ಕೊಡಗಿನಲ್ಲಿ ಸುರಿದ ನಾಲ್ಕೇ ದಿನದ ಮಳೆಗೆ ಬಿರುಕು ಬಿಟ್ಟ ಕೆರೆ ಏರಿ! ಆತಂಕದಲ್ಲಿ ಜನ

Published : May 29, 2025, 08:20 PM IST

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಗೊಂದಿಬಸವನಹಳ್ಳಿಯ ರೊಂಡೆಕೆರೆಯ ಏರಿ ಒಡೆದು ಹೋಗುವ ಸ್ಥಿತಿ ತಲುಪಿದೆ. 15 ಮೀಟರ್ ನಷ್ಟು ಉದ್ದಕ್ಕೆ ಏರಿ ಬಿರುಕು ಬಿಟ್ಟಿದ್ದು, ಕೆರೆ ತುಂಬಿದಂತೆ ಯಾವುದೇ ಕ್ಷಣದಲ್ಲಿ ಏರಿ ಒಡೆದು ಹೋಗುವ ಆತಂಕ ಎದುರಾಗಿದೆ.  

PREV
14

ಕೊಡಗು : ಕೊಡಗು ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಲವೆಡೆ ಭಾರೀ ಅವಘಡಗಳು ಎದುರಾಗುತ್ತಿವೆ. ಬಹುತೇಕ ಕಡೆಗಳಲ್ಲಿ ಮರಗಳು ಉರುಳಿ ಬೀಳುತ್ತಿದ್ದರೆ, ಮತ್ತೆ ಕೆಲವೆಡೆ ಮನೆಗಳು ಧರಾಶಾಹಿ ಆಗುತ್ತಿವೆ. ಆದರೆ ಇಲ್ಲಿ ಕೆರೆಯೇ ಹೊಡೆದು ಹೋಗುವ ಹಂತ ತಲುಪಿದ್ದು ಜನರಿಗೆ ಆತಂಕ ತಂದೊಡ್ಡಿದೆ.  ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಕುಶಾಲನಗರ ತಾಲ್ಲೂಕಿನ ಗೊಂದಿಬಸವನಹಳ್ಳಿಯ ರೊಂಡೆಕೆರೆ ಒಡೆದು ಹೋಗುವ ಸ್ಥಿತಿ ತಲುಪಿದೆ. 15 ಮೀಟರ್ ನಷ್ಟು ಉದ್ದಕ್ಕೆ ಕೆರೆಯ ಏರಿ ಸಂಪೂರ್ಣ ಬಿರುಕು ಬಿಟ್ಟಿದ್ದು, ಏರಿಯ ಹಿಂಭಾಗಕ್ಕೆ ಹಂತ ಹಂತವಾಗಿ ಕುಸಿದು ಹೋಗುತ್ತಿದೆ.

24

ಹದಿನೈದು ಮೀಟರ್ ಉದ್ದಕ್ಕೆ ಇಡೀ ಏರಿ ಛಿದ್ರ ಛಿದ್ರಗೊಂಡಿದ್ದು ಕೆರೆಗೆ ನೀರು ತುಂಬಿದಂತೆಲ್ಲಾ ಯಾವುದೇ ಕ್ಷಣದಲ್ಲಿ ಕೆರೆ ಏರಿ ಹೊಡೆದು ಹೋಗುವ ಪರಿಸ್ಥಿತಿ ಎದುರಾಗಿದೆ. ತೀವ್ರ ಮಳೆ ಆಗುತ್ತಿರುವುದರಿಂದ ಕೆರೆಗೆ ನೀರು ತುಂಬಿದಂತೆಲ್ಲಾ ಏರಿ ಒಡೆದು ಹೋಗುವ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಈಗಷ್ಟೇ ಮಳೆಗಾಲ ಆರಂಭವಾಗಿದ್ದು ಇನ್ನೂ ಮೂರು ತಿಂಗಳ ಕಾಲ ಮಳೆಗಾಲವಿದೆ. ಅದರಲ್ಲೂ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವುದು ಸಹಜ. ಒಂದು ವೇಳೆ ತೀವ್ರವಾಗಿ ಸುರಿದು ನೀರು ಇನ್ನಷ್ಟು ತುಂಬಿದರೆ ಕೆರೆಯ ಏರಿ ಒಡೆದು ಹೋಗುವ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತೆ ಆಗಿದೆ. ಕೆರೆಯಲ್ಲಿ ಈಗಾಗಲೇ ಸಾಕಷ್ಟು ನೀರು ತುಂಬಿದ್ದು ಮಳೆಗಾಲ ಮುಂದುವರಿದಂತೆ ಕೆರೆಗೆ ಇನ್ನಷ್ಟು ನೀರು ಹರಿದು ಬರಲಿದೆ. ಹೀಗಾಗಿ ಕೆರೆಯ ಏರಿ ಒಡೆದು ಹೋಗುವ ಆತಂಕ ಮನೆ ಮಾಡಿದೆ.

