
Karnatakaದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಗಿನ ಆಗುಂಬೆ (Agumbe) ಮಳೆಗೆ ಸಿಕ್ಕಾಪಟ್ಟೆ ಫೇಮಸ್. ದಕ್ಷಿಣ ಭಾರತದ ಚಿರಾಪೂಂಜಿ ಎಂದೇ ಒಂದು ಕಾಲದಲ್ಲಿ ಫೇಮಸ್. ಈ ಸಣ್ಣ ಊರು ಮಳೆಕಾಡು ಹತ್ತಾರು ಕೌತುಕಗಳ ಆಗರ. ಅಲ್ಲದೇ ಈ ಊರನ್ನು ಕಾಳಿಂಗ ಸರ್ಪಗಳ ಸ್ವರ್ಗ (Heaven of King Cobra)ವೆಂದೇ ಹೇಳಲಾಗುತ್ತದೆ. ಇಷ್ಟೆಲ್ಲಾ ಕೌತುಕಗಳ ನಡುವೆ ಇನ್ನೂ ಆತಂಕಕಾರಿ ವಿಷಯವೂ ಇದೆ. ಈ ಕಾಳಿಂಗ ಸರ್ಪಗಳ ಲಿಂಗಾನುಪಾತ. ಆಗುಂಬೆಯಲ್ಲಿ ಗಂಡು ಹೆಣ್ಣು ಕಾಳಿಂಗ ಸರ್ಪಗಳ ಲಿಂಗಾನುಪಾತ ಹೆಚ್ಚುಕಡಿಮೆ 85:15 ಇದೆ ಎಂದು ಎರಡ್ಮೂರು ವರ್ಷಗಳ ಹಿಂದಿನ ಅಧ್ಯಯನವೊಂದು ಬೆಳಕು ಚೆಲ್ಲಿತ್ತು. ಅಂದರೆ ಅಲ್ಲಿ 100 ಕಾಳಿಂಗ ಸರ್ಪಗಳಲ್ಲಿ 85 ಗಂಡು, ಕೇವಲ 15 ಹೆಣ್ಣು ಕಾಳಿಂಗ ಸರ್ಪಗಳು ಸಿಗುತ್ತವೆಯಂತೆ.
ಮನುಷ್ಯನಲ್ಲಿ ಇಂಥ ಲಿಂಗಾನುಪಾತದಲ್ಲಿ ವ್ಯತ್ಯಾಸ ಇರೋದು ಗೊತ್ತು. ಅದಕ್ಕೆ ಮುಖ್ಯ ಕಾರಣ ಗರ್ಭಪಾತ. ಹೆಣ್ಣು ಭ್ರೂಣವನ್ನು ಕೊಲ್ಲುವ ಕೆಟ್ಟ ಮನಃಸ್ಥಿತಿ ಎನ್ನಬಹುದು. ಆದರೆ, ಹಾವುಗಳಲ್ಲಿ ಯಾಕೆ ಇಷ್ಟು ಮಟ್ಟಿಗಿನ ತಾರತಮ್ಯ? ಇದಕ್ಕೆ ಸ್ಪಷ್ಟವಾದ ಕಾರಣಗಳಿನ್ನೂ ರಿವೀಲ್ ಆಗಿಲ್ಲ. ಈ ಬಗ್ಗೆ ಅಧ್ಯಯನಗಳು ನಡೆಯುತ್ತಿದೆ.
ಇಂಥದ್ದು ವ್ಯತ್ಯಾಸ ಹಿಂದೆಯೂ ಇತ್ತಾ, ಇತ್ತೀಚೆಗೆ ಆಗಿದ್ದಾ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಇದೊಂದು ಪ್ರಾಕೃತಿಕ ನಿಯಮ (Rule of Nature) ಎಂಬ ಬಗ್ಗೆ ಆಗುಂಬೆಯಲ್ಲಿರುವ ರೈನ್ ಫಾರೆಸ್ಟ್ ರಿಸರ್ಚ್ ಸ್ಟೇಷನ್ (ಎಆರ್‌ಎಫ್‌ಆರ್‌ಎಸ್) (Rain Forest Research Station) ಸಂಶೋಧನೆ ನಡೆಸುತ್ತಲೇ ಇದೆ. ಈ ಅಧ್ಯಯನಕ್ಕೆಂದೇ ಕೆಲ ವರ್ಷಗಳ ಹಿಂದೆ ಹೆಣ್ಣು ಕಾಳಿಂಗ ಹಾವಿಗೆ ರೇಡಿಯೋ ಟೆಲಿಮೆಟ್ರಿ ಚಿಪ್ ಅಳವಡಿಸಲಾಗಿತ್ತು. ಈ ಚಿಪ್ ಹಾವಿನ ಚಲನವಲನ, ವರ್ತನೆ, ಜೀವನ ಶೈಲಿ ಬಗ್ಗೆ ಮಾಹಿತಿ ನೀಡುತ್ತದೆ. ಇದರಿಂದ ಅವುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ನಿಖರ ಮಾಹಿತಿ ಪಡೆಯುವ ಉದ್ದೇಶವಿತ್ತು.
