ಯಡಿಯೂರಪ್ಪ ಬೆಂಗ್ಳೂರು ನಗರ ಪ್ರದಕ್ಷಿಣೆ: ಸ್ಮಾರ್ಟ್‌ಸಿಟಿ ಕಾಮಗಾರಿ ಪೂರ್ಣಕ್ಕೆ ಗುಡುವು

First Published Jan 31, 2021, 8:16 AM IST

ಬೆಂಗಳೂರು(ಜ.31): ಟೆಂಡರ್‌ ಶ್ಯೂರ್‌ ಮಾದರಿಯ ರಸ್ತೆಗಳನ್ನು ಜುಲೈ ಅಂತ್ಯದೊಳಗೆ ಹಾಗೂ ಉಳಿದ ಕಾಮಗಾರಿಗಳನ್ನು ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. 

ಶನಿವಾರ ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಳ್ಳಲಾದ ರೇಸ್‌ ಕೋರ್ಸ್‌ ರಸ್ತೆ, ರಾಜಾರಾಮ್‌ ಮೋಹನ್‌ ರಾಯ್‌ ರಸ್ತೆ, ಹೇಯ್‌ ರಸ್ತೆ, ವುಡ್‌ ಸ್ಟ್ರೀಟ್‌, ಟಾಟಾ ಲೇನ್‌, ಕ್ಯಾಪಿಟಲ್‌ ಹೋಟೆಲ್‌-ರಾಜಭವನ ಜಂಕ್ಷನ್‌ ಮತ್ತು ನೆಹರು ತಾರಾಲಯ ರಸ್ತೆಯ ಕಾಮಗಾರಿಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರಿಶೀಲನೆ ನಡೆಸಿದರು.
undefined
ಬೆಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ 43 ರಸ್ತೆಗಳನ್ನು .1,939 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ನಾಲ್ಕೈದು ರಸ್ತೆಗಳ ಕಾಮಗಾರಿ ಮುಕ್ತಾಯವಾಗಿದೆ. 29 ರಸ್ತೆಯ ಕಾಮಗಾರಿ ಪ್ರಗತಿಯಲಿದೆ. ನಾಲ್ಕು ರಸ್ತೆಯ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯ .130 ಕೋಟಿ ವೆಚ್ಚ ಮಾಡಲಾಗಿದೆ. ಏಪ್ರಿಲ್‌ ಮೊದಲ ವಾರದಲ್ಲಿ ಮತ್ತೊಂದು ಬಾರಿ ಪರಿಶೀಲನೆ ನಡೆಸಲಾಗುವುದು. ಜೂನ್‌-ಜುಲೈ ವೇಳೆಗೆ ಟೆಂಡರ್‌ ಶ್ಯೂರ್‌ ಕಾಮಗಾರಿಗಳು ಹಾಗೂ ಉಳಿದ ಕಾಮಗಾರಿಯನ್ನು 2022ರ ಒಳಗಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
undefined
ರೆಸಿಡೆನ್ಸಿ ರಸ್ತೆ, ರಾಜಭವನ ರಸ್ತೆ, ನೆಹರು ತಾರಾಲಯ ರಸ್ತೆಯ ಕಾಮಗಾರಿಗಳನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಸ್‌ನ ಒಳಗೆ ನಿಂತುಕೊಂಡು ವೀಕ್ಷಣೆ ಮಾಡಿದರು. ಉಳಿದಂತೆ ರೇಸ್‌ಕೋರ್ಸ್‌ ರಸ್ತೆ, ಹೇಯ್‌ ರಸ್ತೆ, ವುಡ್‌ ಸ್ಟ್ರೀಟ್‌ನ ಕಾಮಗಾರಿಗಳನ್ನು ಬಸ್‌ನಿಂದ ಕಳೆದ ಇಳಿದು ಪರಿಶೀಲನೆ ನಡೆಸಿದರು.
undefined
ಬೆಂಗಳೂರು ವಿಶ್ವಮಟ್ಟದ ನಗರ ಆಗಿರುವುದರಿಂದ ಅಭಿವೃದ್ಧಿ ಪಡಿಸುವುದು ನಮ್ಮ ಅಪೇಕ್ಷೆಯಾಗಿದೆ. ನಗರದ ಅಭಿವೃದ್ಧಿಗೆ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲ. ಶನಿವಾರ ಪರಿಶೀಲನೆ ಮಾಡಿದ ರಸ್ತೆಗಳಲ್ಲಿ ಸೈಕಲ್‌ಮಾರ್ಗ, ಪಾದಚಾರಿ ಮಾರ್ಗ, ಮೂಲಸೌಕರ್ಯ ಸರಬರಾಜು ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು.
undefined