34

ಕಳೆದ ವರ್ಷದ ಮಳೆಗಾಲದಲ್ಲೂ ಇದೇ ಕೆರೆಯ ಏರಿ ಇದೇ ಸ್ಥಳದಲ್ಲಿ ಒಡೆದು ಹೋಗಿತ್ತು. ಇದರಿಂದ ಕೆರೆಯ ಕೆಳಭಾಗದ ಸಾಕಷ್ಟು ರೈತರ ಭೂಮಿಗೆ ನಷ್ಟವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಈ ಕೆರೆಯ ಏರಿ ಒಡೆದು ಹೋಗಿದ್ದರಿಂದ ಕುಶಾಲನಗರದ ಕಾರು ಮಾಲೀಕರು ಮತ್ತು ಚಾಲಕರ ಬಡಾವಣೆಗೆ ಭಾರೀ ಪ್ರಮಾಣದ ನೀರು ನುಗ್ಗಿತ್ತು. ಹಲವು ಮನೆಗಳು ಮುಳುಗಡೆಯಾದರೆ, ಸಾಕಷ್ಟು ಮನೆಗಳ ಒಳಕ್ಕೂ ನೀರು ನುಗ್ಗಿ ಅಪಾರ ನಷ್ಟವಾಗಿತ್ತು. ಕೆರೆಯ ನೀರು ಖಾಲಿಯಾಗುವವರೆಗೆ ಬರೋಬ್ಬರಿ ಎರಡು ದಿನಗಳ ಕಾಲ ಕಾರು ಮಾಲೀಕರು ಮತ್ತು ಚಾಲಕರ ಸಂಘದ ಬಡಾವಣೆಯ ಹಲವು ಕುಟುಂಬಗಳು ಪಡಬಾರದ ಕಷ್ಟಪಟ್ಟಿದ್ದವು. ಇದೀಗ ಮತ್ತೆ ರೊಂಡೆ ಕೆರೆಯ ಏರಿ ಹೊಡೆದು ಹೋಗುವ ಹಂತ ತಲುಪಿದ್ದು ರೈತರು ಸೇರಿದಂತೆ ಬಡಾವಣೆಯ ಹಲವಾರು ಕುಟುಂಬಗಳು ಆತಂಕದಲ್ಲಿ ಕಾಲ ಕಳೆಯುವಂತೆ ಆಗಿದೆ.

44

ಕಳೆದ ಬಾರಿ ಕೆರೆಯ ಏರಿ ಒಡೆದು ಹೋಗಿ ನೀರು ಸಂಪೂರ್ಣ ಹೊರಗೆ ಹೋದ ಬಳಿಕ ಏರಿಯನ್ನು ಸರಿಪಡಿಸುವ ಪ್ರಯತ್ನ ನಡೆದಿತ್ತು. ಆದರೆ ಕೆರೆಯ ಏರಿಯನ್ನು ನಾಮಕಾವಸ್ಥೆಗೆ ಸರಿ ಮಾಡಿದ್ರಾ, ಎನ್ನುವುದು ಇದೀಗ ಖಚಿತವಾಗುತ್ತಿದೆ. ಗುಣಮಟ್ಟದಿಂದ ಕೆರೆಯ ಏರಿಯನ್ನು ಮಾಡಿದ್ದರೆ ಈ ರೀತಿಯ ಸಮಸ್ಯೆ ಮರುಕಳಿಸುತ್ತಿರಲಿಲ್ಲ ಎಂದು ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳಕ್ಕೆ ಮಡಿಕೇರಿ ಶಾಸಕ ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆದಷ್ಟು ಶೀಘ್ರವೇ ಕೆರೆ ಏರಿ ದುರಸ್ಥಿ ಮಾಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Read more Photos on
click me!

Recommended Stories