ಕಲಬುರಗಿಗೆ ಆರ್ಥಿಕ ಹಿನ್ನಡೆ, ತಲಾ ಆದಾಯ ಇದೇ ಮೊದಲ ಬಾರಿಗೆ ಋಣಾತ್ಮಕ! ಜಿಲ್ಲೆ ಕೊನೆಯ ಸ್ಥಾನಕ್ಕೆ ಕುಸಿತ!

Published : Mar 17, 2026, 10:55 PM IST

ವರದಿ: ಶೇಷಮೂರ್ತಿ ಅವಧಾನಿ2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ, ಕಲಬುರಗಿ ಜಿಲ್ಲೆಯ ತಲಾ ಆದಾಯವು ಮೊದಲ ಬಾರಿಗೆ ಋಣಾತ್ಮಕ ಬೆಳವಣಿಗೆ ದಾಖಲಿಸಿ, ರಾಜ್ಯದಲ್ಲೇ ಕೊನೆಯ ಸ್ಥಾನ ಪಡೆದಿದೆ. ಕೃಷಿ ವೈಫಲ್ಯ, ಉದ್ದಿಮೆಗಳ ತೀವ್ರ ಕೊರತೆ ಜಿಲ್ಲೆಯು ಆರ್ಥಿಕವಾಗಿ ತೀವ್ರ ಹಿನ್ನಡೆ ಅನುಭವಿಸಿದೆ.

PREV
17
ತಲಾ ಆದಾಯ ಇದೇ ಮೊದಲ ಬಾರಿಗೆ ಋಣಾತ್ಮಕ

ಕಲಬುರಗಿ: ರಾಜ್ಯ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ, ಸಾಂಖ್ಯಿಕ ಇಲಾಖೆ ನಡೆಸಿರುವ 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಜಿಲ್ಲೆಯ ತಲಾ ಆದಾಯ ಇದೇ ಮೊದಲ ಬಾರಿಗೆ ಋಣಾತ್ಮಕ ಬೆಳವಣಿಗೆ ದಾಖಲಿಸಿದೆ! ಇದರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ, ಬಡತನ ರೇಖೆ ಕೆಳಗಿರುವ ಕುಟುಂಬಗಳ ಲೆಕ್ಕಾಚಾರ, ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳ ವಿಷಯ, ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿಗಳ ಆಚರಣೆ ಸೇರಿದಂತೆ ಹಲವು ರಂಗಗಳಲ್ಲಿ ಕಳಪೆ ಸಾಧನೆಯಿಂದ ಗಮನಸೆಳೆಯುತ್ತಿದ್ದ ಕಲಬುರಗಿಗೆ ತಲಾ ಆದಾಯಾದಲ್ಲೂ ಲಾಸ್ಟ್‌ ಎಂಬ ಹೊಸ ಪಟ್ಟ ದೊರಕಿದೆ.

27
ತಲಾ ಆದಾಯದಲ್ಲಿ ರಾಜ್ಯದ ಸರಾಸರಿ 3, 86, 156 ರು. ನಷ್ಟು ದಾಖಲು

2023-24ರಲ್ಲಿ ನಡೆದ ಆರ್ಥಿಕ ಸಮೀಕ್ಷೆಯಲ್ಲಿದ್ದ ಕಲಬುರಗಿ 1, 45, 377 ಲಕ್ಷ ರು. ತಲಾ ಆದಾಯ 2026- 27ರ ಸಮೀಕ್ಷೆಯಲ್ಲಿ 928 ರು. ನಷ್ಟು ಜಿಲ್ಲೆಯ ತಲಾ ಆದಾಯ ತಗ್ಗಿ 1, 44, 449 ರು. ದಾಖಲಾಗಿದೆ. ತಲಾ ಆದಾಯದಲ್ಲಿ ರಾಜ್ಯದ ಸರಾಸರಿ 3, 86, 156 ರು. ನಷ್ಟು ದಾಖಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ ತಲಾ ಆದಾಯದಲ್ಲಿ ಬೆಳವಣಿಗೆಯಾಗಿದ್ದು ಜಿಲ್ಲೆಯಲ್ಲಿ ಮಾತ್ರ ಇಳಿಕೆ ದಾಖಲಾಗಿದೆ. ಆರ್ಥಿಕವಾಗಿ ಕಂಡಿರುವ ಈ ವಿಲಕ್ಷಣ ಬೆಳವಣಿಗೆ ಜಿಲ್ಲೆಯ ಪ್ರಗತಿ ವಿಚಾರದಲ್ಲಿ ಆತಂಕ ಹುಟ್ಟುಹಾಕಿದೆಯಲ್ಲದೆ ಇಲ್ಲಿನ ನೀತಿ ನಿರೂಪಕರಿಗೆ, ರಾಜ್ಯ ಸರ್ಕಾರಕ್ಕೆ, ಜನ ನಾಯಕರಿಗೂ ಎಚ್ಚರಿಕೆ ಗಂಟೆಯಾಗಿ ಹೊರಹೊಮ್ಮಿದೆ.

