ಈ ಬಾರಿ ಹೊಸ ವರ್ಷದ ಸಂಭ್ರಮಕ್ಕೆ ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಜಿಲ್ಲಾಡಳಿತದ ನಿರ್ಬಂಧಗಳು ಮತ್ತು ವಾರದ ಮಧ್ಯದಲ್ಲಿ ಹೊಸ ವರ್ಷ ಬಂದಿರುವುದರಿಂದ, ಹೋಂ ಸ್ಟೇಗಳು ಹಾಗೂ ರೆಸಾರ್ಟ್‌ಗಳು ಖಾಲಿಯಾಗಿದ್ದು, ಪ್ರಮುಖ ಪ್ರವಾಸಿ ತಾಣಗಳು ನಿಶ್ಶಬ್ದವಾಗಿವೆ.
ಚಿಕ್ಕಮಗಳೂರು: ಹೊಸ ವರ್ಷದ ಸಂಭ್ರಮ ಕಾಫಿನಾಡಿನಲ್ಲಿ ಈ ಬಾರಿ ನಿರೀಕ್ಷೆಯ ಮಟ್ಟಿಗೆ ಕಾಣುತ್ತಿಲ್ಲ. ಪ್ರತೀ ವರ್ಷ ಹೊಸ ವರ್ಷಕ್ಕೆ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ, ಈ ಬಾರಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ಜಿಲ್ಲೆಯಾದ್ಯಂತ ಅರ್ಧಕ್ಕಿಂತ ಹೆಚ್ಚು ಹೋಂ ಸ್ಟೇಗಳು ಮತ್ತು ರೆಸಾರ್ಟ್‌ಗಳು ಖಾಲಿ ಖಾಲಿಯಾಗಿವೆ. ಸಾಮಾನ್ಯವಾಗಿ ಡಿಸೆಂಬರ್ 30 ಮತ್ತು 31ರಂದು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕೆಮ್ಮಣ್ಣಗುಂಡಿ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು ಈ ಬಾರಿ ನಿಶ್ಶಬ್ದವಾಗಿವೆ. ಹೊಸ ವರ್ಷ ವಾರದ ಮಧ್ಯದಲ್ಲಿ ಬಂದಿರುವುದು ಹಾಗೂ ಜಿಲ್ಲಾಡಳಿತದ ಕೆಲವು ನಿರ್ಬಂಧಾತ್ಮಕ ನಿರ್ಧಾರಗಳು ಪ್ರವಾಸಿಗರ ಸಂಖ್ಯೆ ಇಳಿಮುಖವಾಗಲು ಪ್ರಮುಖ ಕಾರಣಗಳೆಂದು ಪ್ರವಾಸೋದ್ಯಮ ಕ್ಷೇತ್ರದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
25
ಜಿಲ್ಲಾಡಳಿತದ ನಿರ್ಬಂಧಗಳು ಪ್ರವಾಸೋದ್ಯಮಕ್ಕೆ ಹೊಡೆತ
ಪಶ್ಚಿಮ ಘಟ್ಟಗಳ ತಪ್ಪಲಿನ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಜಿಲ್ಲಾಡಳಿತವು ಪ್ರತಿದಿನ ಗರಿಷ್ಠ 1,600 ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಈ ನಿರ್ಧಾರವು ಪರಿಸರದ ದೃಷ್ಟಿಯಿಂದ ಅಗತ್ಯವಿದ್ದರೂ, ಪ್ರವಾಸಿಗರಲ್ಲಿ ಗೊಂದಲ ಮತ್ತು ಹಿಂಜರಿತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ದರ ಪರಿಣಾಮವಾಗಿ, ಹೊಸ ವರ್ಷದ ಮೊದಲ ದಿನವಾದ ಇಂದು ಬೆಳಗ್ಗೆಯಿಂದ ಕೇವಲ 800 ರಿಂದ 1,000ರಷ್ಟು ವಾಹನಗಳು ಮಾತ್ರ ಮುಳ್ಳಯ್ಯನಗಿರಿ ಕಡೆಗೆ ಭೇಟಿ ನೀಡಿರುವುದು ದಾಖಲಾಗಿದೆ. ವಾಹನಗಳ ಕೊರತೆಯಿಂದ ಮುಳ್ಳಯ್ಯನಗಿರಿ ರಸ್ತೆಯು ಬಣಗುಡುತ್ತಿರುವ ದೃಶ್ಯ ಕಂಡುಬಂತು.
35
ಹಿಂದಿನ ವರ್ಷಗಳ ಹೋಲಿಕೆಯಲ್ಲಿ ಭಾರೀ ಕುಸಿತ
ಹಿಂದಿನ ವರ್ಷಗಳಲ್ಲಿ ಡಿಸೆಂಬರ್ 30 ಮತ್ತು 31ರಂದು ಮುಳ್ಳಯ್ಯನಗಿರಿ ಪ್ರದೇಶ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ರಸ್ತೆಗಳಲ್ಲಿ ವಾಹನಗಳ ಸಾಲು, ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ಮುಂಗಡ ಬುಕ್ಕಿಂಗ್‌ಗಳು ತುಂಬಿ ಹೋಗುತ್ತಿದ್ದವು. ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಪ್ರವಾಸಿಗರ ಕೊರತೆಯಿಂದ ಪ್ರವಾಸಿ ತಾಣಗಳು, ಹೋಂ ಸ್ಟೇಗಳು ಮತ್ತು ರೆಸಾರ್ಟ್‌ಗಳು ಖಾಲಿ ಖಾಲಿಯಾಗಿದ್ದು, ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರುವ ಸ್ಥಳೀಯ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು ಮತ್ತು ಚಾಲಕರು ನಿರಾಸೆಯಲ್ಲಿದ್ದಾರೆ.
ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿರುವುದರಿಂದ ಹೋಂ ಸ್ಟೇ ಮಾಲೀಕರು ಹಾಗೂ ರೆಸಾರ್ಟ್ ಉದ್ಯಮಿಗಳು ಆರ್ಥಿಕ ನಷ್ಟದ ಭೀತಿಯಲ್ಲಿ ಇದ್ದಾರೆ. ಹೊಸ ವರ್ಷ ನಮ್ಮ ಪಾಲಿಗೆ ಅತ್ಯಂತ ಪ್ರಮುಖ ಸೀಸನ್. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದ ಪ್ರವಾಸಿಗರು ಬಂದಿಲ್ಲ ಎಂದು ಸ್ಥಳೀಯ ಉದ್ಯಮಿಗಳು ಅಳಲು ತೋಡಿಕೊಂಡಿದ್ದಾರೆ.
55
ಕಾಫಿನಾಡಿನ ಮೌನ ಹೊಸ ವರ್ಷ
ಪ್ರಕೃತಿ ಸೌಂದರ್ಯ, ಹಸಿರು ಬೆಟ್ಟಗಳು ಮತ್ತು ತಂಪಾದ ಹವಾಮಾನಕ್ಕಾಗಿ ಪ್ರಸಿದ್ಧವಾದ ಕಾಫಿನಾಡು ಈ ಬಾರಿ ಹೊಸ ವರ್ಷವನ್ನು ಮೌನದಲ್ಲೇ ಸ್ವಾಗತಿಸಿದೆ. ಪ್ರವಾಸಿಗರ ಗದ್ದಲ, ಸಂಭ್ರಮದ ವಾತಾವರಣ ಇಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು ಶಾಂತವಾಗಿವೆ. ಹೊಸ ವರ್ಷದ ನಂತರ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದೇ ಎಂಬ ನಿರೀಕ್ಷೆಯಲ್ಲಿ ಕಾಫಿನಾಡಿನ ಪ್ರವಾಸೋದ್ಯಮ ಕ್ಷೇತ್ರ ಎದುರು ನೋಡುತ್ತಿದೆ.