ಚಿಕ್ಕಮಗಳೂರಿನ ಪ್ರಸಿದ್ಧ ಮಾಣಿಕ್ಯಾಧಾರ ಜಲಪಾತದ ಬಳಿ ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಥರ್ಮಲ್ ಡ್ರೋನ್ ಸೇರಿದಂತೆ ಬೃಹತ್ ಶೋಧ ಕಾರ್ಯಾಚರಣೆ ನಡೆದರೂ ಬಾಲಕಿಯ ಸುಳಿವು ಸಿಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಚಿಕ್ಕಮಗಳೂರು (ಏ.08): ಇತ್ತೀಚೆಗಷ್ಟೇ ಕೊಡಗು ಜಿಲ್ಲೆಯಲ್ಲಿ ಕೇರಳದ ಶರಣ್ಯ ಕಾಡಿನಲ್ಲಿ ಟ್ರೆಕ್ಕಿಂಗ್ ಹೋದಾಗ ನಾಪತ್ತೆಯಾಗಿ 4 ದಿನದ ಬಳಿಕ ಡ್ರೋನ್ ಕ್ಯಾಮೆರಾ ಹುಡುಕಾಟದಲ್ಲಿ ಪತ್ತೆಯಾಗಿದ್ದಳು. ಆದರೆ, ಇದೀಗ ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುವ ಕಾಫಿನಾಡು ಚಿಕ್ಕಮಗಳೂರಿಗೆ ಬೇಸಿಗೆ ರಜೆಯ ನಿಮಿತ್ತ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಕುಟುಂಬದ ಬಾಲಕಿ ನಾಪತ್ತೆ ಆಗಿದ್ದಾಳೆ.
ದತ್ತಪೀಠದ ತಪ್ಪಲಿನಲ್ಲಿರುವ ಪ್ರಸಿದ್ಧ ಮಾಣಿಕ್ಯಾಧಾರ ಜಲಪಾತದ ಬಳಿ 15 ವರ್ಷದ ಬಾಲಕಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿದ್ದು, ಇಡೀ ಜಿಲ್ಲಾಡಳಿತವೇ ಶೋಧ ಕಾರ್ಯದಲ್ಲಿ ತೊಡಗಿದೆ. ಆದರೆ, ಈಕೆ ಡ್ರೋನ್ ಕ್ಯಾಮೆರಾ ಕಣ್ಣಿಗೂ ಕಾಣಿಸುವುದಿಲ್ಲ.
26
ಪ್ರವಾಸದ ಖುಷಿ ಕ್ಷಣಾರ್ಧದಲ್ಲಿ ಮಾಯ:
ಕೇರಳದ ಪಾಲಕ್ಕಾಡ್ ಜಿಲ್ಲೆಯ ಶ್ರೀನಂದ (15) ನಾಪತ್ತೆಯಾದ ಬಾಲಕಿ. ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಶ್ರೀನಂದ ತನ್ನ ತಂದೆ-ತಾಯಿ, ಅಜ್ಜ-ಅಜ್ಜಿ ಮತ್ತು ಚಿಕ್ಕಪ್ಪ-ಚಿಕ್ಕಮ್ಮ ಸೇರಿದಂತೆ ಇಡೀ ಕುಟುಂಬದೊಂದಿಗೆ ಕರ್ನಾಟಕ ಪ್ರವಾಸಕ್ಕೆ ಬಂದಿದ್ದಳು. ಹಂಪಿ, ಉಡುಪಿ ಮತ್ತು ಮಂಗಳೂರಿನ ಸುಂದರ ತಾಣಗಳನ್ನು ವೀಕ್ಷಿಸಿದ ಬಳಿಕ ಈ ಕುಟುಂಬ ಚಿಕ್ಕಮಗಳೂರಿಗೆ ಭೇಟಿ ನೀಡಿತ್ತು. ಆದರೆ, ದತ್ತಪೀಠದ ಬಳಿಯ ಮಾಣಿಕ್ಯಾಧಾರ ಜಲಪಾತದ ಬಳಿ ಈ ದುರ್ಘಟನೆ ಸಂಭವಿಸಿದೆ.
36
ಕ್ಷಣಾರ್ಧದಲ್ಲಿ ಮಾಯವಾದ ಬಾಲಕಿ:
ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಮಾಣಿಕ್ಯಾಧಾರದ ಮೆಟ್ಟಿಲುಗಳನ್ನು ಇಳಿಯುತ್ತಿದ್ದರು. ಕುಟುಂಬದ ಸದಸ್ಯರೆಲ್ಲಾ ಮುಂದೆ ಹೋಗುತ್ತಿದ್ದರೆ, ಶ್ರೀನಂದ ಅವರ ಹಿಂದೆಯೇ ಬರುತ್ತಿದ್ದಳು. ಆದರೆ, ಒಂದು ತಿರುವಿನಲ್ಲಿ ನೋಡುವಷ್ಟರಲ್ಲಿ ಆಕೆ ಅಲ್ಲಿರಲಿಲ್ಲ. ಕೇವಲ ಕ್ಷಣಾರ್ಧದ ಅಂತರದಲ್ಲಿ ಬಾಲಕಿ ದಟ್ಟ ಕಾನನದ ನಡುವೆ ನಾಪತ್ತೆಯಾಗಿದ್ದಾಳೆ. ತಕ್ಷಣವೇ ಕುಟುಂಬಸ್ಥರು ಸುತ್ತಮುತ್ತ ಗಾಬರಿಯಿಂದ ಹುಡುಕಾಡಿದರೂ ಆಕೆಯ ಯಾವುದೇ ಸುಳಿವು ಸಿಗಲಿಲ್ಲ.
