ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಇಲಾಖೆಯ ಉತ್ಖನನದಲ್ಲಿ ಪುರಾತನ ಮಡಿಕೆಗಳು ಪತ್ತೆಯಾಗಿವೆ. ಇತ್ತೀಚೆಗೆ ಇದೇ ಗ್ರಾಮದಲ್ಲಿ ಚಿನ್ನದ ನಿಧಿ ಸಿಕ್ಕಿದ್ದರಿಂದ, ಈ ಮಡಿಕೆಗಳಲ್ಲೂ ಬಂಗಾರದ ಆಭರಣಗಳಿರಬಹುದೆಂಬ ಕುತೂಹಲ ಹೆಚ್ಚಾಗಿದೆ.
ಗದಗ (ಜ.20): ಜಿಲ್ಲೆಯ ಐತಿಹಾಸಿಕ ತಾಣವಾದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಇಲಾಖೆಯ ಉತ್ಖನನ ಕಾರ್ಯವು ಇದೀಗ ಐದನೇ ದಿನಕ್ಕೆ ಕಾಲಿಟ್ಟಿದ್ದು, ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇತಿಹಾಸದ ಪುಟಗಳಲ್ಲಿ 'ಲೋಕಿಗುಂಡಿ' ಎಂದೇ ಪ್ರಸಿದ್ಧವಾಗಿದ್ದ ಈ ಗ್ರಾಮದ ಮಣ್ಣಿನಡಿಯಲ್ಲಿ ಹೂತುಹೋಗಿರುವ ರಹಸ್ಯಗಳನ್ನು ಹೊರತೆಗೆಯುವ ಪ್ರಯತ್ನದಲ್ಲಿ ಇದೀಗ ಪುರಾತನ ಮಡಿಕೆಗಳು ಪತ್ತೆಯಾಗಿದ್ದು, ಅದರಲ್ಲಿಯೂ ಬಂಗಾರದ ಆಭರಣ, ನಗ-ನಾಣ್ಯಗಳೇನಾದರೂ ಇವೆಯೇ ಎಂಬ ಕುತೂಹಲ ನಾಡಿನ ಜನರನ್ನು ಕೆರಳಿಸಿದೆ.
26
5ನೇ ದಿನದ ಉತ್ಖನನ: ಮಡಿಕೆ ದರ್ಶನ
ಉತ್ಖನನ ಕಾರ್ಯದ ಐದನೇ ದಿನವಾದ ಇಂದು (ಮಂಗಳವಾರ), ಇಲಾಖೆಯ ಸಿಬ್ಬಂದಿಗಳು ಭೂಮಿಯನ್ನು ಅಗೆಯುವಾಗ ಒಡೆದ ಸ್ಥಿತಿಯಲ್ಲಿರುವ ಕೆಲವು ಪುರಾತನ ಮಡಿಕೆಯ ಅವಶೇಷಗಳು ಪತ್ತೆಯಾಗಿವೆ. ಇವುಗಳಲ್ಲಿ ಅರ್ಧ ಆಕಾರದ ಮಡಿಕೆಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಅಧಿಕಾರಿಗಳು ಹಾಗೂ ಕಾರ್ಮಿಕರು ಅತ್ಯಂತ ನಾಜೂಕಿನಿಂದ ಮಣ್ಣನ್ನು ಸರಿಸಿ ಅವುಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.
ಈ ಮಡಿಕೆಗಳು ಕೇವಲ ದವಸ ಧಾನ್ಯಗಳನ್ನು ಸಂಗ್ರಹಿಸಿಡಲು ಬಳಸುತ್ತಿದ್ದವೋ ಅಥವಾ ಈ ಮಣ್ಣಿನಡಿಯಲ್ಲಿ 'ನಿಧಿ' ಅಡಗಿದೆಯೇ ಎಂಬ ಚರ್ಚೆ ಸಾರ್ವಜನಿಕರಲ್ಲಿ ಶುರುವಾಗಿದೆ.
36
ರಿತ್ತಿ ಕುಟುಂಬಕ್ಕೆ ಸಿಕ್ಕಿದ್ದ ಚಿನ್ನದ ನಿಧಿಯ ನೆನಪು!
ಲಕ್ಕುಂಡಿಯಲ್ಲಿ ಬಂಗಾರದ ಬಗ್ಗೆ ಇಷ್ಟೊಂದು ಕುತೂಹಲ ಮೂಡಲು ಕಾರಣವೊಂದು ಇದೆ. ಕಳೆದ 15 ದಿನಗಳ ಹಿಂದಷ್ಟೇ ಇದೇ ಗ್ರಾಮದ ರಿತ್ತಿ ಕುಟುಂಬದ ಸದಸ್ಯರು ತಮ್ಮ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಲು ಅಡಿಪಾಯ ಅಗೆಯುವಾಗ, ಅನಿರೀಕ್ಷಿತವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಬಂಗಾರದ ನಾಣ್ಯಗಳು ಹಾಗೂ ಆಭರಣಗಳು ಪತ್ತೆಯಾಗಿದ್ದವು. ಆ ಘಟನೆಯು ಇಡೀ ರಾಜ್ಯದ ಗಮನ ಸೆಳೆದಿತ್ತು.
