ಕಪ್ಪತ್ತಗುಡ್ಡದ ಮಣ್ಣು ತಿಂದು ಆರೋಗ್ಯ ಸುಧಾರಣೆ ಮಾಡಿಕೊಳ್ಳುತ್ತಿವೆ ಕುರಿ, ಮೇಕೆಗಳು..!

First Published | Aug 30, 2020, 12:46 PM IST

ಶಿವಕುಮಾರ ಕುಷ್ಟಗಿ

ಗದಗ(ಆ.30): ಎಪ್ಪತ್ತು ಗಿರಿಗಿಂತ ಕಪ್ಪತ್ತ ಗಿರಿ ಮೇಲು ಎನ್ನುವ ಮಾತಿದೆ, ಅದಕ್ಕೆ ಮುಖ್ಯ ಕಾರಣ ಅಲ್ಲಿರುವ ಔಷಧಿ ಸಸ್ಯ ಎಂದು ಇದುವರೆಗೂ ಎಲ್ಲರಲ್ಲಿಯೂ ನಂಬಿಕೆ ಇತ್ತು, ಈಗ ಅದಕ್ಕಿಂತ ಆಶ್ಚರ್ಯದ ವಿಷಯವೆಂದರೆ ಅಲ್ಲಿನ ಮಣ್ಣಿನಲ್ಲಿಯೂ ಔಷಧಿ ಗುಣವಿದ್ದು, ಕಪ್ಪತ್ತಗುಡ್ಡದ ಮಣ್ಣು ತಿಂದು ಕುರಿಗಳು ತಮ್ಮ ಆರೋಗ್ಯ ಸುಧಾರಣೆ ಮಾಡಿಕೊಳ್ಳುವ ಪ್ರಕರಣ ಬೆಳಕಿಗೆ ಬಂದಿದೆ. 
 

ಮನುಷ್ಯರಿಗೆ ಗೊತ್ತಾಗದ ಈ ಗುಣ ಕುರಿಗಳಿಗೆ ಗೊತ್ತಾಗಿದೆ ಎನ್ನುವುದು ಮಾತ್ರ ಅಷ್ಟೇ ಸೋಜಿಗದ ಸಂಗತಿಯಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಾನ ಎಂದು ಗುರುತಿಸಿಕೊಂಡಿರುವ ಕಪ್ಪತ್ತಗುಡ್ಡದ ಮಣ್ಣಿನಲ್ಲಿಯೂ ಔಷಧವಿದೆ ಕುರಿಗಳು ಈ ಮಣ್ಣು ತಿಂದು ತಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತಿರುವುದು ಕೂಡಾ ಅಷ್ಟೇ ವಿಶೇಷವಾಗಿದೆ.
ಉಪ್ಪಿನಿಂದ ಕೂಡಿರುವ ಈ ವಿಶೇಷ ಮಣ್ಣಿನಲ್ಲಿ ವಿವಿಧ ಖನಿಜಾಂಶಗಳನ್ನು ಸಹ ಹೊಂದಿದ್ದು ಎರಡು ಅಥವಾ ಮೂರು ದಿನಕ್ಕೊಮ್ಮೆ ಕಪ್ಪತ್ತಗುಡ್ಡದ ಮಧ್ಯದಲ್ಲಿ ಇರುವ ಚೂಜ ಮಡ್ಡಿಯಲ್ಲಿ ಕುರಿಗಳನ್ನು ತಂದು ಇಲ್ಲಿ ಬಿಡಲಾಗುತ್ತದೆ. ಕುರಿಗಳು ಇಲ್ಲಿಗೆ ಬರುತ್ತಿದ್ದಂತೆ ಸುತ್ತಮುತ್ತಲ ಪ್ರದೇಶಲ್ಲಿರುವ ಮಣ್ಣನ್ನು ಬಗೆದು ತಿನ್ನುತ್ತವೆ. ಹೀಗೆ ಮಣ್ಣನ್ನು ತಿನ್ನುವ ಕುರಿಗಳ ಆರೋಗ್ಯದಲ್ಲಿ ಸಹಜವಾಗಿಯೇ ಸುಧಾರಣೆ ಕಾಣುತ್ತದೆ ಎನ್ನುವ ನಂಬಿಕೆ ಕುರಿಗಾಹಿಗಳದ್ದಾಗಿದೆ.
Tap to resize

