1 ನಿಮಿಷ ತಡವಾದ ತೀರ್ಥೋದ್ಭವ: ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ತಾಯಿ ಕಾವೇರಿ

First Published | Oct 18, 2021, 8:41 AM IST

ವಿಘ್ನೇಶ್‌ ಎಂ. ಭೂತನಕಾಡು

ತಲಕಾವೇರಿ(ಅ.18): ಅರ್ಚಕರ ಮಂತ್ರಘೋಷ, ಭಕ್ತರ ಹರ್ಷೋದ್ಗಾರ, ಬ್ರಹ್ಮಗಿರಿ ಬೆಟ್ಟದ ಮಂಜಿನ ವಾತಾವರಣದ ನಡುವೆ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಭಾನುವಾರ ಮಧ್ಯಾಹ್ನ 1.12 ಗಂಟೆಗೆ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು.
 

ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ಜರುಗಬೇಕಿತ್ತು. ಆದರೆ ಒಂದು ನಿಮಿಷ ತಡವಾಗಿ ಕಾವೇರಿ ತೀರ್ಥೋದ್ಭವ ಆಯಿತು. ಕಾವೇರಿ ತೀರ್ಥೋದ್ಭವವಾದ ಸಂದರ್ಭ ಅರ್ಚಕರು ಪವಿತ್ರ ತೀರ್ಥವನ್ನು ಭಕ್ತರಿಗೆ ಪ್ರೋಕ್ಷಣೆ ಮಾಡಿದರು. ಪ್ರಧಾನ ಅರ್ಚಕ ಗುರುರಾಜ್‌ ಭಟ್‌ ನೇತೃತ್ವದಲ್ಲಿ ಆರು ಮಂದಿ ಅರ್ಚಕರು ಪೂಜೆ ನೆರವೇರಿಸಿದರು. ಪವಿತ್ರ ಕುಂಡಿಕೆಯಲ್ಲಿ ಅರ್ಚಕರು ಕುಂಕುಮ ಅರ್ಚನೆ, ಮಹಾ ಮಂಗಳಾರತಿ ಹಾಗೂ ವಿವಿಧ ಪೂಜಾ ವಿಧಾನವನ್ನು ನೆರವೇರಿಸಿದರು.
 

ಸಚಿವ ನಾರಾಯಣಗೌಡ, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್‌, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Tap to resize

ಭಕ್ತರಿಗೆ ತಲಕಾವೇರಿಗೆ ಮುಕ್ತ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಕಂಡುಬಂದರು. ತಲಕಾವೇರಿಯಲ್ಲಿನ ಪವಿತ್ರ ತೀರ್ಥ ಕುಂಡಿಕೆ ಆಭರಣ ಹಾಗೂ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಕುಂಡಿಕೆಯಲ್ಲಿ ಸಾವಿರಾರು ಕೊಡ ತೀರ್ಥವನ್ನು ತೆಗೆದರೂ ಕೂಡ ಕುಂಡಿಕೆ ತುಂಬಿ ತುಳುಕುತ್ತಿತ್ತು.
 

ಕೋವಿಡ್‌ ಶಿಷ್ಟಾಚಾರ ಹಿನ್ನೆಲೆಯಲ್ಲಿ ತೀರ್ಥ ಕುಂಡಿಕೆಯ ಪಕ್ಕದಲ್ಲೇ ಇರುವ ಪವಿತ್ರ ಕೊಳದಲ್ಲಿ ಯಾರಿಗೂ ಹೋಗಲು ಅವಕಾಶ ನೀಡಿರಲಿಲ್ಲ. ಕೊಳದಲ್ಲಿ ಪುಣ್ಯ ಸ್ನಾನಕ್ಕೂ ಅವಕಾಶ ನಿರಾಕರಿಸಲಾಗಿತ್ತು. ಭಾಗಮಂಡಲ ಗ್ರಾಮ ಪಂಚಾಯಿತಿ ಹಾಗೂ ದೇವಾಲಯ ಸಮಿತಿಯ 15 ಮಂದಿ ಸ್ವಯಂ ಸೇವಕರ ತಂಡ ತೀರ್ಥೋದ್ಭವದ ನಂತರ ಕುಂಡಿಕೆಯಿಂದ ತೀರ್ಥ ತೆಗೆದು ಒಂದು ಕಡೆ ಶೇಖರಣೆ ಮಾಡಿ ನಂತರ ಭಕ್ತರಿಗೆ ವಿತರಣೆ ಮಾಡಿದರು.

ಬಳಿಕ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ತ್ರಿವೇಣಿ ಸಂಗಮದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು. ಪಿಂಡ ಪ್ರದಾನ, ಮುಡಿ ಸೇವೆ ವ್ಯವಸ್ಥೆ ಮಾಡಲಾಗಿತ್ತು.

ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ಅಂಗವಾಗಿ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯದ ಬಳಿ ಇರುವ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ, ರಥೋತ್ಸವ ಮೆರವಣಿಗೆ ನಡೆಯಿತು. ಪ್ರತಿ ವರ್ಷದಂತೆ ಕಾವೇರಿ ನೀರಾವರಿ ನಿಗಮದ ವತಿಯಿಂದ ನಡೆದ ರಥೋತ್ಸವದಲ್ಲಿ ಅರ್ಚಕ ಪ್ರಸನ್ನ ಕುಮಾರ್‌ ನೇತೃತ್ವದಲ್ಲಿ ಜಲಾಶಯದ ಕೆಳಭಾಗದಲ್ಲಿರುವ ಕಾವೇರಿ ಪ್ರತಿಮೆ ಬಳಿ ಕಾವೇರಿ ಮಾತೆಗೆ ನೀರಾವರಿ ನಿಗಮದ ವತಿಯಿಂದ ಹೋಮ- ಹವನಗಳನ್ನು ನೆರವೇರಿಸಲಾಯಿತು. ಬಳಿಕ ಕಾವೇರಿ ಮೂರ್ತಿಯನ್ನು ಮರದ ರಥದಲ್ಲಿರಿಸಿ ಅಣೆಕಟ್ಟಿನ ಕೆಳಭಾಗದಲ್ಲಿ ಮೆರವಣಿಗೆ ನಡೆಸಲಾಯಿತು.

Latest Videos

click me!