ಹಾನಗಲ್ಲ: ತುಂಬಿದ ಧರ್ಮಾ ಜಲಾಶಯಕ್ಕೆ ಸಚಿವ ಶಿವರಾಮ ಹೆಬ್ಬಾರ ಬಾಗಿನ

First Published | Aug 24, 2020, 11:58 AM IST

ಹಾನಗಲ್ಲ(ಆ.24): ಮುಂಡಗೋಡ ತಾಲೂಕಿನ 4 ಪಂಚಾಯಿತಿಗೆ ಕುಡಿಯುವ ನೀರಿನ ಹಾಗೂ ಹಾನಗಲ್ಲ ತಾಲೂಕಿನ ಧರ್ಮಾ ಕಾಲುವೆ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಭೂಮಿಗೆ ಜಲಮೂಲವಾದ ಧರ್ಮಾ ಜಲಾಶಯ ತುಂಬಿ ಹರಿಯುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ. 

ಭಾನುವಾರ ತಾಲೂಕಿನ ಮಳಗಿ ಬಳಿಯ ಧರ್ಮಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಅತಿವೃಷ್ಟಿಯಿಂದ ಹೆಚ್ಚು ಹಾನಿಯಾಗಿದೆ. ಇಂತಹ ಪ್ರದೇಶದ ಜನಕ್ಕೆ ಬೇಕಾದ ಸೌಲಭ್ಯ ಒದಗಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಸ ಕೈಗೊಳ್ಳಲಿದ್ದಾರೆ. ತಾವೂ ಕೂಡ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಆಗಿರುವ ಅನಾಹುತಗಳ ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ ಸಚಿವ ಶಿವರಾಮ ಹೆಬ್ಬಾರ.
ಜಿಲ್ಲೆಯ ಎಲ್ಲ ನದಿಗಳು ಅಪಾಯವಿಲ್ಲದೆ ತುಂಬಿ ಹರಿಯುತ್ತಿವೆ. ಕಳೆದ ವರ್ಷದ ಹಾಗೆ ದೊಡ್ಡ ಪ್ರಮಾಣದ ಅನಾಹುತವಾಗಿಲ್ಲ. ಆದಾಗ್ಯೂ ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ, ಶೇ. 50ಕ್ಕೂ ಅಧಿಕ ಮನೆ ಹಾನಿಗೊಳಗಾದವರಿಗೆ 3 ಲಕ್ಷ, ಅಲ್ಪ ಸ್ವಲ್ಪ ಹಾನಿಗೊಳಗಾದವರಿಗೆ 50 ಸಾವಿರ ಪರಿಹಾರ ನೀಡಲಾಗುತ್ತಿದೆ. ಜಾನುವಾರುಗಳನ್ನು ಕಳೆದುಕೊಂಡವರಿಗೂ ಪರಿಹಾರ ಒದಗಿಸಲಾಗಿದೆ. ಹಣಕಾಸಿನ ಸಮಸ್ಯೆ ಇಲ್ಲ ಎಂದ ಅವರು, ಕೂಡಲೆ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದರು.
Tap to resize

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಹಾನಗಲ್ಲ ತಾಲೂಕಿನ ಸಾವಿರಾರು ರೈತರ ಜೀವನಾಡಿಯಾಗಿರುವ ಧರ್ಮಾ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ. 0.77 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, 29 ಅಡಿ ಭರ್ತಿಯಾಗಿ ನಿಂತಿದೆ. ಪ್ರತಿದಿನ 150ರಿಂದ 200 ಕ್ಯುಸೆಕ್‌ ನೀರು ಕೊಡಿ ಮೂಲಕ ಹೊರ ಹೋಗುತ್ತಿದೆ. ಹಾನಗಲ್ಲ ತಾಲೂಕಿನ 96 ಕೆರೆಗಳಿಗೆ ನೀರು ತುಂಬಿಸಲಿದೆ. ಹಾನಗಲ್ಲ ತಾಲೂಕು ಸೇರಿದಂತೆ 35ಕ್ಕೂ ಹೆಚ್ಚು ಗ್ರಾಮಗಳ 19 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುತ್ತದೆ ಎಂದರು.
ಶಾಸಕ ಸಿ.ಎಂ.ಉದಾಸಿ, ನೀಲಮ್ಮ ಉದಾಸಿ, ರೇವತಿ ಶಿವಕುಮಾರ ಉದಾಸಿ, ರವಿಗೌಡ ಪಾಟೀಲ, ಮುದ್ದು ನಾಗರವಳ್ಳಿ, ಹಾನಗಲ್ಲ ತಾಲೂಕು ಬಿಜೆಪಿ ಅಧ್ಯಕ್ಷ ರಾಜೂ ಗೌಳಿ, ಮುಖಂಡರಾದ ಕಲ್ಯಾಣಕುಮಾರ ಶೆಟ್ಟರ, ರಾಜಣ್ಣ ಪಟ್ಟಣದ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಿವಲಿಂಗಪ್ಪ ತಲ್ಲೂರ, ಕಲ್ಯಾಣಕುಮಾರ ಶೆಟ್ಟರ, ಭೋಜರಾಜ ಕರೂದಿ, ಚಂದ್ರಪ್ಪ ಜಾಲಗಾರ, ಉದಯ ವಿರೂಪಣ್ಣನವರ, ಸಂತೋಷ ಟೀಕೋಜಿ, ರಾಜಣ್ಣ ಗೌಳಿ ಈ ಸಂದರ್ಭದಲ್ಲಿದ್ದರು.

Latest Videos

click me!