ಕಾಳಿಂಗ ಸರ್ಪ ಸ್ವಜಾತಿ ಭಕ್ಷಕ, ಅದು ಕೆರೆ ಹಾವು , ನಾಗರಹಾವು (ಇಂಡಿಯನ್ ಕೋಬ್ರಾ), ಹಪ್ಪಟೆ ಹಾವು (ಪಿಟ್ ವೈಪರ್), ಹೆಬ್ಬಾವು (ಪೈಥಾನ್) ಇತ್ಯಾದಿ ಹಾವುಗಳನ್ನಲ್ಲದೇ ಸ್ವಜಾತಿಭಕ್ಷಕವೂ ಹೌದಂತೆ. ಬೇರೆ ಹಾವುಗಳಲ್ಲಿ ಹೆಣ್ಣು ಹಾವು ಉದ್ದ ಮತ್ತು ಬಲಿಷ್ಠವಾಗಿರುತ್ತವೆ. ಆದರೆ ಕಾಳಿಂಗ ಸರ್ಪಗಳಲ್ಲಿ ಗಂಡು ಹಾವೇ ಬಲಿಷ್ಠ. ಗಂಡು ಕಾಳಿಂಗ ಸಾಮಾನ್ಯವಾಗಿ 10-12 ಅಡಿ ಉದ್ದವಿದ್ದರೆ, ಹೆಣ್ಣು ಕಾಳಿಂಗ ಸರ್ಪ 6 - 8 ಅಡಿ ಉದ್ದ ಇರುತ್ತದೆ.
ಹೆಣ್ಣು ಕಾಳಿಂಗ ಸರ್ಪ ದೇಹದಿಂದ ಒಂದು ವಿಚಿತ್ರ ವಾಸನೆಯನ್ನು ಹೊರಸೂಸಿ, ಲೈಂಗಿಕ ಕ್ರಿಯೆಗೆ ಸಿದ್ಧವಿರುವುದಾಗಿ ಪ್ರಕಟಿಸುತ್ತದೆ. ಅದನ್ನು ಸೇರಲು ಬರುವ ಒಂದಕ್ಕಿಂತ ಹೆಚ್ಚು ಗಂಡು ಕಾಳಿಂಗ ಸರ್ಪಗಳ ಮಧ್ಯೆ ಕಾದಾಟ ನಡೆದು, ಗೆದ್ದ ಗಂಡು, ಹೆಣ್ಣು ಕಾಳಿಂಗದೊಡನೆ ಕೂಡುತ್ತದೆ. ಈ ಮಿಥುನ ಸುಮಾರು ಒಂದು ಗಂಟೆವರೆಗೂ ನಡೆಯುತ್ತವೆ.
ಈ ಕ್ರಿಯೆಯ ನಂತರ ಗಂಡು ಕಾಳಿಂಗ ಹೆಣ್ಣು ಕಾಳಿಂಗವನ್ನು ಕಚ್ಚಿ ಕೊಂದು ತಿನ್ನುವ ವಿಚಿತ್ರ ಘಟನೆಗಳು ಕ್ಯಾಮೆರಾದಲ್ಲಿ ದಾಖಲಾಗಿವೆ. ಆದರೆ ಇದಕ್ಕೆ ಕಾರಣ ಏನೆಂಬುವುದು ಅಧ್ಯಯನಗಳು ಸ್ಪಷ್ಟಪಡಿಸಿಲ್ಲ. ಹೆಣ್ಣು ಕಾಳಿಂಗಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಇದೂ ಒಂದು ಕಾರಣ ಇರಬಹುದು ಎಂದು ತಜ್ಞರ ಅಭಿಪ್ರಾಯ.
