ಚಿಕ್ಕಮಗಳೂರಿನಲ್ಲಿ ಮಿತಿಮೀರಿದ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ 'ರೋಸಿ' ಮತ್ತು 'ಸಿಂಧು' ಎಂಬ ಎರಡು ವಿಶೇಷ ತರಬೇತಿ ಪಡೆದ ಶ್ವಾನಗಳನ್ನು ಬಳಸುತ್ತಿದೆ. ಡ್ರೋನ್‌ಗಳು ವಿಫಲವಾದ ದಟ್ಟಾರಣ್ಯ ಪ್ರದೇಶಗಳಲ್ಲಿಯೂ ಈ ಶ್ವಾನಗಳು ತಮ್ಮ ವಾಸನಾ ಶಕ್ತಿಯಿಂದ ಆನೆಗಳನ್ನು ಪತ್ತೆಹಚ್ಚುತ್ತಿವೆ.
ಚಿಕ್ಕಮಗಳೂರು (ಫೆ.25): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ದಟ್ಟ ಅರಣ್ಯ ಮತ್ತು ಕಾಫಿ ತೋಟಗಳ ನಡುವೆ ಅಡಗಿ ಕುಳಿತು ರೈತರ ಮೇಲೆ ದಾಳಿ ಮಾಡುವ ಒಂಟಿ ಸಲಗಗಳನ್ನು ಪತ್ತೆ ಹಚ್ಚುವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೈಟೆಕ್ ಡ್ರೋನ್ ಕ್ಯಾಮೆರಾಗಳೂ ಕೂಡ ಸೋಲೊಪ್ಪಿಕೊಳ್ಳದ ಸಮಯದಲ್ಲಿ ಈಗ ಇಬ್ಬರು 'ಮಹಿಳಾ ಅತಿಥಿಗಳು' ಎಂಟ್ರಿ ಕೊಟ್ಟಿದ್ದಾರೆ. ಅವರೇ ರೋಸಿ ಮತ್ತು ಸಿಂಧು!
25
ಯಾರು ಈ ರೋಸಿ ಮತ್ತು ಸಿಂಧು?
ಇವರು ಅಂತಿಂಥವರಲ್ಲ, ಅರಣ್ಯ ಇಲಾಖೆಯ ಹೆಮ್ಮೆಯ 'ಟ್ರಾಕರ್ ಡಾಗ್ಸ್' (Tracker Dogs). ಬೆಲ್ಜಿಯಂ ಮಲೆನೈ (Belgian Malinois) ತಳಿಯ ಎರಡು ವರ್ಷದ ಈ ಹೆಣ್ಣು ಶ್ವಾನಗಳು ಈಗ ಕಾಡಾನೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿವೆ. ಎಂತಹ ದೈತ್ಯ ಒಂಟಿ ಸಲಗವಾಗಲಿ ಅಥವಾ ಹಿಂಡಿನಿಂದ ಬೇರ್ಪಟ್ಟ ಆನೆಗಳಾಗಲಿ, ಇವುಗಳ ಮುಂದೆ ಆಟ ನಡೆಯಲ್ಲ.
35
ಪತ್ತೆ ಹಚ್ಚುವಿಕೆಯಲ್ಲಿ ಇವೇ ಕಿಲಾಡಿ:
ಸಾಮಾನ್ಯವಾಗಿ ಅರಣ್ಯ ಇಲಾಖೆಯು ಆನೆಗಳ ಚಲನವಲನ ತಿಳಿಯಲು ಡ್ರೋನ್ ಕ್ಯಾಮೆರಾಗಳನ್ನು ಬಳಸುತ್ತದೆ. ಆದರೆ ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದಂತಹ ಪ್ರದೇಶಗಳಲ್ಲಿ ಅರಣ್ಯ ಮತ್ತು ಕಾಫಿ ತೋಟಗಳು ಎಷ್ಟು ದಟ್ಟವಾಗಿವೆ ಎಂದರೆ, ಡ್ರೋನ್ ಕಣ್ಣಿಗೂ ಆನೆಗಳು ಬೀಳುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ರೋಸಿ ಮತ್ತು ಸಿಂಧು ತಮ್ಮ ಅಪ್ರತಿಮ ವಾಸನಾ ಶಕ್ತಿಯ ಮೂಲಕ ಆನೆಗಳಿರುವ ನಿಖರ ಜಾಗವನ್ನು ಪತ್ತೆ ಹಚ್ಚುತ್ತಿವೆ. ಆನೆಗಳ ಮೂತ್ರದ ವಾಸನೆ ಮತ್ತು ಹೆಜ್ಜೆ ಗುರುತುಗಳನ್ನು ಆಧರಿಸಿ, ಆನೆಗಳು ಅರ್ಧದಿಂದ ಒಂದು ಕಿಲೋಮೀಟರ್ ದೂರದಲ್ಲಿರುವಾಗಲೇ ಇವು ಸುಳಿವು ನೀಡುತ್ತವೆ.
