ಕಲ್ಲು ಸಂಗ್ರಹಿಸಿ ಸಾಗಾಣಿಕೆ ಮಾಡುತ್ತಿದ್ದ ವಾಹನಗಳ ಮಾಲೀಕರು ಪರಾರಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಆನೆಗೊಂದಿ ವಿಜಯನಗರ ಪ್ರದೇಶದಲ್ಲಿ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಮಲ್ಲಾಪುರ ಮತ್ತು ರಾಂಪುರ ಗ್ರಾಮಗಳ ಗುಡ್ಡಬೆಟ್ಟಗಳ ಪ್ರದೇಶಕ್ಕೆ ಮೂರು ದಿನಗಳ ಹಿಂದೆ ಪೊಲೀಸರು ದಾಳಿ ನಡೆಸಿ, ಮೂರು ಲಾರಿಗಳನ್ನು ವಶ ಪಡಿಸಿಕೊಂಡಿದ್ದರು. ಪ್ರಸ್ತುತವಾಗಿ ಎರಡು ಟ್ರಕ್‌ಗಳನ್ನು ವಶಪಡಿಸಿದ್ದಾರೆ.
ತಾಲೂಕಿನ ಮಲ್ಲಾಪುರದಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ನಡೆಸಿ ಎಚ್ಚರಿಕೆ ನೀಡಿದ್ದರು. ಆದರೂ ನಿಂತಿರಲಿಲ್ಲ. ಮಹಾರಾಷ್ಟ್ರ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ರಾತ್ರೋರಾತ್ರಿ ವಾಹನಗಳಲ್ಲಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದ್ದರೂ ಮತ್ತೆ ಗಣಿಗಾರಿಕೆ ಪ್ರಾರಂಭಿಸಿ ಸಾಗಾಣಿಕೆ ನಡೆಸಿದ್ದಾರೆ.
ಈ ಹಿಂದೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ವಿಜಯಪುರ ಮತ್ತು ಕುಷ್ಟಗಿಯಲ್ಲಿ ಪೊಲೀಸರು ತನಿಖೆ ನಡೆಸಿ ದಂಡ ವಿಧಿಸಿದ್ದಾರೆ. ಅಲ್ಲದೇ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಒಂದು ಟ್ರಕ್‌ಗೆ . 70 ಸಾವಿರ ದಂಡ ಹಾಕಲಾಗಿದೆ.
ಮಲ್ಲಾಪುರದಲ್ಲಿ ವಿವಿಧ ರಾಜ್ಯಗಳಿಗೆ ಕಲ್ಲು ಸಾಗಿಸಲು ಸಂಗ್ರಹಿಸಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಟ್ರಕ್‌ಗಳ ಟ್ರಾಲಿ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಟ್ರಾಲಿಗಳನ್ನು ಬೇರೆ ಟ್ರ್ಯಾಕ್ಟರ್‌ಗಳ ಮೂಲಕ ಠಾಣೆಗೆ ತಂದಿದ್ದಾರೆ. ಅಲ್ಲದೇ ಅಲ್ಲಿರುವ ಕಲ್ಲುಗಳನ್ನು ರಕ್ಷಣೆ ಮಾಡಲು ಪೊಲೀಸರು ವಾಸ್ತವ್ಯ ಮಾಡಿದ್ದಾರೆ.
ಮಲ್ಲಾಪುರ, ರಾಂಪುರ, ಕಡೇಬಾಗಿಲು ಸೇರಿದಂತೆ ವಿವಿಧ ಗಣಿಗಾರಿಕೆ ಪ್ರದೇಶಕ್ಕೆ ಹೋಗಿ ಕಲ್ಲುಗಳನ್ನು ತರುವ ಬಹುತೇಕ ವಾಹನಗಳಿಗೆ ಸೂಕ್ತ ದಾಖಲೆಪತ್ರಗಳು, ಇನ್ಸುರೆನ್ಸ್ ಇರುವುದಿಲ್ಲ. ಪ್ರಾದೇಶಿಕ ಸಾರಿಗೆ ಇಲಾಖೆಯವರು ಕೆಲ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ದಾಖಲೆ ಇಲ್ಲದ ವಾಹನಗಳನ್ನು ಪೊಲೀಸ್ ಠಾಣೆಯಲ್ಲಿ ನಿಲ್ಲಿಸಲಾಗಿದೆ.
ಗಣಿಗಾರಿಕೆ ವಾಹನಗಳನ್ನು ಜಪ್ತಿ ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೆ ಒಪ್ಪಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ. ಈ ಪ್ರಕರಣ ಹಂಪಿ ಪ್ರಾಧಿಕಾರಕ್ಕೆ ಸಂಬಂಧಪಟ್ಟಿದೆ ಎಂದು ಹೇಳುವ ಗಣಿ ಇಲಾಖೆಯವರು ವಾಹನಗಳ ಜಪ್ತಿ ಮಾಡಿದ್ದು, ಇನ್ನು ಪ್ರಕರಣಗಳನ್ನುದಾಖಲಿಸಲು ಮೀನಮೇಷ ನಡೆಸಿದ್ದಾರೆ. ಪ್ರಸ್ತುತ ಗಣಿಗಾರಿಕೆ ಬಗ್ಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ವಾಹನಗಳ ಜಪ್ತಿ ಮಾಡಿದ್ದಾರೆ.
ಗಂಗಾವತಿ ತಾಲೂಕಿನ ಮಲ್ಲಾಪುರದಲ್ಲಿ ಗಣಿಗಾರಿಕೆಯ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಬಗ್ಗೆ ವಿಚಾರಣೆ ನಡೆದಿದ್ದು, ಇದು ಹಂಪಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತಿದ್ದರಿಂದ ಅವರಿಗೆ ತನಿಖೆ ನಡೆಸುವಂತೆ ತಿಳಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಫಯಾಜ್ ಅವರು ತಿಳಿಸಿದ್ದಾರೆ.
ಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಯಾವುದೇ ದಾಖಲೆಗಳು ಇಲ್ಲದೆ ಕಲ್ಲು ಗಣಿಗಾರಿಕೆ ವಾಹನಗಳು ಸಂಚರಿಸುತ್ತಿವೆ. ಇಂತಹ ವಾಹನಗಳನ್ನು ಜಪ್ತಿ ಮಾಡಿ ಪೊಲೀಸ್ ವ್ಯಾಪ್ತಿಗೆ ನೀಡಲಾಗಿದೆ. ದಂಡ ವಿಧಿಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶೇಖರ್ ಅವರು ಹೇಳಿದ್ದಾರೆ.