37
ಉದ್ದಿಮೆಗಳ ಬರ: ಆದಾಯಕ್ಕೆ ಗರ

ಉದ್ದಿಮೆಗಳ ಬರದಿಂದ ಜಿಲ್ಲೆಯಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಳು ಅರಳುತ್ತಿಲ್ಲ, ಹೀಗಾಗಿ ತಲಾ ಆದಾಯಕ್ಕೆ ಭಾರಿ ಪೆಟ್ಟು ಬೀಳುತ್ತಿದೆ ಎಂಬ ಮಾತುಗಳಿವೆ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸೇರಿದಂತೆ ಹಲವು ರಂಗಗಳಲ್ಲಿನ ಧನಾತ್ಮಕತೆಯೇ ತಲಾ ಆದಾಯಕ್ಕೂ ಮೂಲ, ಆದರಿಲ್ಲಿ ಬಿಸಿಲೂರಲ್ಲಿ ತಲಾ ಆದಾಯ ಹೆಚ್ಚಿಸುವಂತಹ ಯಾವುದೇ ಫಲಪ್ರದ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ತಲಾ ಆದಾಯ ತಾನಾಗಿಯೇ ಹೆಚ್ಚೆಂದರೆ ಹೇಗೆಂಬ ಪ್ರಶ್ನೆಗಳು ಮೂಡಿವೆ.

47
ಕಲಬುರಗಿ ಲಾಸ್ಟ್‌: ಇವೆಲ್ಲ ಕಾರಣಗಳಿರಬಹುದೆ?
  • ಕಲಬುರಗಿ ತಲಾ ಆದಾಯಕ್ಕೆ ಕೃಷಿಯೇ ಮೂಲಾಧಾರ, 3 ವರ್ಷದಿಂದ ಕೃಷಿ ಲಾಭದಾಯಕವಾಗಿಲ್ಲ
  • ಅತಿವೃಷ್ಟಿ, ನೆರೆಯಿಂದ ಕೃಷಿ ಕುಸಿತ, ತಲ್ಲಣ- ಜನರಿಗೆ ಆದಾಯವೆಲ್ಲಿಂದ ಬರಬೇಕು?
  • ಉದ್ದಿಮೆಗಳ ಬರ, ಉದ್ಯೋಗಕ್ಕಾಗಿ 6ರಿಂದ 8ತಿಂಗಳು ಜನರ ಗುಳೆ ಮಾಮೂಲು
  • ಟೆಕ್ಸಟೈಲ್, ಸೋಲಾರ್‌ ಪಾರ್ಕ್‌ನಂತಹ ಉದ್ದಿಮೆಗಳು ಘೋಷಣೆಯಲ್ಲೇ ನರಳುತ್ತಿವೆ
  • ಸಿಮೆಂಟ್‌ ಉದ್ದಿಮೆಗಳಲ್ಲಿ ಸ್ಥಳೀಯರ ಬರ, ತಲಾ ಆದಾಯಕ್ಕೆ ಕೊಡುಗೆ ಅಷ್ಟಕ್ಕಷ್ಟೆ
  • ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿದ್ದರೂ ಇಂದಿಗೂ ಅರಳುತ್ತಿಲ್ಲ ಪ್ರವಾಸೋದ್ಯಮ
57
ಲೋಹದ ಹಕ್ಕಿ ಹತ್ತಿ ಉದ್ದಿಮೆದಾರರು ಬರಲೇ ಇಲ್ಲ!

ಕಲಬುರಗಿಯಲ್ಲಿ ಇಂಡಸ್ಟ್ರೀಸ್‌ ಬೆಳೆಯಬೇಕಂದ್ರೆ ವಿಮಾನ ಸವಲತ್ತು ಬೇಕ್ರಿ ಎಂದು ರಾಗ ಎಳೆಯುತ್ತಿದ್ದವರಿಗೆ ಮಾರುತ್ತರವಾಗಿ ಏರ್ಪೋರ್ಟ್‌ ಇಲ್ಲಿಗೆ ಬಂದ್ರೂ ವಿಮಾನ ಹತ್ತಿ ಉದ್ದಿಮೆದಾರರಾರೂ ಇಲ್ಲಿಗೆ ಬರಲೇ ಇಲ್ಲ. 2019 ರಲ್ಲೇ ಏರ್ಪೋರ್ಟ್‌ ಸವಲತ್ತು ಬಂದರೂ ಕಳೆದ 7 ವರ್ಷಗಳಲ್ಲಿ ಒಂದೂ ಹೊಸ ಉದ್ದಿಮೆ ಕಲಬುರಗಿ ಒಡಲು ಸೇರಲಿಲ್ಲ, ಏತನ್ಮಧ್ಯೆ ವಿಮಾನ ನಿಲ್ದಾಣವೇ ಬಾಗಿಲು ಮುಚ್ಚಿಕೊಂಡಿತೇ ಹೊರತು ಉದ್ದಿಮೆದಾರರು ಇತ್ತ ಬರಲೇ ಇಲ್ಲ ಎಂಬುದು ಕಟು ವಾಸ್ತವ.

