Published : Jul 20, 2025, 09:18 AM ISTUpdated : Jul 20, 2025, 09:20 AM IST
ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರೆದಿದ್ದು, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಮಳೆಯಿಂದಾಗಿ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರಿದಿದೆ. ಕಳೆದೊಂದು ವಾರದಿಂದ ರಾಜ್ಯದ ಬಹುತೇಕ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಮಳೆ ಜೊತೆ ಬೀಸುತ್ತಿರುವ ಗಾಳಿ ಜನರನ್ನು ಮನೆಯಿಂದ ಹೊರಬರದಂತೆ ತಡೆಯುತ್ತಿದೆ. ಇಂದು ಸಹ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಹಾಗಾಗಿ ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗುವುದನ್ನು ನಿಲ್ಲಿಸಿ.
26
ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್
ರಾಜ್ಯದ 3 ಜಿಲ್ಲೆಗಳಿಗೆ ರೆಡ್, 4 ಜಿಲ್ಲೆಗಳಿಗೆ ಆರೆಂಜ್, ಉಳಿದ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಅತ್ಯಧಿಕ ಮಳೆಯ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
36
ಆರೆಂಜ್, ಯೆಲ್ಲೋ ಅಲರ್ಟ್
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಸಾಧರಣ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗಾಳಿಯ ವೇಗ ಗಂಟೆಗೆ 40-50ಕಿ.ಮೀ ಇರುವ ಸಾಧ್ಯತೆಗಳಿವೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಯಾದಗಿರಿ ತಾಲೂಕಿನ ಗುರುಸಣಗಿ, ನಾಯ್ಕಲ್ ಸೇರಿ ಹಲವು ಗ್ರಾಮದ ಜಮೀನುಗಳು ಜಲಾವೃತಗೊಂಡಿದ್ದು, ಹತ್ತಿ, ತೊಗರಿ, ಭತ್ತ, ಉದ್ದು, ಹೆಸರುಬೆಳೆ ನೀರು ಪಾಲಾಗಿದೆ. ರೈತರು ಜಮೀನುಗಳು ಕೆರೆಯಂತಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಇಷ್ಟು ದಿನ ಮಳೆ ಇಲ್ಲ ಅಂತಿದ್ದೀವಿ. ಇದೀಗ ಮಳೆ ಹೆಚ್ಚಾದ ಕಾರಣ ಬೆಳೆಯೆಲ್ಲಾ ನಾಶವಾಗಿದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.
56
ಸಂಜೆ ಮಳೆಗೆ ಹೈರಾಣದ ರಾಯಚೂರು ಜನತೆ
ಶನಿವಾರ ಸಂಜೆ ಸುರಿದ ಮಳೆಗೆರ ರಾಯಚೂರಿನ ಜನರು ಹೈರಾಣು ಆಗಿದ್ದಾರೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಅಡವಿಖಾನಾಪುರದಲ್ಲಿ ಮಳೆಗೆ ಹಳ್ಳ ತುಂಬಿದ್ದರಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಅಡವಿ ಖಾನಾಪುರದಿಂದ ಹೀರಾಪುರ ಗ್ರಾಮದ ಖಾಸಗಿ ಶಾಲೆಗೆ ಹೋಗಿದ್ದ ಮಕ್ಕಳು ಹಳ್ಳ ದಾಟಲು ಭಯಗೊಂಡಿದ್ದರು. ಕೊನೆಗೆ ಪೋಷಕರು ಬಂದು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹಳ್ಳ ದಾಟುತ್ತಿದ್ದಾರೆ. ಮಳೆಯಿಂದಾಗಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.
66
ಮಾರ್ಕಂಡೇಯ ನದಿ ಅಬ್ಬರ, ರೈತರ ಬೆಳೆಗಳು ಸಂಪೂರ್ಣ ನಾಶ
ಪಶ್ಚಿಮಘಟ್ಟ ಪ್ರದೇಶ ಮತ್ತು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮಾರ್ಕಂಡೇಯ ನದಿ ತುಂಬಿ ಹರಿಯುತ್ತಿದೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಮಾರ್ಕಂಡೇಯ ನದಿ ಅಬ್ಬರಕ್ಕೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು, ಮೆಕ್ಕೆಜೋಳ, ಗೋವಿನಜೋಳ, ಮೆಣಸಿನಕಾಯಿ, ಇಂದ್ರಾಣಿ, ಬೆಳಗಾವಿ ಬಾಸುಮತಿ ಸೇರಿ ವಿವಿಧ ತಳಿಯ ಭತ್ತ ನಾಶವಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಮತ್ತೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕುವಂತಾಗಿದೆ.