ಮೈಸೂರಲ್ಲಿ ಮನೆಯೊಳಗೆ ನುಗ್ಗಿದ ಚಿರತೆಯೊಂದಿಗೆ 2 ಗಂಟೆ ಕಳೆದ 90ರ ಅಜ್ಜಿ; ಸಾವಿನ ಮನೆ ಕದ ತಟ್ಟಿಬಂದ ತಾಯಿ-ಮಗಳು!

Published : Apr 17, 2026, 07:30 PM ISTUpdated : Apr 17, 2026, 08:48 PM IST

ಮೈಸೂರಿನ ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದ ಚಿರತೆಯೊಂದು, ಸುಮಾರು ಎರಡೂವರೆ ಗಂಟೆಗಳ ಕಾಲ 90 ವರ್ಷದ ವೃದ್ಧೆಯ ಮಂಚದ ಕೆಳಗೆ ಅವಿತುಕೊಂಡಿತ್ತು. ಅಚ್ಚರಿಯೆಂದರೆ, ಯಾರಿಗೂ ಯಾವುದೇ ಹಾನಿ ಮಾಡದ ಈ ಚಿರತೆಯನ್ನು ಅರಣ್ಯ ಇಲಾಖೆಯು ಯಶಸ್ವಿಯಾಗಿ ಸೆರೆಹಿಡಿದು, ಎಲ್ಲರನ್ನೂ ಅಪಾಯದಿಂದ ಪಾರುಮಾಡಿದೆ.

PREV
16
ಸಾವಿನ ಕದ ತಟ್ಟಿಬಂದ ಅಜ್ಜಿ-ಮಗಳು

ಮೈಸೂರು (ಏ.17): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಉಸಿರು ಬಿಗಿಹಿಡಿಯುವಂತಹ ಘಟನೆಯೊಂದು ನಡೆದಿದೆ. ಸಿದ್ದಾರ್ಥ ಬಡಾವಣೆಯ ಸುರೇಶ್ ಎಂಬುವವರ ಮನೆಯೊಳಗೆ ನುಗ್ಗಿದ್ದ ಚಿರತೆ, ಸುಮಾರು ಎರಡೂವರೆ ಗಂಟೆಗಳ ಕಾಲ ಅಕ್ಷರಶಃ ಮನೆಯವರ ಜೊತೆಯಲ್ಲೇ ಕಾಲ ಕಳೆದಿದೆ! ಅಚ್ಚರಿಯೆಂದರೆ, ಈ ಎರಡೂವರೆ ಗಂಟೆಗಳ ಕಾಲ ಚಿರತೆ ಮನುಷ್ಯರ ಜೊತೆಗಿದ್ದರೂ ಯಾರಿಗೂ ಕಿಂಚಿತ್ತೂ ತೊಂದರೆ ನೀಡದೆ ಶಾಂತವಾಗಿ ಮಲಗಿದ್ದು ಈಗ ಪವಾಡದಂತೆ ಭಾಸವಾಗುತ್ತಿದೆ. ಇನ್ನು ಸಾವಿನ ಮನೆ ಕದ ತಟ್ಟಿಬಂದಂತಾಗಿದೆ.

26
ಮಂಚದ ಮೇಲೆ ಅಜ್ಜಿ, ಮಂಚದ ಕೆಳಗೆ ಚಿರತೆ!

ಈ ಘಟನೆಯ ಅತ್ಯಂತ ರೋಚಕ ಮತ್ತು ಭಯಾನಕ ಕ್ಷಣವೆಂದರೆ ಅದು ಮನೆಯ ವೃದ್ಧೆ ಶೈಲಜಾ ಅವರ ಕೊಠಡಿಯಲ್ಲಿದ್ದ ದೃಶ್ಯ. 90 ವರ್ಷದ ವಯಸ್ಸಾದ ವೃದ್ಧೆ ಶೈಲಜಾ ಅವರು ಹಾಸಿಗೆ ಹಿಡಿದಿದ್ದು, ಅವರಿಗೆ ನಡೆದಾಡಲು ಸಾಧ್ಯವಿಲ್ಲ. ಚಿರತೆ ಮನೆಯೊಳಗೆ ನುಗ್ಗಿದಾಗ ನೇರವಾಗಿ ಈ ಅಜ್ಜಿಯ ರೂಮಿಗೆ ಹೋಗಿ ಮಂಚದ ಕೆಳಗೆ ಮಲಗಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಅಜ್ಜಿ ಮಂಚದ ಮೇಲೆ ಮಲಗಿದ್ದರೆ, ಮಂಚದ ಕೆಳಗೆ ಕ್ರೂರ ಮೃಗ ಚಿರತೆ ಮೌನವಾಗಿ ಕುಳಿತಿತ್ತು.

