ಕಳೆದ ಮೂರು ದಿನಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ಕುರಿತು (ಕನ್ನಡಪ್ರಭ-ಸುವರ್ಣ ನ್ಯೂಸ್.ಕಾಂ ಸೆ. 16, 17 ಮತ್ತು 18ರಂದು) ಸರಣಿ ಸುದ್ದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಶುಕ್ರವಾರ ಜಂಟಿಯಾಗಿ ದಾಳಿ ನಡೆಸಿ ಬೇರೆ ರಾಜ್ಯಗಳಿಗೆ ಕಲ್ಲು ಸಾಗಿಸುತ್ತಿದ್ದ ಮೂರು ಲಾರಿಗಳನ್ನು ವಶಕ್ಕೆ ತೆಗೆದುಕೊಂಡರು.
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಆನೆಗೊಂದಿ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಯುನೆಸ್ಕೋ ವ್ಯಾಪ್ತಿಯಲ್ಲಿ ಗಣಿಗಾರಿಕೆ ಅವ್ಯಾಹತ, ಪಾಪಯ್ಯ ಸುರಂಗಕ್ಕೆ ಧಕ್ಕೆ ತಂದ ಗಣಿಗಾರಿಕೆ ಮತ್ತು ಗಣಿಗಾರಿಕೆ ಸ್ಫೋಟಕದಿಂದ ನಲುಗುತ್ತಿರುವ ಪ್ರಾಣಿಗಳು ಎನ್ನುವ ಸರಣಿ ಸುದ್ದಿಯ ಬೆನ್ನ ಹಿಂದೆಯೇ ಎಚ್ಚೆತ್ತುಕೊಂಡು ಹಂಪಿ ಪ್ರಾಧಿಕಾರ, ಕಂದಾಯ ಇಲಾಖೆಯ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಮಲ್ಲಾಪುರ ಗಣಿ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ. ಈ ತಂಡ ಪ್ರವೇಶ ಮಾಡುತ್ತಿದ್ದಂತಯೇ ಗಣಿಗಾರಿಕೆಯಲ್ಲಿ ತೊಡಗಿದ್ದ ಕೆಲವರು ಪರಾರಿಯಾಗಿದ್ದಾರೆ. ನಂತರ ಮಲ್ಲಾಪುರ ಗ್ರಾಮದಲ್ಲಿ ಮೂರು ಲಾರಿಗಳಲ್ಲಿ ಕಲ್ಲುಗಳನ್ನು ತುಂಬಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಮೂರು ಲಾರಿಗಳು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಲ್ಲಾಪುರ ಮತ್ತು ರಾಂಪುರ ಗ್ರಾಮಗಳ ಬಳಿ ಇರುವ ಬೆಟ್ಟದಲ್ಲಿ ಬೃಹತ್ ಮಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಈ ಭಾಗದಿಂದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಬೆಳಗಾವಿ, ವಿಜಯಪುರ ಇತರ ಜಿಲ್ಲೆಗಳಿಗೆ ಸಾಗಾಣಿಕೆ ನಡೆಯುತ್ತಿತ್ತು. ಕಳೆದ ಒಂದು ವರ್ಷದಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಇಲಾಖೆಗಳು ಕಣ್ಣು ಮುಚ್ಚಿಕೊಂಡಿದ್ದವು. ಇಲ್ಲಿಯ ಕಲ್ಲುಗಳು ವಿವಿಧ ರಾಜ್ಯಗಳಿಗೆ ದ್ರಾಕ್ಷಿ ತೋಟಕ್ಕೆ ಪೂರೈಕೆಯಾಗುತ್ತಿದ್ದವು. ಈಗ ಎಚ್ಚೆತ್ತುಕೊಂಡ ಅಧಿಕಾರಿಗಳು ದಾಳಿ ನಡೆಸಿ ಗಣಿಗಾರಿಕೆ ಮಾಡುವವರಿಗೆ ಬಿಸಿ ಮುಟ್ಟಿಸಿದ್ದಾರೆ.
ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಪೊಲೀಸರು ಅಕ್ರಮವಾಗಿ ಕಲ್ಲು ಗಣಿಗಾರಿಕೆ ಪ್ರದೇಶದ ಮೇಲೆ ದಾಳಿ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ದೊಡ್ಡಪ್ಪ, ಹಂಪಿ ಪ್ರಾಧಿಕಾರದ ಧನಂಜಯ, ಸುರೇಂದ್ರ, ಭೂ ಮತ್ತು ಗಣಿ ವಿಜ್ಞಾನಿ ಫಯಾಜ್, ಕಂದಾಯ ಅಧಿಕಾರಿಗಳಾದ ಮಂಜುಸ್ವಾಮಿ, ಮಹಾಲಕ್ಷ್ಮೀ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಲಾರಿಯ ಚಾಲಕರಾದ ಮಲ್ಲಿಕಾರ್ಜುನ ಅಮೀನಗಡ, ಶಂಕ್ರಪ್ಪ ಹುನಗುಂದ, ಅಕ್ಬರ್ ಕೊರಮ್ಮ ಕ್ಯಾಂಪ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.