ಶನಿವಾರ ರಾತ್ರಿಯಿಂದಲೇ ಇಡೀ ಗ್ರಾಮದ ಕೇರಿ ಕೇರಿ ಸುತ್ತಾಡಿ, ಮಹಿಳೆಯರು, ಮಕ್ಕಳು, ಹಿರಿಯರು, ವಯೋವೃದ್ಧರ ಜೊತೆಗೆ ಸರ್ಕಾರದ ಯೋಜನೆ, ಸೌಲಭ್ಯ ನಿಮಗೆ ಸುಲಭವಾಗಿ ತಲುಪುತ್ತಿವೆಯಾ ಎಂದೆಲ್ಲಾ ಪ್ರಶ್ನಿಸಿದರು.
ಶನಿವಾರ ತಡರಾತ್ರಿ ನಿದ್ರೆಗೆ ಜಾರಿದರೂ ಭಾನುವಾರ ನಸುಕಿನಲ್ಲೇ ಎದ್ದು ಶಾಸಕ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಪಂ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ ಜತೆ ವಾಯು ವಿಹಾರ ಮುಗಿಸುತ್ತಿದ್ದಂತೆ ಕೇರಿ ಕೇರಿಗೂ ಭೇಟಿ ನೀಡಿ, ಗ್ರಾಮದ ದೇವಸ್ಥಾನ ಮುಂಭಾಗದ ಅಶ್ವತ್ಥ ಕಟ್ಟೆಯಲ್ಲೂ ಗ್ರಾಮಸ್ಥರು, ಹಿರಿಯರೊಂದಿಗೆ ಕುಶಲೋಪರಿ ವಿಚಾರಿಸಿದರು, ಸಮಸ್ಯೆಗಳ ಕುರಿತು ಚರ್ಚಿಸಿದರು.
ಭೋವಿ ಕಾಲೋನಿಗೆ ತೆರಳಿದ ಸಚಿವರು ಅಲ್ಲೂ ಜನರ ಅಹವಾಲು ಆಲಿಸಿ ಮನವಿ ಸ್ವೀಕರಿಸಿದರು. ಬಹುತೇಕ ಮನವಿಗಳು ಬಗರ್ ಹುಕುಂ ಸಾಗುವಳಿ ಪತ್ರ, ಮನೆ, ನಿವೇಶನ ಕೋರಿ, ಗ್ರಾಮಕ್ಕೆ ಸ್ಮಶಾನ ಕೋರಿದ್ದಾಗಿದ್ದವು. ಗ್ರಾಮಸ್ಥರ ಪೈಕಿ ಯಾರಾದರೂ ಜಮೀನು ನೀಡಿದರೆ ಅದನ್ನು ಸರ್ಕಾರದಿಂದ ಖರೀದಿಸಿ, ಅಲ್ಲಿ ಮನೆ ಕಟ್ಟಿಸಿಕೊಡಲು, ಸ್ಮಶಾನ ನಿರ್ಮಿಸಲು ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ಇದೇ ವೇಳೆ ಕೊರೋನಾ ವಾರಿಯರ್ಸ್ಗೆ ಸಚಿವರು ಸನ್ಮಾನಿಸಿದರು.
ಜನಸಾಮಾನ್ಯರಂತೆ ಕುಂದೂರು ಗ್ರಾಮದ ಗೂಡಂಗಡಿಯಲ್ಲಿ ಟೀ ಕುಡಿದು ಜನರ ಜೊತೆಗೆ ಚರ್ಚಿಸಿದರು. ನಂತರ ದಲಿತರ ಕಾಲೋನಿಗೆ ತೆರಳಿದಾಗ ಮಹಿಳೆಯರು ಆರತಿ ಮಾಡಿ, ಸಚಿವ, ಶಾಸಕರಿಗೆ ಆತ್ಮೀಯ ಸ್ವಾಗತ ಕೋರಿದರು. ಬಳಿಕ ದಲಿತ ಮುಖಂಡ, ಬಗರ್ ಹುಕುಂ ಸಮಿತಿ ಸದಸ್ಯ ಡಿ.ಶಾಂತರಾಜ, ಶಾರದಮ್ಮ ದಂಪತಿ ಮನೆಗೆ ತೆರಳಿ ರಾಗಿ ತಾಲಿಪಟ್ಟು, ತಟ್ಟೆಇಡ್ಲಿ, ತರಕಾರಿ ಉಪ್ಪಿಟ್ಟು, ಜಾಮೂನು, ಕಾಳು ಪಲ್ಯ, ಚಟ್ನಿಪುಡಿ, ತುಪ್ಪ, ಮೊಸರು ಒಳಗೊಂಡ ಬೆಳಗಿನ ಉಪಹಾರ ಮುಗಿಸಿದರು. ಯಾವುದೇ ಹಮ್ಮುಬಿಮ್ಮು ಇಲ್ಲದೆ ಇದೇ ತಾಲಿಪಟ್ಟು, ಕೆಂಪು ಚಟ್ನಿ, ತುಪ್ಪ, ತಿಂಡಿಗಳನ್ನೆಲ್ಲಾ ಕಟ್ಟಿಕೊಡಿ. ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಇದನ್ನೇ ತಿನ್ನುತ್ತೇನೆಂದು ಹೇಳುವ ಮೂಲಕ ಶಾಂತರಾಜ ದಂಪತಿ, ಕಾಲೋನಿ ಜನರು, ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು.
