ಭೀಮಾ ನೀರಿನಿಂದ ಯಾದಗಿರಿ ಸಮೀಪದ ಹೆಡಗಿಮುದ್ರಾ, ನಾಯ್ಕಲ್ ಗ್ರಾಮಗಳ ಕೆಲ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದೆ. ಸನ್ನತಿ ಬ್ಯಾರೇಜಿನಿಂದ 2.85 ಲಕ್ಷ ಕ್ಯುಸೆಕ್ ನೀರನ್ನು ಭೀಮಾ ನದಿಗೆ ಹರಿಬಿಟ್ಟಿದ್ದರಿಂದ, ಇದಕ್ಕೆ ಸಮೀಪದ ಯಾದಗಿರಿ ಜಿಲ್ಲೆಯ ಹುರಸಗುಂಡಗಿ ಗ್ರಾಮಕ್ಕೆ ಹಿನ್ನೀರು ಬಡಿದು 25ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ನಗರದ ರೈಲ್ವೆ ಹಳಿಯವರೆಗೂ ನೀರು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಯಾದಗಿರಿಯಿಂದ ಶಹಾಪೂರ ಮಾರ್ಗದ ಗುರುಸುಣಗಿ, ನಾಯ್ಕಲ್ ಕಡೆಗಳಲ್ಲಿ ರಸ್ತೆಯ ಮೇಲೂ ನೀರು ನುಗ್ಗಿದೆ. ಹೊಲಗದ್ದೆಗಳು ಜಲಾವೃತಗೊಂಡು, ಎದೆಮಟ್ಟದವರೆಗೆ ಬಂದಿದ್ದರಿಂದ ಜಮೀನುಗಳ ನದಿಪಾತ್ರದಂತೆ ಭಾಸವಾಗುತ್ತಿದ್ದವು.
ಹುಣಸಗಿ ತಾಲೂಕಿನ ನಾರಾಯಣಪೂರ ಜಲಾಶಯದಿಂದ 1.40 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಕಲಬುರಗಿಯ ಸನ್ನತಿ ಬ್ಯಾರೇಜಿನಿಂದ ಭೀಮಾ ನದಿಗೆ 3.20 ಲಕ್ಷ ಕ್ಯುಸೆಕ್ ನೀರು ಹರಿಬಿಟ್ಟಿದ್ದರಿಂದ ಜಿಲ್ಲೆಯ ಭೀಮಾ ನದಿ ಪಾತ್ರಗಳು ತುಂಬಿ ಹರಿಯುತ್ತಿವೆ.
ಅ.1ರಿಂದ ಅ.15ರವರೆಗೆ ಸುರಿದ ಮಳೆಗೆ ಜಿಲ್ಲೆಯಲ್ಲಿ ಒಟ್ಟು 2391 ರೈತರ 2163 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಭತ್ತ, ತೊಗರಿ, ಹತ್ತಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ
ಭೀಮಾ ಪ್ರವಾಹದಿಂದ ನಾಯ್ಕಲ್, ಬಬಲಾದ್, ಬೀರನೂರು, ಹುರಸಗುಂಡಗಿ, ಮಾಚನೂರು, ಶಿವನೂರು, ಕೊಂಗಂಡಿ, ಅರ್ಜುಣಗಿ, ಗಡ್ಡೆಸೂಗೂರು, ಹಾಲಗೇರಾ, ಜೋಳದಡಗಿ, ಸೂಗೂರು ಕಡೆಗಳಲ್ಲಿ 307 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
2163 ಹೆಕ್ಟೇರ್ ಪ್ರದೇಶದಲ್ಲಿ ಭತ್ತ 614.10 ಹೆಕ್ಟೇರ್, ತೊಗರಿ 686.92 ಹೆಕ್ಟೇರ್, ಹತ್ತಿ 780.50 ಹೆಕ್ಟೇರ್, ಸಜ್ಜೆ 26.48 ಹೆಕ್ಟೇರ್, ಕಬ್ಬು 12.17 ಹೆಕ್ಟೇರ್, ಮೆಣಸಿನಕಾಯಿ 27.44 ಹೆಕ್ಟೇರ್ ಹಾಗೂ ಇತರೆ ತೋಟಗಾರಿಕೆ ಬೆಳೆಗಳು 16.32 ಹೆಕ್ಟೇರ್ ಪ್ರದೇಶದಲ್ಲಿ ನಷ್ಟವಾಗಿದೆ ಎಂದು ಅ.15ರವರೆಗೆ ಅಂದಾಜಿಸಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಅ.1ರಿಂದ 15ರವರೆಗೆ ವಾಡಿಕೆ ಮಳೆಗಿಂತ ಶೇ.24 ರಷ್ಟುಪ್ರಮಾಣ ಹೆಚ್ಚಿನ ಮಳೆಯಾಗಿದ್ದರೆ, ಕಳೆದ ಏಳು ದಿನಗಳ ಅವಧಿಯಲ್ಲಿ ಶೇ.165 ರಷ್ಟು ಹೆಚ್ಚಳದ ಮಳೆಯಾಗಿದೆ.
1 ರಿಂದ ಅ.15ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 69 ಮಿ.ಮೀ. ಇದ್ದರೆ, 86 ಮಿ.ಮೀ ಮಳೆ ಸುರಿದಿದೆ. ಶೇ.24 ರಷ್ಟು ಹೆಚ್ಚಳವಾದರೆ, ಅ.8 ರಿಂದ ಅ.15 ರವೆರೆಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ವಾಡಿಕೆ ಮಳೆ 28 ಮಿ.ಮೀ.ನಷ್ಟಿದ್ದರೆ 74 ಮಿ.ಮೀ. ಮಳೆ ಸುರಿದಿದ್ದು, ಶೇ.165 ರಷ್ಟು ಪ್ರಮಾಣದಲ್ಲಿ ಹೆಚ್ಚಳ.
ಬಸವ ಸಾಗರದಿಂದ 1.82 ಲಕ್ಷ ಕ್ಯೂಸೆಕ್, ಸನ್ನತಿ ಬ್ಯಾರೇಜಿನಿಂದ 2.85 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
ಆಹಾರಧಾನ್ಯಗಳು ನೀರುಪಾಲು, ನದಿಪಾತ್ರದಂತಾದ ಹೊಲಗದ್ದೆಗಳು