ಕೊರೋನಾ ತಂದಿಟ್ಟ ಸಂಕಷ್ಟ: ಕೂಲಿ ಕಾರ್ಮಿಕರಾದ ಅತಿಥಿ ಉಪನ್ಯಾಸಕರು..!

First Published | May 7, 2021, 2:16 PM IST

ನಾರಾಯಣ ಹೆಗಡೆ

ಹಾವೇರಿ(ಮೇ.07): ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಅತಿಥಿ ಉಪನ್ಯಾಸಕರನ್ನು ಕೊರೋನಾ ಮಹಾಮಾರಿ ಬೀದಿಗೆ ತಳ್ಳಿದೆ. ಕೆಲಸ ಹಾಗೂ ಸಂಬಳವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿ ಮಾವಿನ ಹಣ್ಣಿನ ವ್ಯಾಪಾರ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಗೆ ಹೋಗುತ್ತಿದ್ದಾರೆ.
 

ಕೊರೋನಾ ಎರಡನೇ ಅಲೆಯ ಸೋಂಕು ವ್ಯಾಪಿಸಿರುವುದರಿಂದ ಶಾಲಾ- ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ. ಇದರ ನೇರ ಪರಿಣಾಮ ಅತಿಥಿ ಉಪನ್ಯಾಸಕರಿಗೆ ತಟ್ಟಿದೆ. ಫೆಬ್ರವರಿವರೆಗೆ ಅತಿಥಿ ಉಪನ್ಯಾಸಕರನ್ನು ದುಡಿಸಿಕೊಂಡು ಬಳಿಕ ಅವರನ್ನು ಕೈಬಿಟ್ಟಿದೆ. ಕಳೆದ ವರ್ಷ ಕೂಡ ಪೂರ್ತಿ ವರ್ಷ ಇವರ ಸೇವೆ ಪಡೆಯದೇ ಮೂರು ತಿಂಗಳ ವೇತನ ನೀಡಲಾಗಿತ್ತು. ನಂತರ ಹೋರಾಟ ಮಾಡಿದ ನಂತರ ಶೇ. 50ರಷ್ಟು ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಕ ಮಾಡಿಕೊಂಡಿತ್ತು. ಜನವರಿ ಮತ್ತು ಫೆಬ್ರವರಿ ಎರಡು ತಿಂಗಳು ಬೋಧನೆ ಮಾಡಿದ ಇವರೀಗ ಮತ್ತೆ ನಿರುದ್ಯೋಗಿಗಳಾಗಿದ್ದಾರೆ. ಹತ್ತಾರು ವರ್ಷ ಕಾಲೇಜುಗಳಲ್ಲಿ ಬೋಧನೆ ಮಾಡಿದವರು ಈಗ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.
ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ರಾಜ್ಯ ಕಾರ್ಯಾಧ್ಯಕ್ಷರೂ ಆಗಿರುವ ಹಾನಗಲ್ಲ ತಾಲೂಕಿನ ಡೊಮ್ಮನಾಳ ಗ್ರಾಮದ ಅತಿಥಿ ಉಪನ್ಯಾಸಕ ಸಿ.ಕೆ. ಪಾಟೀಲ ಅವರು ಹಾವೇರಿಯಲ್ಲಿ ಮಾವಿನ ಹಣ್ಣಿನ ಮಾರಾಟದಲ್ಲಿ ತೊಡಗಿದ್ದಾರೆ. ಸುತ್ತಮುತ್ತಲಿನ ಊರುಗಳಲ್ಲಿ ರೈತರಿಂದ ನೇರವಾಗಿ ಮಾವಿನ ಕಾಯಿ ಖರೀದಿಸಿ ಅದನ್ನು ನೈಸರ್ಗಿಕವಾಗಿ ಮಾಗಿಸಿ ಮಾರಾಟ ಮಾಡುತ್ತಿದ್ದಾರೆ. ಪರಿಚಿತರು ಯಾರಾದರೂ ಕರೆ ಮಾಡಿದರೆ ಮನೆಗೆ ಹೋಗಿ ಹಣ್ಣು ನೀಡಿ ಬರುತ್ತಿದ್ದಾರೆ. ಜೀವನ ನಿರ್ವಹಣೆಯೂ ಕಷ್ಟಕರವಾಗಿದೆ. ಯಾವ ಕಾಯಕವೂ ಕನಿಷ್ಠವಲ್ಲ. ಏನೇ ಮಾಡಿದರೂ ಒಳ್ಳೆಯದನ್ನೇ ಮಾಡಬೇಕು. ರಾಸಾಯನಿಕ ಬಳಕೆ ಮಾಡದೆ ಮಾಗಿಸಿದ ಹಣ್ಣನ್ನು ಮಾರಾಟ ಮಾಡಿ ಹೇಗೋ ಜೀವನ ಸಾಗಿಸುತ್ತಿದ್ದೇನೆ ಎಂದು ಸಿ.ಕೆ. ಪಾಟೀಲ ತಮ್ಮ ಅಳಲು ತೋಡಿಕೊಂಡರು.
Tap to resize