36
ಸೌಮ್ಯವಾಗಿ ವರ್ತಿಸಿದ ಚಿರತೆ

ಮನೆ ಮಾಲೀಕ ಸುರೇಶ್ ಅವರ ಪತ್ನಿ ಸುಜಾತ ಮತ್ತು ಕೆಲಸದ ಮಹಿಳೆ ಅದೇ ಕೊಠಡಿಗೆ ಬಂದು ಅಜ್ಜಿಗೆ ಔಷಧಿ ಹಚ್ಚಿದ್ದಾರೆ, ಆರೈಕೆ ಮಾಡಿದ್ದಾರೆ. ಆದರೆ ಅಚ್ಚರಿಯೆಂದರೆ ಅವರಿಬ್ಬರಿಗೂ ಮಂಚದ ಕೆಳಗೆ ಚಿರತೆ ಇರುವುದು ಗೊತ್ತೇ ಆಗಿಲ್ಲ! ಅಷ್ಟರಮಟ್ಟಿಗೆ ಆ ಚಿರತೆ ಅಂದು ಸೌಮ್ಯವಾಗಿ ವರ್ತಿಸಿತ್ತು. ಬಳಿಕ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮಂಚದ ಕೆಳಗೆ ನೋಡಿದಾಗ ಬೆಳ್ಳಂಬೆಳ್ಳಗೆ ಚಿರತೆ ಕಂಡಿದೆ. ತಕ್ಷಣವೇ ಅವರೆಲ್ಲರೂ ಭಯದಿಂದ ನಡುಗಿದರೂ, ಧೈರ್ಯ ತಂದುಕೊಂಡು ಅಜ್ಜಿಯನ್ನು ಹೊರಕ್ಕೆ ಎತ್ತಿಕೊಂಡು ಬಂದು ರೂಮಿನ ಬಾಗಿಲು ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

46
ಬರಿ 10 ನಿಮಿಷ ಬಾಗಿಲು ತೆರೆದಿದ್ದಕ್ಕೆ ನುಗ್ಗಿದ ಮೃಗ

‘ಬೆಳಗ್ಗೆ ನಮ್ಮ ರಸ್ತೆಯಲ್ಲಿ ಚಿರತೆ ಓಡಾಡುತ್ತಿದೆ ಎಂದು ಅರಣ್ಯ ಇಲಾಖೆಯವರು ಎಚ್ಚರಿಕೆ ನೀಡಿದ್ದರು. ನಾವು ಮನೆ ಬಾಗಿಲು ಹಾಕಿಕೊಂಡೇ ಇದ್ದೆವು. ಆದರೆ ಕೇವಲ 5 ರಿಂದ 10 ನಿಮಿಷ ಮಾತ್ರ ಮೇನ್ ಡೋರ್ ತೆರೆದಿದ್ದೆವು. ಆ ಸಮಯದಲ್ಲಿ ಅದು ಯಾರಿಗೂ ಕಾಣದಂತೆ ನುಗ್ಗಿ ರೂಮಿನ ಒಳಗೆ ಕುಳಿತಿದೆ. ದೇವರ ದಯೆಯಿಂದ ನಮ್ಮ ಪ್ರಾಣ ಉಳಿದಿದೆ’ ಎಂದು ಸುಜಾತ ಆತಂಕದಿಂದಲೇ ಹೇಳಿಕೆ ನೀಡಿದ್ದಾರೆ.

56
ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಿರತೆ ಕಾರ್ಯಪಡೆ (Leopard Task Force), ಎಸಿಎಫ್ ರವೀಂದ್ರ ಮತ್ತು ಮೃಗಾಲಯದ ಪಶುವೈದ್ಯಾಧಿಕಾರಿ ಡಾ. ಶಶಿಕುಮಾರ್ ಅವರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿದರು. ಚಿರತೆಗೆ ಎರಡು ಬಾರಿ ಅರವಳಿಕೆ ಮದ್ದು ನೀಡುವ ಮೂಲಕ ಅದನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು. ಸುಮಾರು ಎರಡೂವರೆ ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಸದ್ಯ ಅದನ್ನು ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.

66
90ರ ಅಜ್ಜಿಗೆ ದೈವಬಲ ಇದೆ

ಈ ಇಡೀ ಘಟನೆಯು ಮೈಸೂರು ಜನತೆಯಲ್ಲಿ ಒಂದು ಕಡೆ ಆತಂಕ ಮೂಡಿಸಿದ್ದರೆ, ಮತ್ತೊಂದು ಕಡೆ 90 ವರ್ಷದ ವೃದ್ಧೆಯ ಪ್ರಾಣ ಉಳಿದಿದ್ದನ್ನು ಕಂಡು ಜನ ‘ದೈವಬಲ’ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಅಜ್ಜಿ ಮತ್ತು ಮಗಳು ಸಾವಿನ ಮನೆಯ ಕದ ತಟ್ಟಿ ವಾಪಸ್ ಜೀವಂತವಾಗಿ ಬಮದಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Read more Photos on
click me!

Recommended Stories