ಉಡುಪಿ:ಹೌಸ್ ಕೀಪಿಂಗ್ ಮಗಳು, ಕನ್ನಡ ಶಾಲೆಯ ಹಳ್ಳಿ ಪ್ರತಿಭೆ ಸ್ಪೂರ್ತಿ ಶೆಟ್ಟಿ'ಮಿಸ್ ಯೂನಿವರ್ಸ್ ಇಂಡಿಯಾ' ಫೈನಲಿಸ್ಟ್!

Published : Jul 16, 2026, 03:54 PM IST

ಉಡುಪಿಯ ಸಾಮಾನ್ಯ ಕುಟುಂಬದ ಸ್ಪೂರ್ತಿ ಶೆಟ್ಟಿ 'ಮಿಸ್ ಯೂನಿವರ್ಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಸುತ್ತಿನಲ್ಲಿ ಸೋತರೂ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಟ್ಟಿರುವ ಇವರ ಯಶೋಗಾಥೆ ಹಲವರಿಗೆ ಸ್ಪೂರ್ತಿದಾಯಕವಾಗಿದೆ.

PREV
15
ಸಾಮಾನ್ಯ ಕುಟುಂಬದ ಹೆಣ್ಣುಮಗಳು ಸ್ಪೂರ್ತಿ

ಉಡುಪಿ: ಕರಾವಳಿಯ ಪ್ರತಿಭೆಗಳು ಕೇವಲ ಶಿಕ್ಷಣ, ಕ್ರೀಡೆಯಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲೂ ತಮ್ಮ ಛಾಪು ಮೂಡಿಸಬಲ್ಲರು ಎಂಬುದನ್ನು ಉಡುಪಿಯ ಬೆಡಗಿ ಸ್ಪೂರ್ತಿ ಶೆಟ್ಟಿ ಸಾಬೀತುಪಡಿಸಿದ್ದಾರೆ. ಉಡುಪಿಯಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಕುಟುಂಬದ ಹೆಣ್ಣುಮಗಳು ಸ್ಪೂರ್ತಿ ಶೆಟ್ಟಿ, ಇದೀಗ ಪ್ರತಿಷ್ಠಿತ 'ಮಿಸ್ ಯೂನಿವರ್ಸ್ ಇಂಡಿಯಾ' (Miss Universe India) ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗುವ ಮೂಲಕ ಇಡೀ ಜಿಲ್ಲೆ ಮತ್ತು ರಾಜ್ಯವೇ ಹೆಮ್ಮೆಪಡುವಂತೆ ಮಾಡಿದ್ದಾರೆ.

25
ಸಾಮಾನ್ಯ ಹಿನ್ನೆಲೆ, ಅಸಾಮಾನ್ಯ ಕನಸು

ಸ್ಪೂರ್ತಿ ಶೆಟ್ಟಿ ಅವರ ಈ ಸಾಧನೆಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಅತ್ಯಂತ ಸಾಮಾನ್ಯ ಮತ್ತು ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಚೆಲುವೆ ಇವರು. ಇವರ ತಾಯಿ ಮಣಿಪಾಲ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ (ಸ್ವಚ್ಛತಾ ಸಿಬ್ಬಂದಿ) ಆಗಿ ಕೆಲಸ ಮಾಡುತ್ತಾ ಮಗಳ ಕನಸುಗಳಿಗೆ ಆಸರೆಯಾಗಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದ ಸ್ಪೂರ್ತಿ, ಉಡುಪಿಯಲ್ಲೇ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬಳಿಕ ಉನ್ನತ ವ್ಯಾಸಂಗದಲ್ಲಿ ಎಂಬಿಎ (MBA) ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಪೂರ್ಣಕಾಲಿಕ ಉದ್ಯೋಗ ಮಾಡುತ್ತಿರುವ ಇವರು, ತಮ್ಮ ಕೆಲಸದ ಜೊತೆಜೊತೆಗೇ ಮಾಡಲಿಂಗ್ ಕ್ಷೇತ್ರವನ್ನು ಹವ್ಯಾಸವಾಗಿ ಆರಂಭಿಸಿದ್ದರು.

35
ಸೋಲಿನಿಂದ ಗೆಲುವಿನತ್ತ ವೈಲ್ಡ್ ಕಾರ್ಡ್ ಎಂಟ್ರಿ!

