ಅಂದು ಹಣ ಎಣಿಸುವ ಶೆಡ್‌ಗೆ ಚಿದಾನಂದ ತನ್ನ ಮಾವನನ್ನೂ ಕರೆದುಕೊಂಡು ಹೋಗಿದ್ದ. ಇದೇ ವೇಳೆ ಚಿದಾನಂದ ತಂಡದ ದರೋಡೆ ಗ್ಯಾಂಗ್ ಶೆಡ್ ಮೇಲೆ ದಾಳಿ ನಡೆಸಿದೆ. ಆದರೆ ಇಂಥದ್ದೊಂದು ದಾಳಿ ನಡೆದೀತು ಎನ್ನುವ ಬಗ್ಗೆ ಮುಂಚೆನೇ ಅಲರ್ಟ್ ಆಗಿದ್ದ ಕಲ್ಮೇಶನ ತಂಡ ದಾಳಿ ನಡೆಸಿದವರನ್ನೇ ಬಡಿದು ಹಿಡಿದು ಪೊಲೀಸರಿಗೊಪ್ಪಿಸಿತ್ತು! ಹೀಗೆ ಸಿನಿಮಾ ಸ್ಟೈಲ್‌ನಲ್ಲಿ ದರೋಡೆಗೆ ಪ್ಲಾನ್ ಮಾಡಿದ್ದ ಚಿದಾನಂದ ಗ್ಯಾಂಗ್ ಟೀಂ ಸಂಚು ವಿಫಲಗೊಂಡಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಖಾಕಿ ಹಿಂದಿನ ಖತರ್ನಾಕ್ ಆಟ ಬಯಲಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಗನ್‌ಮ್ಯಾನ್ ಚಿದಾನಂದ ಕುರಬೇಟ್ ಸೇರಿದಂತೆ ಸಂಜೀವ್ ಅರಭಾವಿ, ರಾಜಾರಾಮ್ ಮಾಳ್ಯಾಗೋಳ, ರಮೇಶ್ ಮಾಳ್ಯಾಗೋಳ, ಪ್ರಕಾಶ ಮೆಳವಂಕಿ, ರಾಘವೇಂದ್ರ ಕೊಪ್ಪದ್ ಮತ್ತು ರಾಮಪ್ಪ ತಳವಾರ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ. ಗಾಯಗೊಂಡಿರುವ ಮಾರುತಿ ಅರಭಾವಿ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸದ್ಯ ಬಂಧಿತರಿಂದ 2.39 ಕೋಟಿ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ ಹಣ ಹಾಗೂ ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಆರೋಪಿ ಚಿದಾನಂದನನ್ನು ಎಸ್‌ಪಿ ಕೆ. ರಾಮರಾಜನ್ ಅಮಾನತುಗೊಳಿಸಿದ್ದಾರೆ.
ಶಾಸಕ ರಮೇಶ ಜಾರಕಿಹೊಳಿಗೂ ಪ್ರಕರಣಕ್ಕೂ ಸಂಬಂಧವಿಲ್ಲ!
ಇನ್ನು ಈ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಹೆಸರೂ ಕೇಳಿಬಂದಿರುವ ಹಿನ್ನೆಲೆಯಲ್ಲಿ ಎಸ್‌ಪಿ ಕೆ. ರಾಮರಾಜನ್ ಸ್ಪಷ್ಟನೆ ನೀಡಿದ್ದಾರೆ. ದರೋಡೆ ಪ್ರಕರಣಕ್ಕೂ ಶಾಸಕ ರಮೇಶ ಜಾರಕಿಹೊಳಿ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಜನರ ರಕ್ಷಣೆ ಮಾಡಬೇಕಿದ್ದ ಗನ್‌ಮ್ಯಾನ್‌ನಿಂದಲೇ ಕೋಟ್ಯಂತರ ರೂಪಾಯಿ ದರೋಡೆಗೆ ಸಂಚು ರೂಪಿಸಿದ ಆರೋಪ ಕೇಳಿಬಂದಿರುವುದು ಮೂಡಲಗಿಯಲ್ಲಿ ಸಂಚಲನ ಮೂಡಿಸಿದೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದ ತನಿಖೆ ಮುಂದುವರಿದಿದೆ.