ತಲಕಾವೇರಿ ವ್ಯಾಪ್ತಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ತಲಕಾವೇರಿ-ಭಾಗಮಂಡಲ ರಸ್ತೆ ಕೋಳಿಕಾಡು ಎಂಬಲ್ಲಿ ಬರೆ ಕುಸಿದಿದ್ದು, ಚೇರಂಗಾಲ ರಸ್ತೆಗೆ ಅಡ್ಡಲಾಗಿ ಮಣ್ಣು ಬಿದ್ದಿದೆ. ಬೆಟ್ಟದ ಮೇಲಿಂದ ಝರಿಯಂತೆ ನೀರು ಹರಿದಿದ್ದು, ಬಂಡೆಕಲ್ಲು, ಮರಗಳು ರಸ್ತೆಗೆ ಬಂದಿದೆ. ಮಳೆ ಹೆಚ್ಚಾದರೆ ಮತ್ತಷ್ಟುಕುಸಿತ ಉಂಟಾಗುವ ಸಾಧ್ಯತೆಯಿದೆ.
ಬರೆ ಕುಸಿತದಿಂದ ಚೇರಂಗಾಲ-ತಲಕಾವೇರಿ, ಭಾಗಮಂಡಲ-ತಲಕಾವೇರಿ ಸಂಪರ್ಕ ಕಡಿತೊಂಡಿದೆ. ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಭೂಕುಸಿತ ಉಂಟಾಗಿ ಎರಡು ತಿಂಗಳು ರಸ್ತೆ ಸಂಪರ್ಕ ಬಂದ್ ಆಗಿತ್ತು.
ಮಂಗಳವಾರ ಮುಂಜಾನೆಯಿಂದ ಸುರಿದ ಭಾರಿ ಮಳೆಯಿಂದಾಗಿ ಮಡಿಕೇರಿಯ ಆಕಾಶವಾಣಿ ಟವರ್ ಬಳಿ ನಿರ್ಮಾಣ ಹಂತದಲ್ಲಿದ್ದ ತಡೆ ಗೋಡೆ ಕುಸಿತವಾಗಿದ್ದು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
2018ರ ಮಳೆಗಾಲದಲ್ಲೇ ಆಕಾಶವಾಣಿ ಟವರ್ ಬಳಿ ಬರೆ ಕುಸಿತವಾಗಿತ್ತು. ಈ ಬಾರಿಯ ಮಳೆಗೆ ಬರೆ ಕುಸಿಯದಂತೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಆದರೆ ಮಂಗಳವಾರ ಸುರಿದ ಮಳೆಯಿಂದಾಗಿ ಮಣ್ಣಿನ ತೇವ ಹೆಚ್ಚಾದ ಪರಿಣಾಮ ಮೆಲ್ಭಾಗದ ಮಣ್ಣು ಸಣ್ಣ ಪ್ರಮಾಣದಲ್ಲಿ ಕುಸಿತವಾಗಿದೆ.
ಇದೀಗ ನಿರ್ಮಿಸಲಾಗಿದ್ದ ತಡೆಗೋಡೆಯೂ ಕೂಡ ಬರೆಯೊಂದಿಗೆ ಜರಿದು ಬಿದ್ದಿದೆ. ತಡೆಗೋಡೆ ನಿರ್ಮಾಣ ಹಂತದಲ್ಲಿ ಇದ್ದ ಕಾರಣ ಕಾರ್ಮಿಕರು ಕೂಡ ಕೆಲಸ ಮಾಡುತ್ತಿದ್ದರು. ಅದೃಷ್ಟಾವಶಾತ್ ಕಾರ್ಮಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದೆ. ಮಂಗಳವಾರ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಚಳಿಯೂ ಹೆಚ್ಚಾಗಿದೆ.
ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ದಿನವೂ ಉತ್ತಮ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ನೀರಿನ ಮಟ್ಟಏರಿಕೆಯಾಗಿದೆ. ಜಿಲ್ಲೆಯ ಹಲವು ಕಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಳೆ, ನದಿಗಳು ಉಕ್ಕಿ ಹರಿಯುತ್ತಿದ್ದು ಹಾರಂಗಿ ಹಾಗೂ ಚಿಕ್ಲಿಹೊಳೆ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.
ಬರೆ ಕುಸಿತ ಉಂಟಾಗದಂತೆ ತಡೆಗೋಡೆ ಕಾರ್ಯ ಪ್ರಗತಿಯಲ್ಲಿದೆ. ಸ್ಥಳಕೆ ಮಡಿಕೇರಿ ನಗರಸಭೆ ಅಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 38.16 ಮಿ.ಮೀ. ಕಳೆದ ವರ್ಷ ಇದೇ ದಿನ 35.63 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 513.23 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 434.44 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 57.30 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 27.80 ಮಿ.ಮೀ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 29.37 ಮಿ.ಮೀ ಮಳೆಯಾಗಿದೆ.
ಭಾರಿ ಮಳೆಯಿಂದಾಗಿ ಭಾಗಮಂಡಲದ ನಾಪೋಕ್ಲು-ಅಯ್ಯಂಗೇರಿ ರಸ್ತೆಯ ಮೇಲೆ ನೀರು ಏರಿಕೆಯಾಗಿದೆ. ಮಂಗಳವಾರ ಸಂಜೆ 6 ಗಂಟೆ ವೇಳೆಗೆ 3 ಅಡಿಗಳಷ್ಟುನೀರು ಏರಿಕೆಯಾಗಿತ್ತು. ಇದರಿಂದಾಗಿ ವಾಹನ ಸಂಚಾರ ಬಂದ್ ಆಗಿದೆ. ಹೆಚ್ಚು ಮಳೆಯಾದರೆ ಪ್ರವಾಹ ಮುಂದುವರೆಯಲಿದೆ.
ಮಡಿಕೇರಿ ಕಸಬಾ 19, ನಾಪೋಕ್ಲು 50, ಸಂಪಾಜೆ 25, ಭಾಗಮಂಡಲ 135.20, ವಿರಾಜಪೇಟೆ ಕಸಬಾ 34.20, ಹುದಿಕೇರಿ 25.10, ಶ್ರೀಮಂಗಲ 53.40, ಪೊನ್ನಂಪೇಟೆ 25.10, ಅಮ್ಮತ್ತಿ 9, ಬಾಳೆಲೆ 20, ಸೋಮವಾರಪೇಟೆ ಕಸಬಾ 21, ಶನಿವಾರಸಂತೆ 24.20, ಶಾಂತಳ್ಳಿ 87.20, ಕೊಡ್ಲಿಪೇಟೆ 35, ಕುಶಾಲನಗರ 3.60, ಸುಂಟಿಕೊಪ್ಪ 5.20 ಮಿ.ಮೀ. ಮಳೆಯಾಗಿದೆ.