ನಾನು ನಾಸ್ತಿಕನಲ್ಲ, ದೇವರ ಮೇಲೆ ಭಕ್ತಿ ಇದೆ: ಸಿದ್ದರಾಮಯ್ಯ

First Published | Mar 22, 2021, 7:41 AM IST

ಬೆಂಗಳೂರು(ಮಾ.21): ನಾನು ನಾಸ್ತಿಕನಲ್ಲ, ನನಗೆ ದೇವರ ಮೇಲೆ ಭಕ್ತಿ ಇದ್ದು, ಮನುಷ್ಯನಿಗೆ ದೇವರ ಮೇಲೆ ನಿಜ ಭಕ್ತಿ ಇರಬೇಕು. ಆಷಾಢಭೂತಿತನದ ಭಕ್ತಿ ಒಳ್ಳೆಯದಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಉತ್ತರಹಳ್ಳಿಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ದೇವರನ್ನು ನಂಬಿದ್ದೇನೆ. ದೇವರೊಬ್ಬ, ನಾಮ ಹಲವು ಎಂದುಕೊಂಡಿದ್ದೇನೆ. ಹೀಗಾಗಿ, ದೇವರು ಎಲ್ಲರಲ್ಲೂ ಇದ್ದಾನೆ. ಮನುಷ್ಯನಲ್ಲಿ ದೇವರನ್ನು ಕಾಣುವ ಮನಸ್ಥಿತಿ ಇದ್ದರೆ ಸಾಕು ದೇವರು ಕಾಣುತ್ತಾನೆ. ಇದಕ್ಕಾಗಿಯೇ ಬಸವಾದಿ ಶರಣರು ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂದು ಹೇಳಿದ್ದಾರೆ. ದೇವರು ನಮ್ಮನ್ನು ನಿತ್ಯ ನೋಡುತ್ತಿದ್ದಾನೆ. ದೇವರ ಅನುಗ್ರಹ ಪಡೆದುಕೊಳ್ಳುವುದಕೆ ದೇವಸ್ಥಾನಕ್ಕೆ ಹೋಗಕಿಲ್ಲ. ದೇವಸ್ಥಾನಕ್ಕೆ ಹೋದವರೆಲ್ಲ ಆಸ್ತಿಕರಲ್ಲ, ದೇವಸ್ಥಾನಕ್ಕೆ ಹೋಗಲಿಲ್ಲ ಎಂದ ಮಾತ್ರಕ್ಕೆ ನಾಸ್ತಿಕರೂ ಅಲ್ಲ. ಮತ್ತೊಬ್ಬರಿಗೆ ಒಳ್ಳೆಯದನ್ನು ಬಯಸಿ, ಒಳ್ಳೆಯದನ್ನು ಮಾಡಿದರೆ ಸಾಕು ದೇವರು ಮೆಚ್ಚುತ್ತಾನೆ ಎಂದಿದ್ದಾರೆ ಎಂದರು.
ಎಲ್ಲರೂ ನಮ್ಮಂತೆಯೇ: ಮೂಲತಃ ನಾವೆಲ್ಲ ಮನುಷ್ಯರು, ಪರಸ್ಪರ ಪ್ರೀತಿ ವಿಶ್ವಾಸವನ್ನೇ ದೇವರು ಬಯಸುತ್ತಾನೆ. ಮತ್ತೊಬ್ಬರಿಗೆ ಕೆಡಕು ಬಯಸದಿರುವುದೇ ಧರ್ಮ. ಇದನ್ನು ನಾನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಹಾಗಾಗಿ, ನನಗೆ ಇಲ್ಲಿವರೆಗೂ ಒಳ್ಳೆಯದೇ ಆಗಿದೆ. ಮುಂದೆಯೂ ದೇವರು ರಾಘವೇಂದ್ರ ಸ್ವಾಮಿಗಳ ದಯೆಯಿಂದ ಒಳ್ಳೆಯದೇ ಆಗುತ್ತದೆ. ಎಲ್ಲರೂ ನಮ್ಮಂತೆಯೇ ಮನುಷ್ಯರು ಎಂದುಕೊಳ್ಳುವುದು ಧರ್ಮ. ಹೀಗಾಗಿ, ನಾವು ಯಾವುದೇ ಧರ್ಮ, ಜಾತಿ, ಮನುಷ್ಯನನ್ನು ದ್ವೇಷಿಸುವುದಿಲ್ಲ. ಸರ್ವರೂ ನಮ್ಮವರೇ ಎಂಬ ಭಾವ ನನ್ನದು ಎಂದರು.
Tap to resize

ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು ರಾಯರ ಬೃಂದಾವನ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ನನ್ನ ಪುತ್ರ ಮತ್ತು ಪತ್ನಿ ದೇವರಿಗೆ ಪೂಜೆ ಮಾಡುತ್ತಾರೆ. ವಾರಕ್ಕೊಮ್ಮೆ ಉಪವಾಸ ಮಾಡುತ್ತಾರೆ. ಆದರೆ, ನಾನು ದೇವರ ಮನೆಯ ಕಡೆಗೂ ನೋಡುವುದಿಲ್ಲ. ಹಾಗಂತ ನಾನು ದೇವರ ವಿರೋಧಿಯಲ್ಲ. ದೇವರ ಮೇಲೆ ನಂಬಿಕೆ ಇದೆ. ಬಡವರ ಭಾವಾಂತರಂಗದಲ್ಲೇ ದೇವರನ್ನು ಕಂಡ ತೃಪ್ತಿ ನನಗಿದೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ವೇಳೆ ಮಠದ ಸಂಸ್ಥಾಪಕ ಕೆ.ಆರ್‌.ನಾಗೇಂದ್ರ, ಶಾಸಕ ಬೈರತಿ ಸುರೇಶ್‌, ಮಾಜಿ ಶಾಸಕರಾದ ಸರೋವರ ಶ್ರೀನಿವಾಸ್‌, ಅಶೋಕ್‌ ಪಟ್ಟಣ, ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌, ವಿಶ್ವವಾಣಿ ಸಂಪಾದಕೀಯ ಸಲಹೆಗಾರ ನಂಜನಗೂಡು ಮೋಹನ್‌ ಇದ್ದರು.

Latest Videos

click me!