ಅನಾರೋಗ್ಯದಿಂದ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿರುವ ಕುಂದೂರು ಗ್ರಾಮದ ನಯನಾ, ಮಲ್ಲಿಕಾ ಸೋದರಿಯರನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಳ್ಳುವುದಾಗಿ ಸಚಿವ ಆರ್.ಅಶೋಕ ಘೋಷಿಸಿದರು. ಎಸ್ಸೆಸ್ಸೆಲ್ಸಿವರೆಗಿನ ಓದಿನ ಖರ್ಚನ್ನು ಭರಿಸುತ್ತೇನೆ. ಬೆಂಗಳೂರಲ್ಲಾಗಲಿ ಅಥವಾ ಹೊನ್ನಾಳಿಯಲ್ಲೇ ಆಗಲಿ ಈ ಮಕ್ಕಳ ಓದಿಗೆ ನೆರವು ನೀಡುವೆ. ದೇವರು ಕೊಟ್ಟರೆ ಪಿಯುಸಿಯನ್ನೂ ಓದಿಸುತ್ತೇನೆ ಎಂದರು. ಇಡೀ ಗ್ರಾಮಸ್ಥರು, ಹೊನ್ನಾಳಿ ಜನತೆ ತೋರಿದ ಪ್ರೀತಿ, ಅಭಿಮಾನಕ್ಕೆ ಖುಷಿ ಆದರಲ್ಲದೆ, ಇನ್ನೊಂದು ತಿಂಗಳಲ್ಲಿ ಮತ್ತೆ ಹೊನ್ನಾಳಿಗೆ ಬಂದು, ಎಸಿ ಕಚೇರಿ ಉದ್ಘಾಟಿಸುವ ವಾಗ್ದಾನ ಮಾಡಿದರು.
ಗ್ರಾಮ ವಾಸ್ತವ್ಯ ಅಂದರೆ ಬಂದ ಸಿದ್ಧ, ಹೋದ ಸಿದ್ಧ ಅಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಮಧ್ಯೆಕಂದಕ ದೂರವಾಗುವಂತಿರಬೇಕು ಎಂದು ಕಂದಾಯ ಸಚಿವ ಆರ್.ಅಶೋಕ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದರು.
ಕುಂದೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲೇ ಮಲಗಬೇಕು. ಅಂಗನವಾಡಿ ಊಟವನ್ನೇ ಮಾಡಬೇಕು ಎಂದು ಸೂಚಿಸಿದರು.
ರಾಜ್ಯದ 227 ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗಿದೆ. ಅಲ್ಲಿನ ವಸ್ತುಸ್ಥಿತಿ ಅವಲೋಕಿಸಲಾಗಿದೆ. ಕಂದಾಯ ಇಲಾಖೆಯನ್ನೇ ಮನೆ ಮನೆಗೆ ಕೊಂಡೊಯ್ಯುವಂತೆ ಬೇರೆ ಬೇರೆ ಇಲಾಖೆಗಳನ್ನೂ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇವೆ. ದಲಿತ ಕೇರಿಯ ಜನರು ಬಹುತೇಕ ಜಮೀನು, ಸೂರು, ನೀರು ಕೇಳುತ್ತಿದ್ದಾರೆ. ಅವುಗಳನ್ನು ಆದಷ್ಟು ಬೇಗ ಪೂರೈಸುತ್ತೇನೆ. ಆಶ್ರಯ ಯೋಜನೆಯಿಂದ ಜಮೀನು ಕೊಡಿಸಲು ವ್ಯವಸ್ಥೆ ಮಾಡುತ್ತೇನೆ ಎಂದು ತಿಳಿಸಿದರು.