹೀಗಾಗಿಯೇ, ಅನೇಕರು ಅಂಗಾಂಗಗಳು ದೊರೆಯದೆ ನಿಧನ ಹೊಂದುತ್ತಿದ್ದಾರೆ. ವ್ಯಕ್ತಿ ಮರಣ ಹೊಂದಿದ ಬಳಿಕ ತನ್ನ ಅಂಗಾಂಗಗಳ ಮೂಲಕ ಎಂಟು ಜನರ ಜೀವ ಉಳಿಸಲು ಸಾಧ್ಯವಿದೆ. ಆದರೆ ಅನೇಕ ತಪ್ಪು ತಿಳಿವಳಿಕೆಯಿಂದ ಅಂಗಾಂಗ ದಾನ ಕಡಿಮೆಯಾಗಿದೆ. ಬದುಕಿರುವಾಗ ರಕ್ತದಾನ ಮಾಡುವಂತೆಯೇ ಸತ್ತ ನಂತರ ಅಂಗಾಂಗ ದಾನ ಮಾಡುವುದು ಅಗತ್ಯ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದ ಸುಧಾಕರ್‌

ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಸ್ತ್ರಚಿಕಿತ್ಸಕರಿಗೆ ಅಂಗಾಂಗ ಕಸಿ ಬಗ್ಗೆ ತರಬೇತಿ ನೀಡುವ ಬಗ್ಗೆ ಸ್ಪಶ್‌ರ್‍ ಆಸ್ಪತ್ರೆಯ ತಜ್ಞರಿಗೆ ಕೋರಲಾಗಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಬಡ ಕುಟುಂಬಗಳ ವ್ಯಕ್ತಿಗಳಿಗೆ ಅಗತ್ಯವಿರುವವರಿಗೆ ಆಧುನಿಕ ತಂತ್ರಜ್ಞಾನ ಬಳಸಿ ಅಂಗಾಂಗ ಕಸಿ ಮಾಡಲು ಕ್ರಮ ವಹಿಸಲಾಗುವುದು. ನಾಲ್ಕು ಹಳೆ ಮೆಡಿಕಲ್‌ ಕಾಲೇಜುಗಳಲ್ಲಿ ಅಂಗಾಂಗ ಕಸಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಇನ್ನು ನಿಮ್ಹಾನ್ಸ್‌ನಲ್ಲಿ ಮೆದುಳು ನಿಷ್ಕ್ರೀಯ ಪ್ರಕರಣಗಳು ಹೆಚ್ಚಾಗಿ ಬರುತ್ತವೆ. ಆದ್ದರಿಂದ ಈ ಸಂಸ್ಥೆಯೊಂದಿಗೆ ಅಂಗಾಂಗ ಕಸಿಗಾಗಿ ಜತೆ ಸಹಭಾಗಿತ್ವ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ ಎಂದು ತಿಳಿಸಿದ ಸಚಿವರು 

ಅಂಗಾಂಗ ಕಸಿ ಕೇಂದ್ರವು ಆರ್‌.ಆರ್‌.ನಗರ ಸ್ಪರ್ಶ್‌ ಆಸ್ಪತ್ರೆಯಲ್ಲಿದ್ದು, 50ಕ್ಕೂ ಅಂಗಾಂಗ ಕಸಿ ತಜ್ಞರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಸ್ಪರ್ಶ್‌ ಆಸ್ಪತ್ರೆಗಳ ಮುಖ್ಯಸ್ಥ ಡಾ.ಶರಣ ಪ್ರಕಾಶ್‌ ಪಾಟೀಲ್‌ ಸೇರಿದಂತೆ ಇತರರಿದ್ದರು.

ಕಾರ್ಯಕ್ರಮದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್‌, ಕೊರೋನಾ ಮೂರನೇ ಅಲೆಯಲ್ಲಿ ರಾಜ್ಯದಲ್ಲಿ ಮರಣ ಪ್ರಮಾಣ ಶೇ.0.005 ಮಾತ್ರ ಇದೆ. ಸಹ ಅಸ್ವಸ್ಥತೆ ಸೇರಿದಂತೆ ಸಾವಿಗೆ ಹಲವು ಕಾರಣಗಳಿವೆ. ಇದಕ್ಕಾಗಿ ಡೆತ್‌ ಆಡಿಟ್‌ ನಡೆಸಲಾಗುತ್ತಿದೆ. ಆರೋಗ್ಯ ಕ್ಷೇತ್ರದ ವಿಷನ್‌ ವರದಿಯನ್ನು ಮುಖ್ಯಮಂತ್ರಿಗಳೇ ಬಿಡುಗಡೆ ಮಾಡಲಿದ್ದು, ದೂರದೃಷ್ಟಿಯನ್ನು ಒಳಗೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ ಈ ರೀತಿ ವರದಿ ತಯಾರಾಗಿದೆ. ಸುಮಾರು 750 ತಜ್ಞರು ಇದರ ರಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

click me!