
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಆದರೆ ಇದರ ಪರಿಣಾಮ ದಕ್ಷಿಣ ಭಾರತದ ಮೇಲೆ ಕಡಿಮೆ ಇದೆ. ಏಕೆಂದರೆ ಬಹಳ ದೂರ ಇರುವ ಭುವನೇಶ್ವರ್, ಕೋಲ್ಕತ್ತಾ, ಬಾಂಗ್ಲಾದೇಶ ಸಮುದ್ರ ತೀರದ ಬಳಿ ನಿರ್ಮಾಣವಾಗಿದೆ. ಅಷ್ಟ ಅಲ್ಲದೇ, ಅಲ್ಲಿಯೇ ರೌಂಡ್ ಆಗುತ್ತಿದೆ. 24ರಂದು ಕೋಲ್ಕತ್ತಾ ಬಳಿ ಸಮುದ್ರ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಇದರ ಪ್ರಭಾವ ದಕ್ಷಿಣ ಭಾರತದ ಮೇಲೆ ಕಡಿಮೆ ಇದೆ. ಸದ್ಯ ವಾಯುಭಾರ ಕುಸಿತದಿಂದ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದು ವಾಯುಭಾರ ಕುಸಿತಕ್ಕೆ ಕಾರಣವಾಗಬಹುದು. ಇದು ಈಗಾಗಲೇ ಅರ್ಧದಷ್ಟು ಸಾಗರದ ಮೇಲೆಯೂ ಮತ್ತು ಅರ್ಧದಷ್ಟು ಭೂಮಿಯ ಮೇಲ್ಮೈ ಮೇಲೆಯೂ ವ್ಯಾಪಿಸಿದೆ. ಇದರ ಪರಿಣಾಮವಾಗಿ, ಸಮುದ್ರ ಮಟ್ಟದಿಂದ 5.8 ಕಿಲೋಮೀಟರ್ ಎತ್ತರದಲ್ಲಿ ಮೋಡಗಳು ಕಂಡುಬರುತ್ತವೆ.
ಭಾರತೀಯ ಹವಾಮಾನ ಇಲಾಖೆಯು ಗಮನಾರ್ಹ ಮಳೆಯಾಗುವ ಮುನ್ಸೂಚನೆ ನೀಡಿದೆ. ಆಗಸ್ಟ್ 23 ಮತ್ತು 27ರ ನಡುವೆ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ ಹಾಗೂ ಇತರೆಡೆಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಆಗಸ್ಟ್ 23ರಂದು ಕರಾವಳಿ ಮತ್ತು ಮಲೆನಾಡು (ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು) ಕೆಲವು ಕಡೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಅನೇಕ ಸ್ಥಳಗಳಲ್ಲಿ ಹಗುರ-ಮಧ್ಯಮ ಮಳೆಯಾಗುವ ಮುನ್ಸೂಚನೆ ಇದೆ.
ಉಳಿದಂತೆ ಆಗಸ್ಟ್ 24ರಂದು ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನಲ್ಲಿ ಹಗುರ-ಮಧ್ಯಮ ಮಳೆಯಾಗುವ ನಿರೀಕ್ಷೆ ಇದೆ. ಆಗಸ್ಟ್ 25ರಂದು ಕರಾವಳಿಯಲ್ಲಿ ಹೆಚ್ಚು ಕಡೆ ಹಗುರ ಮಳೆಯಾಗುವ ನಿರೀಕ್ಷೆ ಇದೆ. ಒಳನಾಡಿನಲ್ಲಿ ಕೆಲವು ಸ್ಥಳಗಳಲ್ಲಿ ಮಾತ್ರ ಮಳೆಯಾಗುತ್ತದೆ. ಆಗಸ್ಟ್ 26-27 ರಂದು ಕರಾವಳಿ ಭಾಗದಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಲಿದೆ. ಉಳಿದಂತೆ ಒಳನಾಡಿನ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದ್ದು, ಆ ಬಳಿಕ ಮಳೆಯ ಚಟುವಟಿಕೆಗಳು ಕಡಿಮೆಯಾಗಲಿದೆ.
ಬಂಗಾಳ ಕೊಲ್ಲಿಯ ಮೇಲೆ ವಾಯುಭಾರ ಕುಸಿತದಿಂದ ಚಂಡಮಾರುತದಂತಹ ವಾಯು ಪರಿಚಲನೆಯ ಪರಿಸ್ಥಿತಿಗಳು ಉಂಟಾಗಿವೆ. ಗಂಟೆಗೆ 60 ಕಿ.ಮೀ ವರೆಗಿನ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ಸಮುದ್ರ ಮಟ್ಟದಿಂದ 4.5 ಕಿ.ಮೀ. ಎತ್ತರದವರೆಗೆ ಮೋಡಗಳು ಆವರಿಸಿಕೊಂಡಿವೆ. ಈ ಪರಿಸ್ಥಿತಿಯು ಮಳೆಗೆ ಪೂರಕವಾಗಿದ್ದರೂ, ಮಳೆಯು ಹೆಚ್ಚಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕಡೆಗೆ ಕೇಂದ್ರೀಕೃತವಾಗಿದೆ. ನಮಗೆ ಕೇವಲ ಸಾಧಾರಣ ಮಳೆ ಮಾತ್ರ ಲಭ್ಯವಾಗುತ್ತಿದೆ.