ಈ ಶ್ವಾನಗಳಿಗೆ ಬಂಡೀಪುರದಲ್ಲಿ ಅಮೃತ್ ಎಂಬುವವರಿಂದ ವಿಶೇಷ ತರಬೇತಿ ನೀಡಲಾಗಿದೆ. ಬೆಲ್ಜಿಯಂ ಮಲೆನೈ ತಳಿಯ ನಾಯಿಗಳು ತಮ್ಮ ಚಾಣಾಕ್ಷತನ ಮತ್ತು ಶಿಸ್ತಿಗೆ ಜಗತ್ಪ್ರಸಿದ್ಧ. ಇದೇ ಕಾರಣಕ್ಕೆ ಕಾಡಾನೆಗಳ ಚಲನವಲನ ಪತ್ತೆ ಹಚ್ಚುವ ಜವಾಬ್ದಾರಿಯನ್ನು ಇವುಗಳಿಗೆ ನೀಡಲಾಗಿದೆ. ಮತ್ತಾವರ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಮೂರು ಕಾಡಾನೆಗಳನ್ನು ಪತ್ತೆ ಹಚ್ಚಲು ಈ ಶ್ವಾನಗಳು ನೀಡಿದ ಮಾಹಿತಿ ಅರಣ್ಯ ಸಿಬ್ಬಂದಿಗೆ ದೊಡ್ಡ ಮಟ್ಟದ ಸಹಕಾರ ನೀಡಿದೆ.
55
ರೈತರಿಗೆ ಮತ್ತು ಅರಣ್ಯ ಇಲಾಖೆಗೆ ಹೊಸ ಭರವಸೆ:
ಕಾಫಿನಾಡಿನಲ್ಲಿ ಕಾಡಾನೆ ದಾಳಿಯಿಂದಾಗಿ ಜನಸಾಮಾನ್ಯರು ಪ್ರಾಣ ಕಳೆದುಕೊಳ್ಳುತ್ತಿರುವುದು ನಿರಂತರ ವರದಿಯಾಗುತ್ತಿದೆ. ಕಾಡಂಚಿನ ಗ್ರಾಮಸ್ಥರು ತೋಟಕ್ಕೆ ಹೋಗಲು ಭಯಪಡುತ್ತಿದ್ದರು. ಆದರೆ ಈಗ ರೋಸಿ ಮತ್ತು ಸಿಂಧು ಎಂಬ 'ಟ್ರಾಕರ್' ಶ್ವಾನಗಳ ಸಹಾಯದಿಂದ ಆನೆಗಳು ಎಲ್ಲಿವೆ ಎಂಬುದು ಮುಂಚಿತವಾಗಿಯೇ ತಿಳಿಯುತ್ತಿದೆ. ಇದರಿಂದ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಮತ್ತು ಆನೆಗಳನ್ನು ಕಾಡಿಗಟ್ಟಲು ಸಾಧ್ಯವಾಗುತ್ತಿದೆ.
ಒಟ್ಟಾರೆಯಾಗಿ, ತಂತ್ರಜ್ಞಾನದ ಡ್ರೋನ್ ಕ್ಯಾಮೆರಾಗಳು ವಿಫಲವಾದ ಜಾಗದಲ್ಲಿ ಈ ಶ್ವಾನಗಳು ಯಶಸ್ಸು ಸಾಧಿಸುತ್ತಿರುವುದು ಪ್ರಕೃತಿಯ ವಿಸ್ಮಯವೇ ಸರಿ. ರೋಸಿ ಮತ್ತು ಸಿಂಧು ಈಗ ಕಾಫಿನಾಡಿನ ರೈತರ ಮತ್ತು ಅರಣ್ಯ ರಕ್ಷಕರ ನಿಜವಾದ 'ಆಪತ್ಬಾಧವರು'.