ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆಯಬೇಕಿದ್ದ ಮದುವೆಯೊಂದು ವಧು-ವರರ ಕುಟುಂಬಗಳ ನಡುವಿನ ಗಲಾಟೆಯಿಂದ ರಣರಂಗವಾಗಿದೆ. ಚಿನ್ನಾಭರಣ ಮತ್ತು ಕಾರಿನ ಬೇಡಿಕೆ ವಿಚಾರವಾಗಿ ನಡೆದ ಸಂಘರ್ಷದಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದು, ಪ್ರೀತಿ ಮದುವೆ ಮುರಿದುಬಿದ್ದಿದೆ.
ಚಾಮರಾಜನಗರ (ಏ.29): ಮದುವೆ ಎಂದರೆ ಅಲ್ಲಿ ಸಂಭ್ರಮ, ಸಡಗರ ಇರಬೇಕು. ಆದರೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದ ಮದುವೆಯೊಂದು ರಣಾಂಗಣವಾಗಿ ಮಾರ್ಪಟ್ಟಿದೆ. ವಧು-ವರನ ಕುಟುಂಬಸ್ಥರ ನಡುವೆ ನಡೆದ ಭೀಕರ ಗಲಾಟೆಯಲ್ಲಿ ಪರಸ್ಪರ ಚಾಕು ಇರಿತ ನಡೆದಿದ್ದು, ಐವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
25
ಘಟನೆಯ ಹಿನ್ನೆಲೆ:
ಕೊಳ್ಳೇಗಾಲ ಪಟ್ಟಣದ ಆರ್‌ಎಂ (RM) ಛತ್ರದಲ್ಲಿ ಮುದಾಸಿರ್ ಹಾಗೂ ಗುಲ್ನಾಜ್ ಭಾನು ಎಂಬುವವರ ವಿವಾಹ ನಿಗದಿಯಾಗಿತ್ತು. ಆದರೆ ಮದುವೆಯ ಶಾಸ್ತ್ರಗಳ ನಡುವೆಯೇ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ. ವಧುವಿಗೆ ಮಾತಿನಂತೆ ಚಿನ್ನಾಭರಣ ನೀಡಿಲ್ಲ ಎಂಬ ಆರೋಪದ ಮೇಲೆ ಮಾತುಕತೆ ನಡೆಸಲು ವರನ ಕಡೆಯವರು ವಧುವಿನ ಮನೆಗೆ ಹೋಗಿದ್ದರು. ಈ ವೇಳೆ ಮಾತುಕತೆ ವಿಕೋಪಕ್ಕೆ ತಿರುಗಿ, ಪರಸ್ಪರ ಚಾಕು ಮತ್ತು ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ.
35
ಐವರಿಗೆ ತೀವ್ರ ಗಾಯ:
ಈ ಭೀಕರ ಸಂಘರ್ಷದಲ್ಲಿ ವರನ ಸೋದರ ಸಂಬಂಧಿಗಳಾದ ಸಮೀರ್ ಮತ್ತು ಶೋಯೆಬ್ ಹಾಗೂ ವಧುವಿನ ಸಂಬಂಧಿಕರಾದ ಪೈರೋಜ್ ಪಾಷಾ, ಅಬ್ದುಲ್ ವಾಯಿದ್ ಮತ್ತು ಅಬ್ದುಲ್ ಆರೀಪ್ ಎಂಬುವವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಲಾಟೆಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕುಟುಂಬಸ್ಥರು ಕುರ್ಚಿ ಹಾಗೂ ಚಾಕುಗಳನ್ನು ಹಿಡಿದು ಪರಸ್ಪರ ದಾಳಿ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ಘಟನೆಯ ಬಗ್ಗೆ ವಧು ಗುಲ್ನಾಜ್ ಭಾನು ಹಾಗೂ ಆಕೆಯ ತಮ್ಮ ಅನ್ವರ್ ಪಾಷಾ ಗಂಭೀರ ಆರೋಪ ಮಾಡಿದ್ದಾರೆ. 'ನಾವು ಚಿನ್ನಾಭರಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಇಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ವರನ ಕಡೆಯವರು ಬೈಕ್ ಬದಲು 15 ಲಕ್ಷ ರೂಪಾಯಿ ಬೆಲೆಬಾಳುವ ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದ ಕಾರಣ ನಾವು ಮದುವೆ ಬೇಡ ಎಂದು ನಿರ್ಧರಿಸಿದ್ದೆವು. ಆದರೆ ಅವರು ಮಾತುಕತೆಗೆಂದು ಬಂದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ' ಎಂದು ವಧುವಿನ ಕಡೆಯವರು ದೂರಿದ್ದಾರೆ.
55
ಪ್ರೀತಿಗೆ ಅಡ್ಡಬಂದ ಚಿನ್ನ-ಕಾರು
ಮದುವೆ ಮುರಿದು ಬಿದ್ದಿರುವುದು ಮಾತ್ರವಲ್ಲದೆ, ಬೀದಿಯಲ್ಲಿ ಹೊಡೆದಾಟ ನಡೆಸಿದ ಈ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ಆತಂಕ ಮೂಡಿಸಿದೆ. ಸದ್ಯ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪ್ರೀತಿಯ ಮದುವೆಯು ಕಾರು ಮತ್ತು ಚಿನ್ನದ ಆಸೆಗೆ ಬಲಿಯಾಗಿ, ರಕ್ತಪಾತದಲ್ಲಿ ಅಂತ್ಯಗೊಂಡಿರುವುದು ವಿಷಾದನೀಯ.