ಮಿಸ್ ಯೂನಿವರ್ಸ್ ವೇದಿಕೆ ತಲುಪುವ ಮುನ್ನ ಸ್ಪೂರ್ತಿ ಆರಂಭದಲ್ಲಿ ತೀವ್ರ ನಿರಾಶೆ ಎದುರಿಸಬೇಕಾಗಿ ಬಂದಿತ್ತು. ಮಿಸ್ ಯೂನಿವರ್ಸ್ ಸ್ಪರ್ಧೆಯ ಕರ್ನಾಟಕ ವಿಭಾಗದ ಪ್ರಾದೇಶಿಕ ಸುತ್ತಿನಲ್ಲಿ ಸ್ಪರ್ಧಿಸಿದ್ದ ಇವರು ಜಯಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ಅವರಲ್ಲಿದ್ದ ಪ್ರತಿಭೆ, ಸೌಂದರ್ಯ ಮತ್ತು ಆತ್ಮವಿಶ್ವಾಸವನ್ನು ಗುರುತಿಸಿದ ತೀರ್ಪುಗಾರರು ಇವರಿಗೆ 'ವೈಲ್ಡ್ ಕಾರ್ಡ್ ಎಂಟ್ರಿ' (Wild Card Entry) ನೀಡಿದ್ದಾರೆ. ಈ ಮೂಲಕ ಸೋಲನ್ನು ಮೆಟ್ಟಿ ನಿಂತು ನೇರವಾಗಿ ರಾಷ್ಟ್ರೀಯ ಮಟ್ಟದ ಅಂತಿಮ ಸುತ್ತಿಗೆ ಲಗ್ಗೆ ಇಡುವಲ್ಲಿ ಸ್ಪೂರ್ತಿ ಯಶಸ್ವಿಯಾಗಿದ್ದಾರೆ.

45
ಆಗಸ್ಟ್ 23ರಂದು ಗ್ರ್ಯಾಂಡ್ ಫಿನಾಲೆ

ಆಗಸ್ಟ್ 23ರಂದು ನವದೆಹಲಿಯಲ್ಲಿ ಮಹಾ ಫೈನಲ್ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿ ಬಂದಿರುವ ಅತ್ಯಂತ ಪ್ರತಿಭಾವಂತ 50 ಸುಂದರಿಯರೊಂದಿಗೆ ಉಡುಪಿಯ ಸ್ಪೂರ್ತಿ ಶೆಟ್ಟಿ ಅಂತಿಮ ಸುತ್ತಿನಲ್ಲಿ ಪೈಪೋಟಿ ನಡೆಸಲಿದ್ದಾರೆ. ಈ ಬಹುನಿರೀಕ್ಷಿತ 'ಮಿಸ್ ಯೂನಿವರ್ಸ್ ಇಂಡಿಯಾ'ದ ಗ್ರ್ಯಾಂಡ್ ಫಿನಾಲೆ (Grand Finale) ಇದೇ ಆಗಸ್ಟ್ 23ರಂದು ನವದೆಹಲಿಯಲ್ಲಿ ಅದ್ಧೂರಿಯಾಗಿ ಜರುಗಲಿದೆ.

55
ಕಾರ್ಪೊರೇಟ್ ಉದ್ಯೋಗದ ಜೊತೆಗೆ ಗ್ಲಾಮರ್ ಲೋಕದ ಪ್ರತಿಭೆ

ಕನ್ನಡ ಮಾಧ್ಯಮದಲ್ಲಿ ಓದಿ, ಕಷ್ಟದ ಪರಿಸ್ಥಿತಿಯಲ್ಲೂ ಕಾರ್ಪೊರೇಟ್ ಉದ್ಯೋಗದ ಜೊತೆಗೆ ಗ್ಲಾಮರ್ ಲೋಕದಲ್ಲೂ ಸಾಧನೆ ಮಾಡಿರುವ ಸ್ಪೂರ್ತಿ ಶೆಟ್ಟಿ ಅವರ ಈ ಯಶೋಗಾಥೆ ಇಂದು ಸಹಸ್ರಾರು ಗ್ರಾಮೀಣ ಭಾಗದ ಯುವತಿಯರಿಗೆ ದೊಡ್ಡ ಪ್ರೇರಣೆಯಾಗಿದೆ. ನವದೆಹಲಿಯ ಅಂತಿಮ ಜಿದ್ದಾಜಿದ್ದಿನಲ್ಲಿ ಗೆದ್ದು ಉಡುಪಿಯ ಈ ಮಗಳು ವಿಶ್ವ ಸುಂದರಿ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವಂತಾಗಲಿ ಎಂಬುದು ಕನ್ನಡಿಗರ ಆಶಯವಾಗಿದೆ.

Read more Photos on
click me!

Recommended Stories