ನಗರ ಪ್ರದಕ್ಷಿಣೆ ವೇಳೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ್‌, ಕಂದಾಯ ಸಚಿವ ಆರ್‌.ಅಶೋಕ, ನಗರಾಭಿವೃದ್ದಿ ಸಚಿವ ಬಿ.ಎ,ಬಸವರಾಜ್‌, ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, ಶಿವಾಜಿನಗರದ ಶಾಸಕ ರಿಜ್ವಾನ್‌ ಅರ್ಷದ್‌, ಶಾಂತಿನಗರದ ಶಾಸಕ ಹ್ಯಾರಿಸ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ, ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
undefined
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರು ಮತ್ತು ಅಧಿಕಾರಿಗಳು ರೇಸ್‌ ಕೋರ್ಸ್‌ ರಸ್ತೆ ಪರಿಶೀಲನೆ ನಡೆಸುತ್ತಿರುವಾಗ ಪಕ್ಕದ ಸರ್ಕಾರಿ ರಾಮ್‌ನಾರಾಯಣ್‌ ಚಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣೆ ಮಹಾವಿದ್ಯಾಲಯದ ಆವರಣದ ಒಳಗಿದ್ದ ವಿದ್ಯಾರ್ಥಿಗಳ ದೊಡ್ಡ ಗುಂಪು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೂಗಿ ಕರೆದರು. ಈ ವೇಳೆ ವಿದ್ಯಾರ್ಥಿಗಳು, ‘ರೇಸ್‌ಕೋರ್ಸ್‌ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ರಸ್ತೆ ದಾಟುವುದಕ್ಕೆ ತೊಂದರೆ ಆಗುತ್ತಿದೆ. ದಯವಿಟ್ಟು ಸ್ಕೈವಾಕ್‌ ನಿರ್ಮಾಣ ಮಾಡಿಕೊಡಿ’ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲಿಯೇ ನಿರ್ದೇಶಿಸಿದರು.
undefined
ಬಿಎಂಟಿಸಿ ಬಸ್‌ ನಲ್ಲಿ ಸಿಟಿ ರೌಂಡ್ಸ್‌ ನಡೆಸಿದ ಮುಖ್ಯಮಂತ್ರಿ ಬಸ್‌ನಲ್ಲಿ ಬೇಕರಿ ಸಿಹಿ ತಿಂಡಿ ಸೇವನೆ ಮಾಡಿದರು. ಸೆಂಟ್‌ ಮಾರ್ಕ್ಸ್‌ ರಸ್ತೆಯ ಕೋಶೀಸ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಸಚಿವ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳೊಂದಿಗೆ ಲೆಮನ್‌ ಟೀ ಸೇವಿಸಿದರು.
undefined
ಮುಖ್ಯಮಂತ್ರಿಗಳು ಕಾಮಗಾರಿಗಳು ಪರಿಶೀಲನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆ, ಕಸ್ತೂರಿ ಬಾ ರಸ್ತೆ, ರೆಸಿಡೆನ್ಸಿ ರಸ್ತೆ, ರಿಚ್‌ಮಂಡ್‌ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಅರಮನೆ ರಸ್ತೆ, ರಾಜಭವನ ರಸ್ತೆ ಸೇರಿದಂತೆ ವಿವಿಧ ಕಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಮುಖ್ಯಮಂತ್ರಿಗಳು ಟೀ ಸೇವನೆಗೆ ಸೆಂಟ್‌ಮಾರ್ಕ್ಸ್‌ ರಸ್ತೆಯಲ್ಲಿ ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಹೋಟೆಲ್‌ಗೆ ತೆರಳಿದ ಪರಿಣಾಮ ಸುಮಾರು ಎರಡು ಕಿ.ಮೀ ನಷ್ಟುಸಂಚಾರ ದಟ್ಟಣೆ ಉಂಟಾಗಿತ್ತು.
undefined
click me!