ಲಕ್ಕುಂಡಿಯು ಕಲ್ಯಾಣ ಚಾಲುಕ್ಯರ ಕಾಲದ ಪ್ರಮುಖ ಟಂಕಸಾಲೆ (Mint) ಕೇಂದ್ರವಾಗಿದ್ದರಿಂದ, ಇಲ್ಲಿ ಭೂಮಿಯೊಳಗೆ ಬಂಗಾರದ ನಾಣ್ಯಗಳು ಸಿಗುವ ಸಾಧ್ಯತೆ ಹೆಚ್ಚು ಎಂಬ ನಂಬಿಕೆ ಜನರಲ್ಲಿದೆ. ಇನ್ನು ನಿನ್ನೆ ಒಬ್ಬ ಸ್ವಾಮೀಜಿ ಬಂದು ಈ ಮಣ್ಣಿನಡಿ 1000 ಕೆಜಿಯ ಬಂಗಾರದ ಶಿವಲಿಂಗ ಮತ್ತು 100 ಕೆಜಿ ಬಂಗಾರದ ದೇವಿಯ ವಿಗ್ರವಿದೆ ಎಂದು ಹೇಳಿದ್ದರು. ಇದೂ ಕೂಡ ಕುತೂಹಲ ಮೂಡಿಸಿದೆ.
56
ಇಂದಿನವರೆಗೆ ಪತ್ತೆಯಾದ ಅವಶೇಷಗಳು
ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಉತ್ಖನನದಲ್ಲಿ ಹಲವಾರು ಮಹತ್ವದ ಕುರುಹುಗಳು ಪತ್ತೆಯಾಗಿವೆ:
ಶಿವಲಿಂಗ: ಚಾಲುಕ್ಯ ಶೈಲಿಯ ಕೆತ್ತನೆ ಇರುವ ತಾಮ್ರದ ಶಿವಲಿಂಗ, ಗಂಟೆ ಲಭ್ಯ ವಾಗಿವೆ.
ಪ್ರಾಚೀನ ಆಯುಧ: ಮಣ್ಣಿನಡಿಯಲ್ಲಿ ಹೂತುಹೋಗಿದ್ದ ಪ್ರಾಚೀನ ಕಾಲದ ತ್ರಿಕೋನಾಕಾರದ ಆಯುಧ ಸಿಕ್ಕಿದೆ.
ಶಿವಲಿಂಗದ ಗೋಪುರ: ಇನ್ನು ಶಿವಲಿಂಗವನ್ನು ಇಡುವ ಶಿಲೆಯ ಗೋಪುರವೊಂದು ಲಭ್ಯವಾಗಿದೆ.
ಮಡಕೆ ಚೂರುಗಳು: ವಿವಿಧ ಗಾತ್ರದ ಮತ್ತು ವಿನ್ಯಾಸದ ಮಣ್ಣಿನ ಪಾತ್ರೆಗಳ ಅವಶೇಷಗಳು ಸಿಕ್ಕಿವೆ.
66
ವಿಜ್ಞಾನಿಗಳ ಮತ್ತು ಇತಿಹಾಸಕಾರರ ಅಭಿಪ್ರಾಯ
ಸದ್ಯ ಪತ್ತೆಯಾಗಿರುವ ಮಡಿಕೆಯನ್ನು ಇಲಾಖೆಯು ಸಂರಕ್ಷಿಸಿದ್ದು, ಅವುಗಳ ಒಳಗೆ ಏನಿದೆ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಲಾಗುತ್ತಿದೆ. ಪುರಾತತ್ವ ಇಲಾಖೆಯ ಮೂಲಗಳ ಪ್ರಕಾರ, ಲಕ್ಕುಂಡಿಯು ಒಂದು ಕಾಲದಲ್ಲಿ ವೈಭವೋಪೇತ ವಾಣಿಜ್ಯ ನಗರಿಯಾಗಿದ್ದರಿಂದ ಇಲ್ಲಿನ ಪ್ರತಿಯೊಂದು ಮಡಿಕೆಯೂ ಇತಿಹಾಸದ ಅಮೂಲ್ಯ ದಾಖಲೆಯಾಗಿದೆ. ಇದು ದವಸ ಧಾನ್ಯವೋ ಅಥವಾ ಬಂಗಾರವೋ ಎನ್ನುವುದಕ್ಕಿಂತ, ಇದು ನಮ್ಮ ಪೂರ್ವಜರ ಜೀವನಶೈಲಿಯನ್ನು ತಿಳಿಯಲು ಇರುವ ದಾರಿಯಾಗಿದೆ.