ಅರೇಬಿಯನ್ ಸಮುದ್ರದ ಮೇಲೆ ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಮಾಲ್ಡೀವ್ಸ್ ಸಮೀಪ ಚಂಡಮಾರುತದ ಪರಿಚಲನೆ ಉಂಟಾಗುವ ಸಾಧ್ಯತೆಯಿದ್ದು, ಇದರಿಂದ ಆ ಪ್ರದೇಶದಲ್ಲಿ ಮೋಡಗಳು ದಟ್ಟವಾಗಿ ಆವರಿಸಲಿವೆ. ಬಂಗಾಳ ಕೊಲ್ಲಿಯಲ್ಲಿನ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ, ಮೀನುಗಾರರಿಗೆ ಆಗಸ್ಟ್ 26 ರವರೆಗೆ ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪೆಸಿಫಿಕ್ ಮಹಾಸಾಗರದಲ್ಲಿ ಪರಿಸ್ಥಿತಿ ತೀವ್ರವಾಗಿದೆ. ಗಂಟೆಗೆ 130 ಕಿ.ಮೀ ವೇಗದಲ್ಲಿ ಗಾಳಿ ಬೀಸುವುದರೊಂದಿಗೆ 'ಲಾಲಾ' ಚಂಡಮಾರುತವು ಪ್ರಬಲವಾಗಿಯೇ ಮುಂದುವರಿದಿದೆ. 'ಸೌಡೆಲ್' ಚಂಡಮಾರುತವು ಮತ್ತಷ್ಟು ತೀವ್ರಗೊಂಡಿದ್ದು, ಇದರ ಸುತ್ತಲೂ ಗಂಟೆಗೆ 230 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದನ್ನು ಅತ್ಯಂತ ಪ್ರಬಲ ಚಂಡಮಾರುತವೆಂದು ವರ್ಗೀಕರಿಸಲಾಗಿದ್ದು, ಇದು ಚೀನಾದತ್ತ ಚಲಿಸುತ್ತಿದೆ. ಇದು ಮುಂದಿನ ಗುರುವಾರದ ನಂತರ ಚೀನಾದ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದೆ. ಎರಡು ಹೊಸ ಚಂಡಮಾರುತಗಳು ರೂಪುಗೊಂಡಿವೆ. ಅವುಗಳಲ್ಲಿ ಒಂದು 'ಮೋಕ್' ಆಗಿದ್ದು, ಇದರ ಗಾಳಿಯ ವೇಗ ಗಂಟೆಗೆ 95 ಕಿ.ಮೀ. ಇದೆ. ಇನ್ನೊಂದು '18W' ಎಂಬ ಸಂಕೇತನಾಮವನ್ನು ಹೊಂದಿದ್ದು, ಇದರ ಗಾಳಿಯ ವೇಗ ಗಂಟೆಗೆ 65 ಕಿ.ಮೀ. ಇದೆ. ಈ ನಾಲ್ಕೂ ಚಂಡಮಾರುತಗಳು ಪೆಸಿಫಿಕ್ ಮಹಾಸಾಗರದಲ್ಲಿವೆ.
ಎಲ್ ನಿನೋ ಪ್ರಭಾವ ಇಲ್ಲದಿದ್ದರೆ ಕರ್ನಾಟಕದಲ್ಲಿ ಪ್ರವಾಹದ ಸ್ಥಿತಿ ಈ ವೇಳೆ ನಿರ್ಮಾಣವಾಗುತ್ತಿತ್ತು. ಊರಿಗೆ ಊರೇ ನೀರಿನಲ್ಲಿ ಮುಳುಗಿ ಹೋಗುತ್ತಿತ್ತು. ಆದರೆ ಎಲ್ ನಿನೋದಿಂದ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಒಡಿಶಾ ಮೇಲೆ ಉಂಟಾಗಿರುವ ಚಂಡಮಾರುತದ ಪರಿಚಲನೆಯ ಮೇಲೆ ನಾವು ಏನಾದರೂ ಭರವಸೆ ಇಡಬಹುದು. ಇದರಿಂದ ಮಳೆಯಾದರೆ, ರೈತರಿಗೆ ಒಳ್ಳೆಯದಾಗುತ್ತದೆ.