ಮತ್ತೋರ್ವ ಅತಿಥಿ ಉಪನ್ಯಾಸಕ ಹಾನಗಲ್ಲ ತಾಲೂಕಿನ ಮಲಗುಂದ ಗ್ರಾಮದ ವಿನಾಯಕ ಸಾತೇನಹಳ್ಳಿ ಎಂಬವರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಮಾಡುತ್ತಿದ್ದಾರೆ. ಸವಣೂರಿನ ಫಕ್ಕೀರಯ್ಯ ಹಿರೇಮಠ ಕಾಳುಕಡಿ ವ್ಯಾಪಾರ ಆರಂಭಿಸಿದ್ದಾರೆ. ಇನ್ನು ಕೆಲವರು ಈ ನೌಕರಿಯೇ ಸಾಕು ಎಂದು ಕೃಷಿಯತ್ತ ಹೆಜ್ಜೆ ಹಾಕಿದ್ದಾರೆ. ಹಲವರು ಬೇರೆ ಯಾವ ಉದ್ಯೋಗ ಮಾಡಲಾಗದೇ ಮಾನಸಿಕ ತೊಳಲಾಟದಲ್ಲಿ ಮುಳುಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 6 ಜನ ಅತಿಥಿ ಉಪನ್ಯಾಸಕರು ಕೊರೋನಾದಿಂದ ಮೃತಪಟ್ಟಿದ್ದಾರೆ. ಅವರಿಗೆ ಸರ್ಕಾರದಿಂದ ಯಾವುದೇ ಪರಿಹಾರವೂ ಲಭಿಸಿಲ್ಲ. ಸದ್ಯ ಕೊರೋನಾ ಹೋಗಿ ಕಾಲೇಜು ಆರಂಭವಾಗುವುದು ಯಾವಾಗ ಎಂಬುದು ಯಾರಿಗೂ ಗೊತ್ತಿಲ್ಲ. ಅದಾದ ಬಳಿಕ ನಮ್ಮನ್ನು ಯಾವಾಗ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬುದೂ ಗೊತ್ತಿಲ್ಲ. ಈ ಹಿಂದೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯ ಭರವಸೆ ನೀಡಿದ್ದವರೆ ಈಗ ಸರ್ಕಾರ ನಡೆಸುತ್ತಿದ್ದಾರೆ. ಆದರೆ, ಇದುವರೆಗೆ ನಮ್ಮ ನೋವನ್ನು ಆಲಿಸುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಅತಿಥಿ ಉಪನ್ಯಾಸಕರು ನೋವು ಬಿಚ್ಚಿಡುತ್ತಿದ್ದಾರೆ.
ಈ ಮೊದಲೆಲ್ಲ ಅತಿಥಿ ಉಪನ್ಯಾಸಕರನ್ನು ವರ್ಷದ 9 ತಿಂಗಳ ಕಾಲ ತೆಗೆದುಕೊಳ್ಳುತ್ತಿದ್ದರು. ಈಗ ಕೊರೋನಾದಿಂದ ಕಾಲೇಜುಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಕಾರಣಕ್ಕೆ ನಮ್ಮನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಅದಕ್ಕಾಗಿ ಅನಿವಾರ್ಯವಾಗಿ ಬೇರೆ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಅತಿಥಿ ಉಪನ್ಯಾಸಕರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಸಿ.ಕೆ. ಪಾಟೀಲ ತಿಳಿಸಿದ್ದಾರೆ.

Latest Videos

click me!