ಕೊಡಗು ಜಿಲ್ಲೆಯಲ್ಲಿ ಮಳೆ ಶುರುವಾಯಿತ್ತೆಂದರೆ ಮುಗಿಯಿತು. ಬಿಟ್ಟು ಬಿಡದೆ ಮಳೆ ಸುರಿಯುತ್ತದೆ. ಆದರೆ ಈಗಾಗಲೇ ಮಳೆಗಾಲ ಬಹುತೇಕ ಮುಗಿದಿದ್ದು, ಚಳಿಗಾಲ ಆರಂಭವಾಗಿದೆ. ಆದರೂ ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇಲಾಖೆಯ ಮುನ್ಸೂಚನೆಯಂತೆ ಈಗಾಗಲೇ ಗುರುವಾರ ರಾತ್ರಿ ಎಂಟು ಗಂಟೆಯಿಂದ ತಡರಾತ್ರಿವರೆಗೂ ಭಾರೀ ಗುಡುಗು, ಸಿಡಿಲು ಸಹಿತ ಮಳೆ ಸುರಿಯಿತು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲೂ ಗುಡುಗು ಸಿಡಿಲು ಸಹಿತ ಬಿಟ್ಟು ಬಿಡದೆ ಸುರಿಯಿತು. ಇದರಿಂದ ನರಕ ಚತುರ್ದಶಿಯ ದಿನವಾದ ಗುರುವಾರ ರಾತ್ರಿ ಪಟಾಕಿ ಸಿಡಿಸಿ ಹಬ್ಬ ಆಚರಿಸಲು ಸಿದ್ಧವಾಗಿದ್ದ ಜಿಲ್ಲೆಯ ಜನರಿಗೆ ಸಾಕಷ್ಟು ನಿರಾಶೆಯಾಯಿತು. ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆಯಾಗಿರುವುದರಿಂದ ಹಬ್ಬಕ್ಕೆ ಪಟಾಕಿ ವ್ಯಾಪಾರದಲ್ಲೂ ತೀವ್ರ ನಷ್ಟ ಎದುರಾಗಿದೆ.
ದೀಪಾವಳಿ ಹಬ್ಬಕ್ಕೆಂದೇ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಹತ್ತಾರು ಪಟಾಕಿ ಮಳಿಗೆಗಳನ್ನು ಹಾಕಲಾಗಿದೆ. ಆದರೆ ಪಟಾಕಿ ಖರೀದಿಸಲು ನಿರೀಕ್ಷೆಯಷ್ಟು ಜನರಿಲ್ಲದೆ ಅಂಗಡಿಗಳು ಬಿಕೋ ಎನ್ನುತ್ತಿವೆ. ಹಬ್ಬಕ್ಕೆ ಒಂದಿಷ್ಟು ಪಟಾಕಿ ಖರೀದಿಸಲೇಬೇಕಲ್ಲ ಎಂಬ ಕಾರಣದಿಂದ ಬೆರಳೆಣಿಕೆಯಷ್ಟು ಜನರು ಮಾತ್ರವೇ ಪಟಾಕಿ ಅಂಗಡಿಗಳತ್ತ ಮುಖ ಮಾಡುತ್ತಿದ್ದಾರೆ. ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಪ್ರತಿಕ್ರಿಯಿಸಿದ ಗ್ರಾಹಕರೊಬ್ಬರು ಎರಡು ದಿನಗಳಿಂದ ರಾತ್ರಿಯಾಯಿತ್ತೆಂದರೆ ಮಳೆ ಸುರಿಯುತ್ತಿದೆ. ಇದರಿಂದ ಪಟಾಕಿ ಹಚ್ಚಲು ಸಾಧ್ಯವಾಗದಂತಹ ಸ್ಥಿತಿ ಇದೆ. ಆದರೆ ಮಕ್ಕಳಿಗೆ ಬೇಕಲ್ಲ ಎಂಬ ಒಂದೇ ಕಾರಣಕ್ಕೆ ಒಂದಿಷ್ಟನ್ನು ಮಾತ್ರವೇ ಪಟಾಕಿ ಖರೀದಿಸಲು ಬಂದಿದ್ದೇವೆ ಎಂದಿದ್ದಾರೆ.
ಇನ್ನು ಪಟಾಕಿ ವ್ಯಾಪಾರಿಯೊಬ್ಬರು ನಿಯಮದಂತೆ ಹಸಿರು ಪಟಾಕಿಗಳನ್ನೇ ವ್ಯಾಪಾರಕ್ಕೆ ತಂದಿದ್ದೇವೆ. ಮೈಸೂರಿನಲ್ಲಿ ಮಾರಾಟ ಮಾಡುವ ದರದಲ್ಲೇ ಪಟಾಕಿ ಮಾರಾಟ ಮಾಡುತ್ತಿದ್ದೇವೆ. ಇಷ್ಟಾದರೂ ಪಟಾಕಿ ಖರೀದಿಸುವವರ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿ ಖರೀದಿಸುವವರ ಸಂಖ್ಯೆ ತುಂಬಾ ವಿರಳವಾಗಿದೆ. ಇದಕ್ಕೆಲ್ಲಾ ಕಾರಣ ಕಳೆದ ಎರಡು ದಿನಗಳಿಂದ ಮಳೆ ಬರುತ್ತಿರುವುದು. ಇನ್ನೂ ಎರಡು ದಿನ ಮಳೆ ಇದೆ ಎಂದು ಹೇಳಲಾಗಿದ್ದು ಪಟಾಕಿ ಖರೀದಿಗೆ ಜನರು ಹಿಂದು ಮುಂದು ನೋಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಹವಾಮಾನದ ಏರುಪೇರಿನಿಂದಾಗಿ ಅಕಾಲಿಕ ಭಾರೀ ಮಳೆ ಸುರಿಯುವ ಸೂಚನೆ ಇರುವುದರಿಂದ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಕುಂದು ತಂದಿದೆ.