ಬಾಲಕಿ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಮತ್ತು ಅಗ್ನಿಶಾಮಕ ದಳದ 30ಕ್ಕೂ ಹೆಚ್ಚು ಸಿಬ್ಬಂದಿಗಳು ಧಾವಿಸಿದರು. ಕಗ್ಗತ್ತಲು ಮತ್ತು ದಟ್ಟ ಅಡವಿಯ ನಡುವೆಯೂ ಮಧ್ಯರಾತ್ರಿ 1 ಗಂಟೆಯವರೆಗೆ ಸತತ ಹುಡುಕಾಟ ನಡೆಸಲಾಯಿತು. ಆದರೆ, ಕಡಿದಾದ ಬೆಟ್ಟ-ಗುಡ್ಡಗಳ ಪ್ರದೇಶವಾದ್ದರಿಂದ ಕಾರ್ಯಾಚರಣೆಗೆ ತೀವ್ರ ಅಡ್ಡಿ ಉಂಟಾಯಿತು. ಹೀಗಾಗಿ, ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಲಾಯಿತು.
56
ಥರ್ಮಲ್ ಡ್ರೋನ್ ಮತ್ತು ಎಸ್.ಡಿ.ಆರ್.ಎಫ್ ಬಳಕೆ:
ಇಂದು ಮುಂಜಾನೆ 5 ಗಂಟೆಯಿಂದಲೇ ಕಾರ್ಯಾಚರಣೆ ಚುರುಕುಗೊಂಡಿದೆ. ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರ ಮಾರ್ಗದರ್ಶನದಲ್ಲಿ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿಗಳು 5 ಪ್ರತ್ಯೇಕ ತಂಡಗಳಾಗಿ ಕಾಡಿನೊಳಗೆ ಹುಡುಕಾಟ ನಡೆಸುತ್ತಿದ್ದಾರೆ. ಬಾಲಕಿ ಕಾಡಿನೊಳಗೆ ಎಲ್ಲಾದರೂ ಅವಿತಿದ್ದಲ್ಲಿ ಪತ್ತೆ ಹಚ್ಚಲು 'ಥರ್ಮಲ್ ಡ್ರೋನ್' (ಉಷ್ಣಾಂಶದ ಆಧಾರದ ಮೇಲೆ ಪತ್ತೆ ಹಚ್ಚುವ ಡ್ರೋನ್) ಬಳಸಲಾಗುತ್ತಿದೆ. ಅಲ್ಲದೆ, ಕಾರ್ಯಾಚರಣೆಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಕೂಡ ಕೈಜೋಡಿಸಿದೆ.
66
ನಿಗೂಢತೆಗೆ ಕಾರಣವೇನು?
ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಲು ಜಾರಿ ಅಥವಾ ಮಂಜು ಮುಸುಕಿದ ವಾತಾವರಣದಲ್ಲಿ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಆದರೆ, ಈಗ ಕಡು ಬೇಸಿಗೆ ಇರುವುದರಿಂದ ನೆಲ ಒಣಗಿದೆ. ಬಾಲಕಿ ನಾಪತ್ತೆಯಾದ ಒಂದು ಗಂಟೆಯ ಒಳಗೇ ಹತ್ತಾರು ಜನರು ಆ ಭಾಗದಲ್ಲಿ ಹುಡುಕಾಡಿದರೂ ಸಿಗದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಆಕೆ ಕಾಡು ಪ್ರಾಣಿಗಳ ದಾಳಿಗೆ ಒಳಗಾಗಿದ್ದಾಳೋ ಅಥವಾ ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದಿದ್ದಾಳೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಮಾಣಿಕ್ಯಾಧಾರದ ಸುತ್ತಮುತ್ತಲಿನ 2-3 ಕಿಲೋಮೀಟರ್ ವ್ಯಾಪ್ತಿಯಲ್ಲಿ ತೀವ್ರ ಶೋಧ ಮುಂದುವರಿದಿದೆ. ಬಾಲಕಿಯ ಕುಟುಂಬಸ್ಥರು ಕಣ್ಣೀರು ಹಾಕುತ್ತಾ ತಮ್ಮ ಮಗಳಿಗಾಗಿ ಕಾಯುತ್ತಿದ್ದಾರೆ.