ವಿಜಯನಗರ: ಸೇತುವೆಯಿಂದ ಟ್ರ್ಯಾಕ್ಟರ್ ಬಿದ್ದು 6 ಮಂದಿ ಸಾವು, ದೇವರ ದರ್ಶನಕ್ಕೆ ಹೊರಟವರು ಮಸಣಕ್ಕೆ, 5ಲಕ್ಷ ರೂ ಪರಿಹಾರ

Published : May 15, 2026, 07:52 PM IST

ಹೊಸಪೇಟೆ ಸಮೀಪದ ಮುನಿರಾಬಾದ್‌ನಲ್ಲಿ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ 6 ಮಂದಿ ಸಾವನ್ನಪ್ಪಿದ್ದಾರೆ. ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಸರ್ಕಾರ ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದೆ. 

PREV
17
₹5 ಲಕ್ಷ ಪರಿಹಾರ ಘೋಷಣೆ

ವಿಜಯನಗರ: ಹೊಸಪೇಟೆ ಸಮೀಪದ ಟಿಬಿ ಡ್ಯಾಂ ಬಳಿಯ ಮುನಿರಾಬಾದ್‌ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಕನಿಷ್ಠ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಮನಕಲಕುವಂತಿದೆ. ಟ್ರ್ಯಾಕ್ಟರ್‌ನಲ್ಲಿ ಒಟ್ಟು 19 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಸರ್ಕಾರದಿಂದ ಇದೀಗ ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.

27
ಒಂದೇ ಕುಟುಂಬದ ದುರಂತ ಅಂತ್ಯ!

ಮೃತರಲ್ಲಿ ಒಂದೇ ಕುಟುಂಬದ ಸದಸ್ಯರು ಸೇರಿದಂತೆ ಮಹಿಳೆಯರು ಮತ್ತು ಒಂದು ವರ್ಷದ ಮಗು ಸೇರಿರುವುದು ದುರ್ಘಟನೆಯ ಗಂಭೀರತೆಯನ್ನು ಹೆಚ್ಚಿಸಿದೆ. ಮೃತಪಟ್ಟ 6 ಮಂದಿ ಗುರುತು ಪತ್ತೆಯಾಗಿದ್ದು, ಕೆಂಚಪ್ಪ (35), ಮಹಾಂತೇಶ್ (18), ಭರತ್ (1), ಸವಿತಾ (12), ಮಾಂತೇಶ್ ಹಾಗೂ ಗೌರಮ್ಮ ಮೃತರೆಲ್ಲರೂ ಸಂಡೂರು ತಾಲೂಕಿನ ಯಶವಂತನಗರ ಹಾಗೂ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ಇನ್ನು ಈ ಟ್ರ್ಯಾಕ್ಟರ್ ಅಪಘಾತದಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಮಹಾಲಕ್ಷ್ಮೀ ಎಂಬಾಕೆ ಪಾರಾಗಿದ್ದಾರೆ. ಆದರೆ ಆಕೆಯ ತಾಯಿ ಗೀತಾ ಹಾಗೂ ಸಹೋದರ ಭರತ್ ಮೃತಪಟ್ಟಿದ್ದಾರೆ. ಇವರು ಕೂಡ್ಲಿಗಿ ತಾಲೂಕಿನ ಭೈರದೇರಗುಡ್ಡ ಗ್ರಾಮದವರು.

37
ದೇವಾಲಯಕ್ಕೆ ತೆರಳುವಾಗ ದುರಂತ

ಹುಲಿಗೆಮ್ಮ ದೇವಸ್ಥಾನಕ್ಕೆ ಬ್ಯಾಟಿ ( ದೇವರು) ಮಾಡಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಟ್ರ್ಯಾಕ್ಟರ್ ಮೂಲತಃ ಕೃಷಿ ಚಟುವಟಿಕೆಗಾಗಿ ಬಳಕೆಯಾಗಬೇಕಾದ ವಾಹನವಾಗಿದ್ದು, ಇದರಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಸುವುದು ಅಪಾಯಕಾರಿ ಆದರೂ ಈ ವಾಹನದಲ್ಲಿ 19 ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿ ತಿಳಿಸಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ಹೊಸಪೇಟೆ ಹಾಗೂ ಕೊಪ್ಪಳ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ

47
ಕುಟುಂಬಸ್ಥರ ಆಕ್ರಂದನ

ಹೊಸಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರ ಎದುರು ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮವರನ್ನು ಕಳೆದುಕೊಂಡ ನೋವಿನಲ್ಲಿ ಕುಟುಂಬ ಸದಸ್ಯರು ಒಬ್ಬರನ್ನೊಬ್ಬರು ಅಪ್ಪಿಕೊಂಡು ರೋದಿಸುತ್ತಿರುವ ದೃಶ್ಯಗಳು ಮನಕಲಕುವಂತಿವೆ. ಶವಾಗಾರದ ಎದುರು ತಂದೆ, ಮಗನ ಆಕ್ರಂದನ ಹೇಳ ತೀರದು. ಹೆಂಡತಿ, ಮಗನನ್ನ ಕಳೆದುಕೊಂಡ ಗಂಡ ಮಲ್ಲೇಶ್ ಹಾಗೂ ಮತ್ತೊರ್ವ ಮಗ ಶವಾಗಾರದ ಎದುರು ಒಬ್ಬರಿಗೊಬ್ಬರು ತಬ್ಬಿ ಕೊಂಡು ರೋಧಿಸ್ತಿರುವುದು ಅಲ್ಲಿ ನೆರೆದಿದ್ದವರ ಕಣ್ಣಲ್ಲೂ ನೀರು ತರಿಸಿತು

57
ಅಧಿಕಾರಿಗಳ ಭೇಟಿ

ಘಟನೆಯ ಮಾಹಿತಿ ತಿಳಿದ ತಕ್ಷಣ ಬಳ್ಳಾರಿ ವಲಯ ಐಜಿಪಿ ಡಾ. ಹರ್ಷಾ ಹಾಗೂ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳ್ಳಾರಿ ವಲಯ ಐಜಿಪಿ ಡಾ. ಹರ್ಷಾ ಗಾಯಾಳುಗಳ ಆರೋಗ್ಯ‌ ವಿಚಾರಣೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದರು. ಹೊಸಪೇಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಕೊಪ್ಪಳ ಎಸ್ಪಿ ಎಲ್.‌ಅರಸಿದ್ದಿ, ವಿಜಯನಗರ ಎಸ್ಪಿ ಜಾಹ್ನವಿ ಕೂಡ ಭೇಟಿ ನೀಡಿದರು.

67
ಸಂಸದರಿಂದ ಸಾಂತ್ವನ, ಪರಿಹಾರ ಘೋಷಣೆ

ಟಿಬಿ ಡ್ಯಾಂ ಬಳಿ ಟ್ರ್ಯಾಕ್ಟರ್ ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಸರ್ಕಾರಿ‌ ಆಸ್ಪತ್ರೆಗೆ ಸಂಸದ ತುಕಾರಾಂ ಭೇಟಿ ಗಾಯಗೊಂಡವರ ಆರೋಗ್ಯ‌ ವಿಚಾರಿಸಿ ಸಾಂತ್ವನ ಹೇಳಿದರು. ಬಳಿಕ ಮಾತಾಡಿದ ಸಂಸದ ತುಕಾರಾಂ ಸಿಎಂ ಸಿದ್ದರಾಮಯ್ಯ ಅವರ ಬಳಿ ಮಾತಾಡಿದ್ದೇನೆ. ಮೃತ ಪ್ರತಿಯೊಬ್ಬರ ಕುಟುಂಬಕ್ಕೂ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಜೊತೆಗೆ ಗಾಯಾಳುಗಳ ವೆಚ್ಚವನ್ನ ನಾನೇ ಸಂಪೂರ್ಣವಾಗಿ ಬರಿಸುತ್ತೇನೆ ಎಂದರು. 

77
ಜಾಗೃತಿ ಮೂಡಿಸಲು ಪೊಲೀಸ್, RTO ಸಭೆ ಕರೆದು ಸೂಚನೆ

ಇದೇ ವೇಳೆ ಘಟನೆ ಬಗ್ಗೆಯೂ ಮಾಹಿತಿ ನೀಡಿದ ಅವರು,  ಸಂಡೂರಿನಿಂದ ಕೂಡ್ಲಿಗಿ ಬಂದು ಅಲ್ಲಿಂದ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ ಗಾಡಿ ಗುದ್ದಿದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಘಟನೆಯಲ್ಲಿ ಟ್ರ್ಯಾಕ್ಟರ್ ಡ್ರೈವರ್ ಸಹಿತ ಆರು ಜನ ಸಾವನ್ನಪ್ಪಿದ್ದಾರೆ. 19 ಜನ ಟ್ರ್ಯಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು . ಅಷ್ಟೇ ಅಲ್ಲದೇ ಟ್ರ್ಯಾಕ್ಟರ್ ಇರುವುದು ಕೃಷಿ ಚಟುವಟಿಕೆ ಬಳಕೆಗೆ. ಜನಸಾಮಾನ್ಯರು ಈ ಬಗ್ಗೆ ಅರಿತುಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್, RTO ಸಭೆ ಕರೆದು ಸೂಚನೆ ನೀಡಲಾಗುವುದು ಎಂದರು. ಈ ಘಟನೆ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್‌ಗಳನ್ನು ಪ್ರಯಾಣಿಕರ ಸಾಗಣೆಗೆ ಬಳಸುವುದು ಎಷ್ಟು ಅಪಾಯಕಾರಿಯಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ದುರ್ಘಟನೆ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷತಾ ನಿಯಮಗಳ ಪಾಲನೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ.

Read more Photos on
click me!

Recommended Stories