'ಭೀಕರ ಬರಗಾಲದಲ್ಲಿ ಒಂದೇ ಪೂಜೆಗೆ 5 ಗಂಟೆ ಸುರಿದಿತ್ತು ಮಳೆ!': ರಂಗನಾಥನ ಪವಾಡ ಬಿಚ್ಚಿಟ್ಟ ದೇವೇಗೌಡರು!

Published : Aug 29, 2026, 12:39 PM IST

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಬಾಲ್ಯದಲ್ಲಿ ನಡೆದ ಮಾವಿನಕೆರೆ ಕ್ಷೇತ್ರದ ಪವಾಡವನ್ನು ಸ್ಮರಿಸಿದ್ದಾರೆ. ಭೀಕರ ಬರಗಾಲದ ವೇಳೆ 18 ಹಳ್ಳಿಗಳ ಜನರು ಸೇರಿ ಶ್ರೀ ರಂಗನಾಥ ಸ್ವಾಮಿಗೆ ಸಹಸ್ರ ಕುಂಭಾಭಿಷೇಕ ಮಾಡಿದಾಗ, 5 ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದ ದೈವಿಕ ಘಟನೆಯನ್ನು ಅವರು ವಿವರಿಸಿದ್ದಾರೆ.

PREV
16

ಭೀಕರ ಬರಗಾಲ ಬಿದ್ದಾಗ 18 ಹಳ್ಳಿಯ ಜನರು ಒಗ್ಗೂಡಿ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ದೇವರ ಮೇಲೆ ಕುಂಭಾಭಿಷೇಕ ನೆರವೇರಿಸುತ್ತಿದ್ದಂತೆಯೇ, ದೇವಾಲಯದ ಗೋಪುರದ ಮೇಲೆ ಒಂದು ಚಾಪೆಯಗಲದಷ್ಟು ಸಣ್ಣ ಕಪ್ಪು ಮೋಡ ಪ್ರತ್ಯಕ್ಷವಾಯಿತು! ನೋಡನೋಡುತ್ತಿದ್ದಂತೆಯೇ ಆಕಾಶವೆಲ್ಲಾ ಮೋಡ ಕವಿದು, ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬರೋಬ್ಬರಿ 5 ಗಂಟೆಗಳ ಕಾಲ ಧಾರಾಕಾರ ಮಳೆ ಸುರಿಯಿತು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪವಾಡ ಸದೃಶ ಘಟನೆಯನ್ನು ಬಿಚ್ಚಿಟ್ಟರು.

26

ಹಾಸನ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ಸನ್ನಿಧಿಗೆ ಶ್ರಾವಣ ಶನಿವಾರದ ಪ್ರಯುಕ್ತ ಭೇಟಿ ನೀಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (H.D. Deve Gowda), ಈ ಪುಣ್ಯಕ್ಷೇತ್ರದ ಪವಾಡ ಸದೃಶ ಶಕ್ತಿಯ ಕುರಿತು ತಮ್ಮ ಬಾಲ್ಯದ ರೋಚಕ ಘಟನೆಯೊಂದನ್ನು ಸ್ಮರಿಸಿದ್ದಾರೆ.

36

18 ಹಳ್ಳಿಗಳು ಒಂದಾಗಿ ಮಾಡಿದ ‘ಸಹಸ್ರ ಕುಂಭಾಭಿಷೇಕ’:

ಮಾವಿನಕೆರೆ ಕ್ಷೇತ್ರದ ಮಹಿಮೆಯನ್ನು ವಿವರಿಸಿದ ದೇವೇಗೌಡರು, 'ಇದು ಅತ್ಯಂತ ಪುರಾತನ ಹಾಗೂ ಜಾಗೃತ ಪವಿತ್ರ ಕ್ಷೇತ್ರ. ಈ ಭಾಗದಲ್ಲಿ ಅತ್ಯಂತ ಭೀಕರ ಬರಗಾಲ ಎದುರಾಗಿದ್ದ ಸಂದರ್ಭವನ್ನು ನಾನು ಕಣ್ಣಾರೆ ನೋಡಿದ್ದೇನೆ. ಆ ಕಾಲದಲ್ಲಿ ಮಳೆ ಬಾರದೆ ಜನ-ಜಾನುವಾರುಗಳು ಕಂಗಾಲಾಗಿದ್ದರು. ಆಗ ಸುತ್ತಮುತ್ತಲಿನ ಸುಮಾರು 18 ಹಳ್ಳಿಗಳ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಈ ಬೆಟ್ಟದ ರಂಗನಾಥ ಸ್ವಾಮಿಗೆ 'ಸಹಸ್ರ ಕುಂಭಾಭಿಷೇಕ' ಮಾಡಲು ತೀರ್ಮಾನಿಸಿದರು' ಎಂದರು.

