ಸರ್ಕಾರ ಹತ್ತನೇ ತರಗತಿ ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಿದ ಹಿನ್ನೆಲೆಯಲ್ಲಿ ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶಿಕ್ಷಕರು ಮನೆ-ಮನೆಗೆ ತೆರಳಿ ಪಾಠ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಆನ್‌ಲೈನ್ ತರಗತಿಗಳನ್ನು ಆರಂಭಿಸಿದೆ. ಆದರೆ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಕೊಡಗಿನಲ್ಲಿ ಆನ್‌ಲೈನ್ ತರಗತಿಗೆ ಬೇಕಾದ ಮೂಲಸೌಕರ್ಯಗಳನ್ನು ಎಲ್ಲಾ ವಿದ್ಯಾರ್ಥಿಗಳ ಪೋಷಕರು ಹೊಂದಿಲ್ಲ.
ಇಲ್ಲಿ ನೆಟ್‌ವರ್ಕ್ ಸಮಸ್ಯೆ ಕಾಡುತ್ತದೆ. ಬಡಕೂಲಿ ಕಾರ್ಮಿಕರ ಮಕ್ಕಳೇ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದನ್ನು ಮನಗಂಡ ಶಿಕ್ಷಕರು ಮನೆ-ಮನೆಗೆ ತೆರಳಿ, ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಪಾಠ ಮಾಡುತ್ತಿದ್ದಾರೆ.
ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯು ಜೂ. 25ರಿಂದ ಆರಂಭಗೊಂಡು ಜು.4ರವರೆಗೆ ನಡೆಯಲಿದೆ.
ಈ ಶಾಲೆಯ 44 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಎಸ್.ಇಂದಿರಾ, ಸಹ ಶಿಕ್ಷಕರಾದ ದಿನೇಶ್, ಅಡ್ಮಾನಿ, ಗುರುರ್ಕಿ, ರಾಜಶಂಕರ್ ಹಾಗೂ ಶೋಭಾ ಮನೆಪಾಠದಲ್ಲಿ ತೊಡಗಿಸಿಕೊಂಡು ಶ್ಲಾಘನೆಗೆ ಪಾತ್ರರಾಗಿದ್ದಾರೆ.