Chikkamagaluru : ದಕ್ಷಿಣ ಭಾರತದಲ್ಲೇ ಪ್ರಥಮ: ಆಪರೇಷನ್ ಒಂಟಿ ಕಾಡುಕೋಣ ಸೆರೆ ಸಕ್ಸಸ್

Published : May 18, 2026, 05:45 AM IST

ಚಿಕ್ಕಮಗಳೂರು ತಾಲೂಕಿನ ಅರೆನೂರು ಹಕ್ಕಿಮಕ್ಕಿಯಲ್ಲಿ ರೈತರ ಜಮೀನುಗಳಿಗೆ ಹಾನಿ ಮಾಡುತ್ತಿದ್ದ ಒಂಟಿ ಕಾಡುಕೋಣವನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.  ಕಾರ್ಯಾಚರಣೆಯ ಬಳಿಕ, ಕಾಡುಕೋಣವನ್ನು ಶಿವಮೊಗ್ಗದ ಮೃಗಾಲಯಕ್ಕೆ ಸ್ಥಳಾಂತರಿಸಲಾಗುತ್ತಿದೆ.

PREV
14
ಒಂಟಿ ಕಾಡುಕೋಣ

ಒಂಟಿ ಕಾಡುಕೋಣವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಈ ಕಾಡು ಕೋಣ ಚಿಕ್ಕಮಗಳೂರು ತಾಲೂಕಿನ ಅರೆನೂರು ಹಕ್ಕಿಮಕ್ಕಿಯಲ್ಲಿ ಜಮೀನುಗಳಿಗೆ ಹಾನಿ ಮಾಡಿತ್ತು.

24
ಕಾಡುಕೋಣಕ್ಕೆ ಡಾರ್ಟ್

ಕಾರ್ಯಾಚರಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಆಲ್ದೂರು ವಿಭಾಗದಲ್ಲಿ ಕಾಡುಕೋಣವೊಂದನ್ನು ಸೆರೆ ಹಿಡಿಯಲಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕಾರ್ಯಾಚರಣೆ ಆರಂಭಿಸಿ ಶುಕ್ರವಾರ ಒಂದು ಕಾಡುಕೋಣಕ್ಕೆ ಡಾರ್ಟ್ ಸಹ ಮಾಡಲಾಗಿತ್ತು. ಆದರೆ, ಡಾರ್ಟ್ ಮಾಡಲಾದ ಪ್ರದೇಶ ಬಹಳ ಆಳವಾಗಿತ್ತು. ಅದರ ಜೀವಕ್ಕೆ ಹಾನಿಯಾಗುವ ಸಾಧ್ಯತೆಯಿತ್ತು. ಈ ಹಿನ್ನೆಲೆಯಲ್ಲಿ ಕೋಣ ಹಿಡಿಯದೆ ವಾಪಸ್ ಅರಣ್ಯಕ್ಕೆ ಬಿಡಲಾಯಿತು.

34
ಸೆರೆ ಹಿಡಿದು ಸ್ಥಳಾಂತರ - ದಕ್ಷಿಣ ಭಾರತದಲ್ಲೇ ಪ್ರಥಮ

ಶನಿವಾರ ಕೊಪ್ಪ ವಿಭಾಗದಿಂದ ಆಲ್ದೂರು ಭಾಗಕ್ಕೆ ಕಾರ್ಯಾಚರಣೆ ಸ್ಥಳಾಂತರಿಸಿ ಕಾಡುಕೋಣವನ್ನು ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಮುಂದಿನ ದಿನಗಳಲ್ಲೂ ಸಹ ರೈತರ ಜಮೀನುಗಳಿಗೆ ನುಗ್ಗಿ ಹಾನಿ ಮಾಡುವ ಕಾಡುಕೋಣಗಳನ್ನು ಹಂತ ಹಂತವಾಗಿ ಸೆರೆ ಹಿಡಿದು ಸ್ಥಳಾಂತರ ಮಾಡಲಾಗುವುದು. ಕಾಡುಕೋಣಗಳ ಸೆರೆ ಬಗ್ಗೆ ಈ ಹಿಂದೆಯೇ ಹಲವು ಸಭೆಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೆ. ಈ ಬಗ್ಗೆ ಆದೇಶವೂ ಆಗಿತ್ತು ಎಂದರು.

44
ಶಿವಮೊಗ್ಗದ ಮೃಗಾಲಯಕ್ಕೆ ಸ್ಥಳಾಂತರ

ಈ ಕಾಡುಕೋಣವನ್ನು ಶಿವಮೊಗ್ಗದ ಮೃಗಾಲಯಕ್ಕೆ ಸ್ಥಳಾಂತರಿಸಿ ವೈದ್ಯಕೀಯ ಪರೀಕ್ಷೆ ಮಾಡಬೇಕಿದೆ. ತಂಡಕ್ಕೆ ವಿಶ್ರಾಂತಿ ಬೇಕಿರುವ ಕಾರಣ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಪುನಃ ಆರಂಭಿಸಲಾಗುವುದು ಎಂದರು.

Read more Photos on
click me!

Recommended Stories