ಕಪ್ಪತ್ತಗುಡ್ಡದ ಈ ಭಾಗದಲ್ಲಿನ ಮಣ್ಣಿನಲ್ಲಿರುವ ಔಷಧಿ ಗುಣದ ಬಗ್ಗೆ ಕುರಿಗಾಯಿಗಳಿಗೂ ಸಾಕಷ್ಟು ತಿಳವಳಿಕೆ ಇದ್ದು ಕುರಿಗಳನ್ನು ಈ ಪ್ರದೇಶಕ್ಕೆ ತಂದು ಬಿಟ್ಟು ಇಲ್ಲಿಯ ಮಣ್ಣನ್ನು ತಿನಿಸುತ್ತಾರೆ. ಇದರಿಂದ ಕುರಿಗಳು ಹೊಟ್ಟೆ ನೋವು, ಜ್ವರ, ಹೀಗೆ ನಾನಾ ಕಾಯಿಲೆ ಸಹಜವಾಗಿಯೇ ಕಡಿಮೆಯಾಗುತ್ತವೆ. ಅದಲ್ಲದೇ ಪ್ರತಿ ದಿನ ಹುಲ್ಲು ತಿಂದು ಕುರಿಗಳು ಬಾಯಿ ಸವಳುಗಟ್ಟಿರುತ್ತವೆ. ಇಲ್ಲಿನ ಹೆಚ್ಚು ಲವಣಾಂಶ ಇರುವ ಮಣ್ಣನ್ನು ತಿನ್ನುವುದರಿಂದಾಗಿ ಕುರಿಗಳ ಬಾಯಿ ರುಚಿ ಹೆಚ್ಚಾಗುತ್ತದೆ. ಜೊತೆಗೆ ಹಲ್ಲುಗಳ ನೋವಿನ ಕಾಯಿಲೆ ಮಾಯವಾಗಿತ್ತದೆ ಅನ್ನೋದು ಕುರಿಗಾಯಿಗಳ ನಂಬಿಕೆಯಾಗಿದೆ.
ಕುರಿ, ಮೇಕೆ ಹುಲ್ಲು ತಿನ್ನೋದನ್ನು ನಾವು ನೀವು ನೋಡಿರುತ್ತೇವೆ. ಆದರೆ ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಅಕ್ಕ ಪಕ್ಕದ ಗ್ರಾಮದಲ್ಲಿನ ಕುರಿ ಹಾಗು ಮೇಕೆಗಳು ಮಣ್ಣು ತಿನ್ನುತ್ತವೆ. ಅಚ್ಚರಿ ಅನಿಸಿದರು ಇದು ಅಷ್ಟೇ ಸತ್ಯದ ಸಂಗತಿಯಾಗಿದೆ. ಈ ಮಣ್ಣು ತಿಂದರೆ. ಅವುಗಳಿಗೆ ಯಾವುದೇ ಕಾಯಿಲೆ ಇದ್ದರೆ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಗೆ ಸಧ್ಯ ಮಣ್ಣು ತಿನ್ನುತ್ತಿರುವ ಕುರಿಗಳು ಉತ್ತಮ ಸಾಕ್ಷಿಯಾಗಿದ್ದು, ಕಪ್ಪತ್ತಗುಡ್ಡ ರಕ್ಷಣೆಯ ಮಹತ್ವ, ಅಲ್ಲಿನ ಮಣ್ಣಿನ ಮಹತ್ವ ಎಷ್ಟಿದೆ ಎನ್ನುವುದಕ್ಕೆ ಇದು ಕೂಡಾ ಒಂದು ಉತ್ತಮ ಉದಾಹರಣೆಯಾಗಿದೆ.
ಕಪ್ಪತ್ತಗುಡ್ಡದಲ್ಲಿ ಔಷಧಿಯ ಗುಣವಿರುವ ಅಪಾರ ಪ್ರಮಾಣದ ಸಸ್ಯಗಳಿರುವುದರಿಂದ ಅವುಗಳನ್ನು ಕುರಿ ಮೇಕೆಗಳು ತಿನ್ನುವದರಿಂದ ಸಹ ಅವುಗಳು ಆರೋಗ್ಯವಾಗಿ ಇರುತ್ತವೆ. ಕುರಿಗಳಿಗೆ ಕ್ಯಾಲ್ಸಿಯಂ ಕಡಿಮೆಯಾದಾಗ ಉಪ್ಪು ಮಿಶ್ರಿತ ಮಣ್ಣು ಸೇವನೆ ಮಾಡುತ್ತವೆ. ಹಾಗಾಗಿ ಈ ಭಾಗದ ಕುರಿಗಳು ಸಹ ಮಣ್ಣು ತಿನ್ನುತ್ತಿವೆ. ಸ್ವಲ್ಪ ಪ್ರಮಾಣದಲ್ಲಿ ಮಣ್ಣು ತಿಂದರೆ ಏನು ಆಗೋದಿಲ್ಲ. ಹೆಚ್ಚಿನ ಪ್ರಮಾಣದ ಮಣ್ಣು ತಿಂದರೆ, ಅವುಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕುರಿಗಳಿಗೆ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದಾಗ ಮಣ್ಣು ನೆಕ್ಕುತ್ತವೆ ಎಂದು ಗದಗ ಜಿಲ್ಲಾ ಪಶು ಇಲಾಕೆಯ ನಿರ್ದೇಶಕ ಜಿ.ಬಿ.ಮನಗೂಳಿ ಅವರು ತಿಳಿಸಿದ್ದಾರೆ.
ನಾವು ನಿತ್ಯವೂ ಕುರಿ ಮೇಯಿಸಲು ಬರುವುದು ಕಪ್ಪತ್ತಗುಡ್ಡ ಭಾಗದಲ್ಲಿಯೇ ಆದರೆ ಕುರಿಗಳ ಆರೋಗ್ಯದಲ್ಲಿ ಏನಾದರೂ ಹೆಚ್ಚು ಕಮ್ಮಿಯಾದಾಗ ಇಲ್ಲಿಗೆ ತಂದು ಬಿಟ್ಟು ಮೇಯಿಸುತ್ತೇವೆ ಆವಾಗ ಕುರಿ, ಆಡುಗಳ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಕುರಿಗಾಯಿ ರಮೇಶ ಅವರು ಹೇಳಿದ್ದಾರೆ.

Latest Videos

click me!