ಹೇಮಗುಡ್ಡದ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಕೊಪ್ಪಳ ಮುಖ್ಯ ರಸ್ತೆ ಹಾಗೂ ಬೈ ಪಾಸ್ ರಸ್ತೆ ಮೂಲಕ ಸುಮಾರು 3 ಗಂಟೆಗಳ ಕಾಲ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಶಹನಾಯಿ, ನಂದಿ ಕೋಲು ಕುಣಿತ, ಹಲಗಿ ಮೇಳ ಸೇರಿದಂತೆ ವೈವಿಧ್ಯಮಯ ಜಾನಪದ ನೃತ್ಯ ತಂಡಗಳು ಭಾಗವಹಿಸಿದ್ದವು. ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ಉದಯ ರವಿ, ಡಾ. ಇಲಿಯಾಸ್ ಬಾಬಾ, ವಿರೂಪಾಕ್ಷಪ್ಪ ಸಿಂಗನಾಳ, ಸಂತೋಷ ಕೆಲೋಜಿ, ಸಿ.ಎಚ್. ರಾಮಕೃಷ್ಣ ಸಿದ್ದಪ್ಪ ನೀರಲೋಟಿ, ರೆಡ್ಡಿ ಶ್ರೀನಿವಾಸ, ಅಮರೇಶ ಹೇರೂರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಮೈಸೂರು ದಸರಾ ಮಾದರಿಯಲ್ಲಿಯೇ ಹೇಮಗುಡ್ಡದಲ್ಲಿ 9 ದಿನಗಳ ದಸರಾ ಉತ್ಸವ ಜರುಗಿತು. ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ 9 ದಿನಗಳ ಕಾಲ ನವರಾತ್ರಿ ಉತ್ಸವದಲ್ಲಿ ದುರ್ಗಾ ಅಲಂಕಾರ, ಆರ್ಯ ದುರ್ಗ ಪೂಜೆ, ಅಂಬಿಕಾ ಪೂಜೆ, ಶ್ರೀ ಲಲಿತ ಪೂಜೆ, ಮಹಿಷಾಸುರ ಮರ್ದಿನಿ ಪೂಜೆ, ದುರ್ಗಾಷ್ಟಮಿ ಪೂಜೆ, ಶತಚಂಡಿಯಾಗ, ಪೂರ್ಣಾಹುತಿ, ಕುಮಾರಿಕ ಪೂಜೆಗಳು ಜರುಗಿದವು. ದಿನನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ದೇವಿ ಪುರಾಣ, ಪಲ್ಲಕ್ಕಿ ಸೇವೆ ಮತ್ತು ದೇವಸ್ಥಾನದ ಒಳಗೆ ರಥೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಿತ್ಯದ ಉತ್ಸವಕ್ಕೆ ಬರುವ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಜರುಗಿದವು. ವಿವಾಹ ಮಹೋತ್ಸವದ ರುವಾರಿ ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ನೇತ್ರತ್ವದಲ್ಲಿ 14 ಜೋಡಿಗಳ ಸಾಮೂಹಿಕ ವಿವಾಹ ಜರುಗಿದವು.
ಈ ಸಂದರ್ಭದಲ್ಲಿ ಶ್ರೀನಾಥ ಮಾತನಾಡಿ, ಸಾಮೂಹಿಕ ವಿವಾಹದಿಂದ ಈ ಭಾಗದ ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕುಟಂಬವು ಕಳೆದ 37 ವರ್ಷಗಳಿಂದ ವಿವಾಹ ಮಹೋತ್ಸವ ಏರ್ಪಡಿಸುತ್ತಾ ಬಂದಿರುತ್ತೇವೆ. ದುರ್ಗಾ ಪರಮೇಶ್ವರಿ ದೇವಿಯು ಎಲ್ಲರಿಗೂ ಆಶೀರ್ವದಿಸಲಿ. ಕಳೆದ ಎರಡು ವರ್ಷಗಳಿಂದ ಕೊರೋನಾ ಮಹಾ ಮಾರಿ ರೋಗಕ್ಕೆ ದೇಶದಲ್ಲಿ ಬಹಳಷ್ಟುಜನರು ಸಾವು- ನೋವು ಅನುಭವಿಸಿದ್ದಾರೆ. ದೇವಿಯು ರೋಗವನ್ನು ನಿವಾರಣೆ ಮಾಡಿ ಎಲ್ಲರಿಗೂ ರಕ್ಷಣೆ ಮಾಡಲಿ ಎಂದರು.
ಮಾಜಿ ಸಂಸದ ಎಚ್.ಜಿ. ರಾಮುಲು, ಜೋಗದ ಹನುಮಂತಪ್ಪ ನಾಯಕ, ಕೃಷ್ಣಪ್ಪ ನಾಯಕ, ಜೋಗದ ದುರಗಪ್ಪನಾಯಕ, ಡಾ. ಇಲಿಯಾಸ್ ಬಾಬಾ, ಸಿ.ಎಚ್. ರಾಮಕೃಷ್ಣ, ರೆಡ್ಡಿ ಶ್ರೀನಿವಾಸ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.