ತಿರುಮಲ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ನಕಲಿ ತುಪ್ಪ ಬಳಸಿದ ಪ್ರಕರಣದಲ್ಲಿ ಸಿಬಿಐ ಅಂತಿಮ ಆರೋಪಪಟ್ಟಿ ಸಲ್ಲಿಸಿದೆ. ಈ 250 ಕೋಟಿ ರೂ. ಹಗರಣದಲ್ಲಿ ಟಿಟಿಡಿ ಸಿಬ್ಬಂದಿ ಸೇರಿದಂತೆ 36 ಮಂದಿ ಭಾಗಿಯಾಗಿದ್ದು, 5 ವರ್ಷಗಳಲ್ಲಿ 68 ಲಕ್ಷ ಕೆ.ಜಿ ನಕಲಿ ತುಪ್ಪ ಪೂರೈಕೆಯಾಗಿದೆ.
ತಿರುಮಲ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿ ತುಪ್ಪ ಬಳಸಿದ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ, ಅಂತಿಮ ಆರೋಪಪಟ್ಟಿಯನ್ನು ನೆಲ್ಲೂರಿನ ಎಸಿಬಿ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದೆ.
26
ಕಲಬೆರಕೆ ದಂಧೆಯಲ್ಲಿ 250 ಕೋಟಿ ರು. ವ್ಯವಹಾರ
15 ತಿಂಗಳುಗಳ ಕಾಲ 12 ರಾಜ್ಯಗಳಲ್ಲಿ ನಡೆದ ತನಿಖೆ ಬಳಿಕ ತಯಾರಿಸಲಾಗುವ ಚಾರ್ಜ್‌ಶೀಟ್‌ನಲ್ಲಿ, ‘5 ವರ್ಷ ದೇವಸ್ಥಾನಕ್ಕೆ 68 ಲಕ್ಷ ಕೆ.ಜಿ.ಯಷ್ಟು ನಕಲಿ ತುಪ್ಪವನ್ನು ಪೂರೈಸಲಾಗಿದೆ. ಈ ಕಲಬೆರಕೆ ದಂಧೆಯಲ್ಲಿ 250 ಕೋಟಿ ರು. ವ್ಯವಹಾರ ನಡೆದಿದೆ. ಈ ಹಗರಣದಲ್ಲಿ ಟಿಟಿಡಿಯ ಉದ್ಯೋಗಿಗಳು, ತುಪ್ಪ ಪೂರೈಕೆದಾರರು ಸೇರಿದಂತೆ 36 ಜನರು ಭಾಗಿಯಾಗಿದ್ದಾರೆ.
36
ಭೋಲೇ ಬಾಬಾ ಆರ್ಗ್ಯಾನಿಕ್ ಡೈರಿ
ನಕಲಿ ತುಪ್ಪ ಪೂರೈಸಿದ್ದ ಉತ್ತರಾಖಂಡದ ಭೋಲೇ ಬಾಬಾ ಆರ್ಗ್ಯಾನಿಕ್ ಡೈರಿಯ ನಿರ್ದೇಶಕರಾದ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್ ಪ್ರಕರಣದ ಪ್ರಮುಖ ಆರೋಪಿಗಳು’ ಎಂದು ಉಲ್ಲೇಖಿಸಲಾಗಿದೆ.
ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡದ ವರದಿಯ ಪ್ರಕಾರ, ತಾಳೆ ಎಣ್ಣೆ, ತಾಳೆ ಹಣ್ಣಿನ ಬೀಜದ ಎಣ್ಣೆ ಮತ್ತು ಪಾಮೋಲಿನ್ ಬಳಸಿ ನಕಲಿ ತುಪ್ಪವನ್ನು ತಯಾರಿಸಲಾಗುತ್ತಿತ್ತು. ಪ್ರಯಾಗೋಲಯದಲ್ಲಿ ಇದು ಪತ್ತೆಯಾಗದಂತೆ ತಡೆಯಲು ಬೆಟಾ ಕ್ಯಾರೋಟಿನ್, ಅಸಿಟಿಕ್ ಆ್ಯಸಿಡ್ ಎಸ್ಟರ್, ತುಪ್ಪದ ಘಮವನ್ನು ಸೇರಿಸಲಾಗುತ್ತಿತ್ತು ಎನ್ನಲಾಗಿದೆ.
ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಅವಧಿಯಲ್ಲಿ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾದ ತುಪ್ಪ ಬಳಸಿ ತಿರುಪತಿ ಲಡ್ಡುಗಳನ್ನು ತಯಾರಿಸಲಾಗಿತ್ತು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 2024ರ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ್ದರು.
ಇದು ದೇಶವ್ಯಾಪಿ ಆಕ್ರೋಶ ಹಾಗೂ ರಾಜಕೀಯ ಸಮರಕ್ಕೆ ಕಾರಣವಾಗಿತ್ತು. ಆಂಧ್ರಪ್ರದೇಶ ಸರ್ಕಾರ ರಚಿಸಿದ ಎಸ್‌ಐಟಿ ಇದರ ತನಿಖೆ ಆರಂಭಿಸಿತ್ತಾದರೂ, ಬಳಿಕ ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ನೇತೃತ್ವದಲ್ಲಿ 5 ಸದಸ್ಯರ ತಂಡ ರಚಿಸಲಾಗಿತ್ತು.
ಈ ಹಿಂದೆ ಕರ್ನಾಟಕದ ನಂದಿನಿ ತುಪ್ಪ ದುಬಾರಿ ಎಂಬ ಕಾರಣಕ್ಕೆ ಟಿಟಿಡಿ ತುಪ್ಪ ಆಮದು ನಿಲ್ಲಿಸಿತ್ತು. ಆದರೆ ಹಗರಣ ಬೆಳಕಿಗೆ ಬಂದ ಬಳಿಕ ಮತ್ತೆ ನಂದಿನಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಸಲ್ಲಿಸಿತ್ತು.