ಹೆಣ್ಣು ಕಾಳಿಂಗ ಹಾವು ಹೆಚ್ಚು ಸೂಕ್ಷ್ಮ ಸ್ವಭಾವದವು. ಅವುಗಳ ವಾಸಸ್ಥಾನದ ವ್ಯಾಪ್ತಿಯೂ ಗಂಡಿಗಿಂತ ಕಡಿಮೆ. ಅದಕ್ಕೆ ಅವು ತುಂಬಾ ಸಂಖ್ಯೆಯಲ್ಲಿ ಕಣ್ಣಿಗೆ ಬೀಳುವುದು ಕಡಿಮೆ. ಆದ್ದರಿಂದ ಅವುಗಳ ಸಂಖ್ಯೆ ಕಡಿಮೆ ಇರಬಹುದು ಎಂಬ ವಾದವೂ ಇದೆ. ಆದರೂ ಈ ಬಗ್ಗೆ ನಡೆದ ಅಧ್ಯಯನದ ಸ್ಪಷ್ಟ ವರದಿಗಳಿಲ್ಲ. ಹೆಣ್ಣಿನ ಸಂಖ್ಯೆ ಕಡಿಮೆಯಾಗುತ್ತಿರುವುದು ಮಾತ್ರ ಆತಂಕ ಸೃಷ್ಟಿಸಿದೆ.
ಕಾಳಿಂಗ ಸರ್ಪಗಳ ವರ್ತನೆ ಬಗ್ಗೆ ಗೂಗಲ್ ಮಾಡಿದರೆ ಬೇರೆ ಬೇರೆ ರೀತಿಯ ಉತ್ತರಗಳು ಸಿಗುತ್ತವೆ. ಪ್ರತಿಯೊಂದೂ ಕಾಳಿಂಗ ಹಾವಿಗೂ ತನ್ನದೇ ಆಧ ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿ ಇರುತ್ತದೆ. ತನ್ನ ವ್ಯಾಪ್ತಿಯೊಳಗೆ ಬಂದ ಹೆಣ್ಣು ಹಾವನ್ನು ಗಂಡು ಕಾಳಿಂಗ ಕೊಲ್ಲುತ್ತದೆ. ಲೈಂಗಿಕ ಕ್ರಿಯೆಗೆ ಸಹಕರಿಸಿದ ಹೆಣ್ಣನ್ನೂ ಕೊಲ್ಲುತ್ತಂತೆ ಬಲಿಷ್ಠ ಗಂಡು ಜೀವ. ಬಲಿಷ್ಠವಾಗಿರುವುದರಿಂದ ಹಸಿವಾದಾಗ ತನಗಿಂತ ದುರ್ಬಲ ಹೆಣ್ಣು ಹಾವನ್ನು ಕೊಂದು ತಿನ್ನುವ ಪರಿಪಾಠವೂ ಉಂಟಂತೆ. ಮತ್ತೊಂದು ವಿಚಿತ್ರ, ಇಂಟೆರೆಸ್ಟಿಂಗ್ ಸಂಗತಿ ಎಂದರೆ ಗಂಡು ಕಾಳಿಂಗಗಳು ಏಕಪತ್ನಿ ವ್ರತಸ್ಥವಾಗಿರುತ್ತವಂತೆ. ತಾನು ಕೂಡಿದ ಹೆಣ್ಣು ಕಾಳಿಂಗ ಬೇರೆ ಗಂಡು ಹಾವಿನೊಂದಿಗೆ ಕೂಡಿದ್ದು ಗೊತ್ತಾದರೂ ಕಥೆ ಮುಗೀತು. ಕೊಂದೇ ಬಿಡುತ್ತದೆ ಎಂದೂ ಕೆಲವರು ಹೇಳುತ್ತಾರೆ. ಆದರೆ, ಇವು ಯಾವುದಕ್ಕೂ ಸೂಕ್ತ ಅಧ್ಯಯನದಿಂದ ಬಂದ ವರದಿಗಳಿಲ್ಲ. ಆದರೆ ಅದಕ್ಕೆಲ್ಲಾ ಯಾವುದೇ ದಾಖಲೆಗಳಿಲ್ಲ. ಇದರಲ್ಲಿ ಸತ್ಯ ಎಷ್ಟು ಸುಳ್ಳೆಷ್ಟು ಎಂಬುದು ಅಧ್ಯಯನಗಳು ಹೇಳಬೇಕಷ್ಟೆ.