ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಬಾರದ್ದರಿಂದ ಇನ್ನೂ ಶಾಲೆಗಳು ಆರಂಭವಾಗಿಲ್ಲ. ಕಳೆದ ಮಾಚ್‌ರ್ ತಿಂಗಳಲ್ಲಿ ಕೊರೋನಾ ಸೋಂಕು ಕಾಲಿಟ್ಟವೇಳೆ ಪರೀಕ್ಷೆಯನ್ನು ನಡೆಸದೇ ಬೇಸಿಗೆ ರಜೆ ಘೋಷಿಸಲಾಗಿತ್ತು. ಸುಮಾರು 4 ತಿಂಗಳೇ ಕಳೆದರೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಸೋಂಕು ಇನ್ನಷ್ಟುಹೆಚ್ಚುತ್ತಲೇ ಸಾಗಿದ್ದರಿಂದ ಶಾಲೆ ಪುನಾರಂಭ ಯಾವಾಗ ಎಂಬುದು ಅನಿಶ್ಚಿತತೆಯಿಂದ ಕೂಡಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ದೊಡ್ಡ ಹೊಡೆತ ಬೀಳುತ್ತಿರುವುದನ್ನು ಮನಗಂಡ ಮೆಳ್ಳಾಗಟ್ಟಿಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಮನೆಮನೆಗೆ ಹೋಗಿ ಪಾಠ ಮಾಡುತ್ತಿದ್ದಾರೆ. ವಾಟ್ಸ್‌ಆ್ಯಪ್ ಮೂಲಕವೂ ಮನೆಪಾಠ ಪರಿಶೀಲಿಸುತ್ತಿದ್ದಾರೆ.
ಶಾಲೆಯಲ್ಲಿ ಒಟ್ಟು 113 ಮಕ್ಕಳಿದ್ದು, 5 ಶಿಕ್ಷಕರಿದ್ದಾರೆ. ಈಗ ಅವರೆಲ್ಲರೂ ವಿದ್ಯಾರ್ಥಿಗಳಿಗೆ ಪುನರ್ ಮನನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿಂದಲೂ ವಿದ್ಯಾರ್ಥಿಗಳ ಮನೆಗೇ ಹೋಗಿ ಪಾಠ ಹೇಳುತ್ತಿದ್ದಾರೆ. ಗೃಹ ಪಾಠ ಕೊಟ್ಟು ಎರಡು ದಿನ ಬಿಟ್ಟು ಮತ್ತೆ ಪರಿಶೀಲಿಸಲು ಹೋಗುತ್ತಿದ್ದಾರೆ. ಈಗಾಗಲೇ ಪುಸ್ತಕ ಪೂರೈಕೆಯೂ ಆಗಿರುವುದರಿಂದ ಅದರಲ್ಲಿನ ಪಾಠ ಮಾಡುತ್ತಿದ್ದಾರೆ. ಸ್ಪಷ್ಟಓದು, ಶುದ್ಧ ಬರಹ ಕಲಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಮನೆಗೇ ಬಂದು ಕಲಿಸುತ್ತಿರುವ ಶಿಕ್ಷಕರ ಕಾರ್ಯಕ್ಕೆ ಗ್ರಾಮದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ತಿಂಗಳ ಬಳಿಕ ಮಕ್ಕಳು ಪುಸ್ತಕ ಹಿಡಿಯುವಂತಾಗಿದ್ದಕ್ಕೆ ಪಾಲಕರು ಖುಷಿಪಡುತ್ತಿದ್ದಾರೆ.
ಮಕ್ಕಳ ಗೃಹ ಪಾಠ ಪರಿಶೀಲಿಸಲು, ಪಾಲಕರಿಗೆ ಅಗತ್ಯ ಸಲಹೆ ನೀಡಲು, ವಿದ್ಯಾರ್ಥಿಗಳಿಗೆ ಸೂಚನೆ ನೀಡುವುದಕ್ಕೆಂದು ನಮ್ಮ ಶಾಲೆ, ನಮ್ಮ ಕನಸು ಎಂಬ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್ ರಚನೆ ಮಾಡಿಕೊಂಡಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲೇ ಮಕ್ಕಳ ಗೃಹಪಾಠಗಳನ್ನು ಪರಿಶೀಲಿಸುತ್ತಿರುವ ಶಿಕ್ಷಕರು ತಪ್ಪಿದ್ದಲ್ಲಿ ತಿದ್ದಿ ಮತ್ತೆ ಅದೇ ಗ್ರೂಪ್‌ನಲ್ಲಿ ಹಾಕಿ ಸಲಹೆ ಸೂಚನೆ ನೀಡುತ್ತಿದ್ದಾರೆ. ವಾಟ್ಸ್‌ಆ್ಯಪ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳ ಮನೆಪಾಠವನ್ನು ನೇರವಾಗಿ ಹೋಗಿ ಪರಿಶೀಲಿಸುತ್ತಿದ್ದಾರೆ. ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠಗಳ ಬಗ್ಗೆ ಹೆಚ್ಚಿನ ವಿವರಣೆ ನೀಡುತ್ತಿದ್ದಾರೆ. ಇದೇ ರೀತಿ ಜಿಲ್ಲೆಯ ಹಲವು ಶಾಲೆಗಳಲ್ಲಿ ಶಿಕ್ಷಕರು ಕೊರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ಶ್ರಮಿಸುತ್ತಿದ್ದಾರೆ.
ನಾವು ಶಾಲೆಗೆ ಹೋಗಿ ಖಾಲಿ ಕುಳಿತು ಬರುವುದಕ್ಕಿಂತ ವಿದ್ಯಾರ್ಥಿಗಳ ಮನೆಗೆ ಹೋಗಿ ಪಾಠ ಮಾಡಲು ನಿರ್ಧರಿಸಿದೆವು. ಅದರಂತೆ ನಮ್ಮ ಶಾಲೆಯ ಎಲ್ಲ ಶಿಕ್ಷಕರು ಒಂದೊಂದು ಓಣಿಯಂತೆ ನಿತ್ಯವೂ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇವೆ. ಕಲಿಕೆ ಜತೆಗೆ ಪುನರ್ ಮನನವನ್ನೂ ಮಾಡಿಸುತ್ತಿದ್ದೇವೆ ಎಂದು ಮೆಳ್ಳಾಗಟ್ಟಿ ಪ್ಲಾಟ್ ಶಿಕ್ಷಕರು ಅಶೋಕ ಆರ್.ಎಚ್ ಅವರು ಹೇಳಿದ್ದಾರೆ.
ಆನ್‌ಲೈನ್ ಸೌಲಭ್ಯ ಇರುವ ಮಕ್ಕಳು, ಇದ್ದರೂ ಪಾಲಕರು ಕೆಲಸಕ್ಕೆ ಹೋದ ವೇಳೆ ಉಪಯೋಗಿಸಲು ಸಾಧ್ಯವಿಲ್ಲದವರು ಹಾಗೂ ಯಾವುದೇ ಸೌಲಭ್ಯ ಇಲ್ಲದ ಹೀಗೆ ಮೂರು ರೀತಿಯ ಗುಂಪು ಮಾಡಿಕೊಂಡು ಅವರಿಗೆ ಪಾಠ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಡಿಪಿಐ ಅಂದಾನೆಪ್ಪ ವಡಗೇರಿ ಅವರು ತಿಳಿಸಿದ್ದಾರೆ.