ಶೃಂಗೇರಿ ಅಂಚೆ ಮತ ಮರುಎಣಿಕೆ: ಬಿಜೆಪಿ ಏಜೆಂಟರಿಂದಲೇ ಹೊಸ ಟ್ವಿಸ್ಟ್

Published : May 11, 2026, 02:00 PM IST

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಪ್ರಕರಣವು ಹೊಸ ತಿರುವು ಪಡೆದಿದೆ. 2023ರ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಏಜೆಂಟ್‌ಗಳೇ ಈಗ ಮರುಎಣಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂದು ಮಾನ್ಯವಾಗಿದ್ದ ಮತ ಈಗ ಅಮಾನ್ಯಗೊಂಡಿರುವುದರ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

PREV
16
ಶೃಂಗೇರಿ ಅಂಚೆ ಮತ ಪ್ರಕರಣದಲ್ಲಿ ಮತ್ತೆ ಟ್ವಿಸ್ಟ್

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ (Postal Ballots) ಮರುಎಣಿಕೆ ಪ್ರಕ್ರಿಯೆಯು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗ ಈ ಪ್ರಕರಣಕ್ಕೆ ಹೊಸದೊಂದು 'ಟ್ವಿಸ್ಟ್' ಸಿಕ್ಕಿದೆ. 2023ರ ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದ ಚುನಾವಣಾ ಏಜೆಂಟ್‌ಗಳೇ ಈಗ ಮರುಎಣಿಕೆ ಪ್ರಕ್ರಿಯೆಯ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

26
ಅಂದು ಪಾರದರ್ಶಕ, ಇಂದು ಅನುಮಾನಸ್ಪದ!

ಬಿಜೆಪಿ ಪಕ್ಷದ ಅಂದಿನ ಚುನಾವಣಾ ಏಜೆಂಟ್ ಹಾಗೂ ಹಾಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ಎಸ್. ಸತೀಶ್ ಅವರು ಬಹಿರಂಗ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಅಚ್ಚರಿಯ ಸಂಗತಿಗಳನ್ನು ಹೊರಹಾಕಿದ್ದಾರೆ. '2023ರಲ್ಲಿ ನಡೆದ ಎಣಿಕೆ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿತ್ತು. ನಾವು ದಾಖಲಿಸಿಕೊಂಡ ಸಂಖ್ಯೆ ಮತ್ತು ಅಧಿಕಾರಿಗಳು ಎಣಿಕೆ ಮಾಡಿದ ಸಂಖ್ಯೆ ಎರಡೂ ಒಂದೇ ಆಗಿತ್ತು. ಎಲ್ಲಾ ಏಜೆಂಟ್‌ಗಳ ಸಹಿ ಪಡೆದ ನಂತರವೇ ಅಂದು ಫಲಿತಾಂಶ ಘೋಷಣೆಯಾಗಿತ್ತು' ಎಂದು ಸ್ಪಷ್ಟಪಡಿಸಿದ್ದಾರೆ.

36
ಅಂಕಿ-ಅಂಶಗಳ ವ್ಯತ್ಯಾಸವೇ ಸಂಶಯದ ಮೂಲ

2023ರ ಫಲಿತಾಂಶದ ಪ್ರಕಾರ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ 689 ಅಂಚೆ ಮತಗಳು ಲಭಿಸಿದ್ದವು. ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ 562 ಮತಗಳು ಬಂದಿದ್ದವು ಮತ್ತು 279 ಮತಗಳು ಅಂದೇ ತಿರಸ್ಕೃತಗೊಂಡಿದ್ದವು. ಆದರೆ, 2026ರ ಮರುಎಣಿಕೆಯಲ್ಲಿ 257 ಮತಗಳು ಅಮಾನ್ಯಗೊಂಡಿವೆ.

46
ಅಂದು ಮಾನ್ಯವಾಗಿದ್ದ ಮತ ಈಗ ಅಮಾನ್ಯ

ಇದರಲ್ಲಿ ಗಮನಾರ್ಹ ಅಂಶವೆಂದರೆ, ರದ್ದಾದ 257 ಮತಗಳಲ್ಲಿ 255 ಮತಗಳು ಕಾಂಗ್ರೆಸ್ ಅಭ್ಯರ್ಥಿಯದ್ದೇ ಆಗಿದೆ! 'ಅಂದು ಮಾನ್ಯವಾಗಿದ್ದ ಮತಗಳು ಈಗ ಅಮಾನ್ಯವಾಗಿದ್ದು ಹೇಗೆ?' ಎನ್ನುವುದು ಬಿಜೆಪಿ ಏಜೆಂಟ್‌ಗಳನ್ನೇ ಕಾಡುತ್ತಿರುವ ಯಕ್ಷಪ್ರಶ್ನೆ.

56
ಆಮಿಷದ ಆರೋಪಕ್ಕೆ ದೇವರ ಸನ್ನಿಧಿಯಲ್ಲಿ ಉತ್ತರ

ಮರುಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಏಜೆಂಟ್‌ಗಳು ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರೆ ಅಥವಾ ಆಮಿಷಕ್ಕೆ ಒಳಗಾಗಿದ್ದಾರೆ ಎಂಬ ಸುಳ್ಳು ಅಪಪ್ರಚಾರ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಸತೀಶ್ ಮತ್ತು ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ತಾವು ನಿರಪರಾಧಿಗಳು ಮತ್ತು ಪಕ್ಷಕ್ಕೆ ನಿಷ್ಠರಾಗಿದ್ದೇವೆ ಎಂದು ತೋರಿಸಲು ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡಿದ್ದಾರೆ.

66
ಸಮಗ್ರ ತನಿಖೆಗೆ ಆಗ್ರಹ

'ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸವಾಗುತ್ತಿದೆ. ಈ ಇಡೀ ಮರುಎಣಿಕೆ ಪ್ರಕ್ರಿಯೆಯಲ್ಲಿ ಏನೋ ನಡೆದಿದೆ ಎಂಬ ಸಂಶಯ ನಮಗೂ ಇದೆ' ಎಂದು ಹೇಳಿರುವ ಸತೀಶ್, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಮರುಎಣಿಕೆಯ ನಂತರ ಜೀವರಾಜ್ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ, ಅಂದಿನ ಬಿಜೆಪಿ ಏಜೆಂಟ್‌ಗಳ ಈ ಹೇಳಿಕೆಗಳು ಪ್ರಕರಣಕ್ಕೆ ತಿರುವು ನೀಡಿವೆ.

Read more Photos on
click me!

Recommended Stories