ಶನಿವಾರ ತಾಲೂಕಿನ ಗುಳದಾಳ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ರಸ್ತೆಯನ್ನು ಬೈಕ್ ಸವಾರಿ ಮಾಡಿ ವೀಕ್ಷಣೆ ಮಾಡಿದ್ದ ಜಿಲ್ಲಾಧಿಕಾರಿ ಸುರಳ್ಕರ್ ಮತ್ತು ಜಿಪಂ ಸಿಇಒ ಫೌಜೀಯಾ ತರನ್ನುಮ್, ಅಧಿಕಾರಿಗಳ ತಂಡ ತಾಲೂಕಿನ ಸಣ್ಣಾಪುರ ಸಮಾನಂತರ ಜಲಾಶಯದಿಂದ ಹಿಡಿದು ಪಾಪಯ್ಯ ಟನಲ್‌ವರೆಗೂ ಕುದುರೆ ಸವಾರಿ ಮಾಡಿ ವೀಕ್ಷಿಸಿದರು.
ಕೊಪ್ಪಳ ಜಿಲ್ಲೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತೊಂದು ಯೋಜನೆ ರೂಪಿಸಿದೆ. ಪ್ರವಾಸಿರನ್ನು ಸೆಳೆಯಲು ಜಿಲ್ಲಾಡಳಿತ ಪ್ರವಾಸಿ ತಾಣಗಳಲ್ಲಿ ಕುದುರೆ ಸವಾರಿಗೆ ಪ್ಲ್ಯಾನ್ ಮಾಡಿದೆ.
ತಾಲೂಕಿನ ಸಣಾಪುರ ಕೆರೆಯ ಬಳಿ ಅಧಿಕಾರಿಗಳು ಕುದುರೆ ಸವಾರಿ ಮಾಡಿದರು. ಜಿಲ್ಲಾಧಿಕಾರಿ ಒಂದು ಏರಿದ ಬಳಿಕ ಜಿಪಂ ಸಿಇಒ ಮತ್ತೊಂದು ಕುದುರೆ ಏರಿ ಸವಾರಿ ಮಾಡಿದರು.
ವಿಜಯನಗರದ ಕುದುರೆ ರೈಡಿಂಗ್ ಸ್ಕೂಲ್ ಹಾಗೂ ಇತರ ಕಡೆಗಳಿಂದ ಒಟ್ಟು 7 ಕುದುರೆಗಳನ್ನು ತರಿಸಿ, ಪ್ರಾಯೋಗಿಕವಾಗಿ ಪ್ರವಾಸಿ ತಾಣಗಳನ್ನು ವೀಕ್ಷಿಸಿದರು.
ತಾಲೂಕಿನ ಸಣಾಪುರ, ವಿರೂಪಾಪುರ ಗಡ್ಡೆ, ಆನೆಗೊಂದಿ ಪ್ರವಾಸಿಗರ ನೆಚ್ಚಿನ ತಾಣಗಳಿವೆ. ವಿಜಯನಗರದ ರಾಜಧಾನಿಯಾಗಿದ್ದ ಆನೆಗೊಂದಿ ಪ್ರದೇಶದಲ್ಲಿ ಸಾಕಷ್ಟು ಕೋಟೆ, ದೇವಸ್ಥಾನಗಳು ಇವೆ. ಅಂಜನಾದ್ರಿ ಪರ್ವತಕ್ಕೆ ಪ್ರತಿ ಶನಿವಾರ ಮತ್ತು ಭಾನುವಾರ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಪಂಪಾಸರೋವರ, ನವ ವೃಂದಾವನ, ಋುಷಿಮುಖ ಪರ್ವತ, ವಾಲಿ ಕಿಲ್ಲಾ, ದುರ್ಗಾ ಬೆಟ್ಟಸೇರಿದಂತೆ ಐತಿಹಾಸಿಕ ಸ್ಥಳಗಳು ಇಲ್ಲಿವೆ. ಅಲ್ಲದೆ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ಪ್ರವಾಸಿಗರಿಗೆ ಜಿಲ್ಲಾಡಳಿತ ಕುದುರೆ ಸವಾರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.