ನಗರ ಹೊರವಲಯದ ಬುರಣಾಪುರ ಗ್ರಾಮದ ಬಳಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಭಾನುವಾರ ಪರಿಶೀಲಿಸಿ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ ಅವರು, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಈಗಾಗಲೇ ಟೆಂಡರ್ ಅಧಿಸೂಚನೆ ಹೊರಡಿಸಲಾಗಿದ್ದು, ಒಂದು ವರ್ಷದಲ್ಲಿ ವಿಜಯಪುರದಲ್ಲಿ ವಿಮಾನ ಹಾರಾಡುವ ನಿಟ್ಟಿನಲ್ಲಿ ದೃಢಸಂಕಲ್ಪ ಹಾಗೂ ಧ್ಯೇಯ ಹೊಂದಲಾಗಿದೆ ಎಂದು ಭರವಸೆ ನೀಡಿದರು.
ಈಗಾಗಲೇ ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ 220 ಕೋಟಿಗೆ ಆಡಳಿತಾತ್ಮಕ ಅನುಮೋದನೆ ದೊರಕಿದ್ದು, ಪ್ರಥಮ ಹಂತವಾಗಿ 95 ಕೋಟಿ ವೆಚ್ಚದ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ವಿಜಯಪುರ ಲೋಕೋಪಯೋಗಿ ಇಲಾಖೆ ವತಿಯಿಂದ ಟೆಂಡರ್ ಅಧಿಸೂಚನೆ ಹೊರಡಿಸಲಾಗಿದೆ. ಪ್ರಸಕ್ತ ವರ್ಷದ ಸೆಪ್ಟೆಂಬರ್ 25 ಟೆಂಡರ್ ಸಲ್ಲಿಕೆ ಮಾಡಲು ಕೊನೆಯ ದಿನ ನಿಗದಿಗೊಳಿಸಲಾಗಿದ್ದು, ಸೆಪ್ಟೆಂಬರ್ 28ರಂದು ಟೆಕ್ನಿಕಲ್ ಬಿಡ್ ಓಪನ್ ಮಾಡಲಾಗುತ್ತಿದೆ. ಆ ನಂತರ ಸೆ. 29ರಂದು ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ಗುತ್ತಿಗೆದಾರರ ಅರ್ಹತೆ, ಈ ಹಿಂದೆ ಕೆಲಸ ಮಾಡಿದ ತಾಂತ್ರಿಕ ಕಾರ್ಯಾನುಭವ ಮೊದಲಾದ ಅರ್ಹತೆಗಳನ್ನು ಪರಿಗಣಿಸಿ ಟೆಂಡರ್‌ಗೆ ಒಪ್ಪಿಗೆ ನೀಡುವ ಕಾರ್ಯ ಮಾಡಲಾಗುತ್ತದೆ ಎಂದು ಕಾರಜೋಳ ತಿಳಿಸಿದರು.
ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಮೃತ ಹಸ್ತದಿಂದ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಒಂದು ವರ್ಷದೊಳಗಾಗಿ ವಿಜಯಪುರದಲ್ಲಿ ವಿಮಾನ ಹಾರಾಟವಾಗಬೇಕು ಎಂಬುದು ನನ್ನ ದೃಢ ಸಂಕಲ್ಪವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿದೆ. ಕೊರೋನಾ ನಂತರ ಅಭಿವೃದ್ಧಿಗೆ ಶರವೇಗ ನೀಡಲಾಗುವುದು ಎಂದು ಭರವಸೆ ನೀಡಿದರು.
ವಿಜಯಪುರ ಜಿಲ್ಲೆ ವಿಮಾನ ನಿಲ್ದಾಣಕ್ಕಾಗಿ ಅತ್ಯಂತ ಅನುಕೂಲಕರ ವಾತಾವರಣ ಹಾಗೂ ಸೌಲಭ್ಯಗಳನ್ನು ಹೊಂದಿದೆ. ಐತಿಹಾಸಿಕ ಸ್ಥಳಗಳು ಇರುವುದರಿಂದ ವಿದೇಶದಿಂದ ಹೆಚ್ಚಿನ ಪ್ರವಾಸಿಗರು, ಸ್ಮಾರಕಗಳ ಅಧ್ಯಯನಕ್ಕೆ ಹೆಚ್ಚಾಗಿ ಬರಲಿದ್ದು, ಹೆಚ್ಚು ಕೈಗಾರಿಕೆಗಳ ಸ್ಥಾಪನೆಗೂ ನೆರವಾಗಲಿದೆ. ನೀರು, ವಿದ್ಯುತ್ ಮತ್ತು ಜಮೀನುಗಳ ಸಮರ್ಪಕ ಸೌಲಭ್ಯವನ್ನು ಜಿಲ್ಲೆ ಹೊಂದಿದೆ. ವಿಮಾನ ನಿಲ್ದಾಣದಿಂದ ಹೆಚ್ಚು ಲಾಭದಾಯಕ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವಿಮಾನ ನಿಲ್ದಾಣ ನಿರ್ಮಾಣದಿಂದ ಪ್ರವಾಸೋದ್ಯಮ, ಕೈಗಾರಿಕಾಭಿವೃದ್ಧಿ, ಆರ್ಥಿಕ ಚಟುವಟಿಕೆಗಳಿಗೂ ಸಹಕಾರಿಯಾಗಲಿದ್ದು, ಅಭಿವೃದ್ಧಿಗೆ ಇದು ರಾಜ್ಯ ಸರ್ಕಾರದ ಕಾಣಿಕೆಯಾಗಲಿದೆ ಎಂದರು. ಲೋಕೋಪಯೋಗಿ ಇಲಾಖೆಯ ಕಾ¿åರ್‍ನಿರ್ವಾಹಕ ಅಭಿಯಂತರರು, ಅಧಿಕಾರಿಗಳು ಪಾಲ್ಗೊಂಡಿದ್ದರು.