46

ಗೋಪುರದ ಮೇಲೆ ಬಂದ ಕಪ್ಪು ಮೋಡ, 5 ಗಂಟೆ ಸುರಿದ ಧಾರಾಕಾರ ಮಳೆ!

ಆ ಪವಾಡದ ಕ್ಷಣವನ್ನು ಮೆಲುಕು ಹಾಕಿದ ಮಾಜಿ ಪ್ರಧಾನಿಗಳು, 'ಹತ್ತಾರು ಹಳ್ಳಿಗಳಿಂದ ಜನರು ಬಿಂದಿಗೆಗಳಲ್ಲಿ ನೀರು ತಂದು ಬಂಡೆಯ ಮೇಲಿರುವ ದೇವಸ್ಥಾನದ ಗೋಪುರಕ್ಕೆ ಭಕ್ತಿಯಿಂದ ಅಭಿಷೇಕ ಮಾಡಿದರು. ಊರುಗಳಿಂದ ಬಗೆಬಗೆಯ ತಿಂಡಿ-ತಿನಿಸುಗಳನ್ನು ತಂದು ಬೆಟ್ಟದ ಮೇಲೆ ರಾಶಿ ಹಾಕಿದ್ದರು.

56

ಅಚ್ಚರಿಯೆಂದರೆ, ದೇವರ ಮೇಲೆ ಕುಂಭಾಭಿಷೇಕ ನೆರವೇರುತ್ತಿದ್ದಂತೆಯೇ, ದೇವಾಲಯದ ಗೋಪುರದ ಮೇಲೆ ಕೇವಲ ಒಂದು ಚಾಪೆಯಗಲದಷ್ಟು ಸಣ್ಣ ಕಪ್ಪು ಮೋಡ ಪ್ರತ್ಯಕ್ಷವಾಯಿತು! ನೋಡನೋಡುತ್ತಿದ್ದಂತೆಯೇ ಆಕಾಶವೆಲ್ಲಾ ಮೋಡ ಕವಿದು, ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬರೋಬ್ಬರಿ 5 ಗಂಟೆಗಳ ಕಾಲ ಧಾರಾಕಾರ ಮಳೆ ಸುರಿಯಿತು. ಮಳೆ ಸಂಪೂರ್ಣ ನಿಂತ ಮೇಲೆಯೇ ನಾವೆಲ್ಲರೂ ಬೆಟ್ಟದಿಂದ ಮನೆಗಳಿಗೆ ಮರಳಿದ್ದು' ಎಂದು ಆ ದೈವಿಕ ಪವಾಡವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.

66

ವಿದೇಶದಲ್ಲಿರುವ ಭಕ್ತರಿಗೂ ದೇವೇಗೌಡರ ವಿಶೇಷ ಕರೆ:

'ಮಾವಿನಕೆರೆ ಬೆಟ್ಟ ಅಷ್ಟೊಂದು ಅದ್ಭುತ ಶಕ್ತಿಯುಳ್ಳ ಪುಣ್ಯಕ್ಷೇತ್ರ. ಈ ಸ್ವಾಮಿಯನ್ನು ಕುಲದೇವರನ್ನಾಗಿ ಹೊಂದಿರುವವರು ಪ್ರಸ್ತುತ ವಿದೇಶಗಳಲ್ಲಿದ್ದರೂ ಸಹ, ಈ ಪವಿತ್ರ ಶ್ರಾವಣ ಮಾಸದಲ್ಲಿ ತಮ್ಮ ಮನೆ ದೇವರಿಗೆ ಬಂದು ಪೂಜೆ ಸಲ್ಲಿಸಬೇಕು. ನಾನಂತೂ ಪ್ರತಿ ವರ್ಷವೂ ತಪ್ಪದೇ ಇಲ್ಲಿಗೆ ಬಂದು ದೇವರ ಆಶೀರ್ವಾದ ಪಡೆಯುತ್ತೇನೆ' ಎಂದು ದೇವೇಗೌಡರು ಭಕ್ತರಿಗೆ ಕರೆ ನೀಡಿದರು.

Read more Photos on
click me!

Recommended Stories