67
ಔದ್ಯಮೀಕರಣಕ್ಕೆ ರಾಜಕೀಯ ಇಚ್ಚಾಶಕ್ತಿ ಬರ!

ಜಿಲ್ಲೆಯಲ್ಲಿ ಔದ್ಯಮೀಕರಣ ಸೇರದಂತೆ ಹಲವಾರು ರಂಗಗಳಲ್ಲಿ ಬೆಳವಣಿಗೆ ದಾಖಲಿಸಲು ವರವಾಗಬೇಕಿದ್ದ ರಾಜಕೀಯ ಇಚ್ಚಾಶಕ್ತಿಯ ಬರವೂ ಇಲ್ಲಿದೆ. ಉದ್ದಿಮೆರಂಗ ಹಸಿರು ಚಿಗುರಿ ಯಾವುದೇ ಆಶಾದಾಯಕ ಪ್ರಯತ್ನಗಳು ಇಂದಿಗೂ ಇಲ್ಲಿ ನಡೆದಿಲ್ಲ ಎಂಬುದು ದುರಂತವೇ ಸರಿ. ಹೀಗಾಗಿ ಕೃಷಿಗೇ ಜೋತು ಬಿದ್ದಿರುವ ತೊಗರಿ ಕಣಜದ ಜನತೆಗೆ ಪರ್ಯಾಯ ಆದಾಯ ಮೂಲವಾಗಿ ಉದ್ದಿಮೆ ರಂಗ ಕೈಗೆಟುಕ್ಕಿಲ್ಲ. ಇದರಿಂದಾಗಿ ತಲಾ ಆದಾಯದಲ್ಲಿ ಜಿಲ್ಲೆ ಲಾಸ್ಟ್‌ ಆಗಿ ಹೊರಹೊಮ್ಮಿದೆ ಎಂಬ ಮಾತುಗಳಿವೆ.

77
ತಲಾ ಆದಾಯದ ಸುತ್ತಮುತ್ತ

ರಾಜ್ಯದ ಜಿಲ್ಲೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 8, 55, 960 ರು. ದಾಖಲೆ ಮಾಡುವ ಮೂಲಕ ರಾಜ್ಯದ ಜಿಲ್ಲೆಗಳ ಪೈಕಿ ತಲಾ ಆದಾಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ತಲಾ ಆದಾಯಕ್ಕೆ ಹೋಲಿಕೆ ಮಾಡಿದಲ್ಲಿ ಬೆಂಗಳೂರು ಗ್ರಾಮಾಂತರದ್ದು 6 ಪಟ್ಟು ಅಧಿಕವಾಗಿದೆ. ದಕ್ಷಿಣ ಕನ್ನಡ (6, 26, 279 ರು), ಉಡುಪಿ (6, 00, 683 ರು) , ಚಿಕ್ಕಮಗಳೂರು (4, 94, 787 ರು) ಶಿವಮೊಗ್ಗ (3, 89, 743 ರು) ದಾಖಲಾಗಿದೆ.

ಕಲಬುರಗಿ ಹೊರತುಪಡಿಸಿ ಕಲ್ಯಾಣ ಕರ್ನಾಟಕದ ಇನ್ನುಳಿದ ಯಾದಗಿರಿ (1, 64, 388 ರು), ರಾಯಚೂರು (1, 78, 888 ರು) ಕೊಪ್ಪಳ (1, 81, 152) ಬೀದರ್‌ (1, 85, 079 ರು) , ವಿಜಯನಗರ (1, 93, 230 ರು) ಜಿಲ್ಲೆಗಳ ತಲಾ ಆದಾಯವೂ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಕೊನೆಯಲ್ಲಿದೆ.

ಕಲಬುರಗಿ ಜೊತೆಗೇ ರಾಜ್ಯದ ಬೆಳಗಾವಿ (1, 83, 271 ರು), ವಿಜಯಪುರ (1, 87, 429 ರು) ಕೂಡಾ ತಲಾ ಆದಾಯದಲ ಮೊತ್ತ ತಗ್ಗಿದೆ. ಬಳ್ಳಾರಿ ಜಿಲ್ಲೆ ಮಾತ್ರ ತಲಾ ಆದಾಯದಲ್ಲಿ 3, 24, 111 ರು ದಖಲಿಸಿ 11 ನೇ ಸ್ಥಾನದಲ್ಲಿದೆ.

Read more Photos on
click me!

Recommended Stories