ಚಿಕ್ಕಮಗಳೂರಿನ ಹೋಂಸ್ಟೇಯೊಂದರಲ್ಲಿ ಬೆಂಗಳೂರಿನ ಐಟಿ ಉದ್ಯೋಗಿ ರಂಜಿತಾ ಅವರ ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮರಣೋತ್ತರ ಪರೀಕ್ಷೆಯ ವರದಿಯ ಬೆನ್ನಲ್ಲಿಯೇ ಹೋಂಸ್ಟೇ ಮಾಲೀಕರ ವಿರುದ್ಧ 4 ತಿಂಗಳ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ.
ಚಿಕ್ಕಮಗಳೂರು (ಫೆ.21): ಕಾಫಿನಾಡಿನ ಹೋಂಸ್ಟೇಯೊಂದರಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ನಡೆದಿದ್ದ ಬೆಂಗಳೂರಿನ ಐಟಿ ಉದ್ಯೋಗಿಯ ನಿಗೂಢ ಸಾವು ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ. ಯುವತಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿನ ಅಸಲಿ ಕಾರಣ ಬಯಲಾಗಿದ್ದು, ಇದೀಗ ಹೋಂಸ್ಟೇ ಮಾಲೀಕನ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.
26
ಘಟನೆಯ ಹಿನ್ನೆಲೆ
ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಂಜಿತಾ ಎಂಬ ಯುವತಿ, ಕಳೆದ ಅಕ್ಟೋಬರ್ 25ರಂದು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಹಾಂದಿ ಮಾಚಗೊಂಡನಹಳ್ಳಿಯಲ್ಲಿರುವ ‘ಹಿಪ್ಲಾ ಹೋಂ ಸ್ಟೇ’ಗೆ (Hipla Homestay) ಬಂದಿದ್ದರು. ಸ್ನೇಹಿತೆಯೊಬ್ಬರ ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಅದೇ ಹೋಂಸ್ಟೇನಲ್ಲಿ ತಂಗಿದ್ದರು.
36
ಸ್ನಾನ ಕೋಣೆಯಲ್ಲಿ ಬಿದ್ದಿದ್ದ ರಂಜಿತಾ
ಸ್ನಾನಕ್ಕಾಗಿ ಬಾತ್‌ರೂಮ್‌ಗೆ ಹೋದ ರಂಜಿತಾ ದೀರ್ಘಕಾಲದವರೆಗೆ ಹೊರಗೆ ಬಾರದಿದ್ದಾಗ ಸಂಶಯಗೊಂಡ ಸ್ನೇಹಿತರು ಬಾಗಿಲು ಮುರಿದು ನೋಡಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ಆರಂಭದಲ್ಲಿ ಇದೊಂದು ಅನುಮಾನಾಸ್ಪದ ಸಾವು ಎಂದು ಭಾವಿಸಲಾಗಿತ್ತು. ಆದರೆ, ಇತ್ತೀಚೆಗೆ ಬಂದ ಮರಣೋತ್ತರ ಪರೀಕ್ಷೆಯ ವರದಿಯು ಸಾವಿನ ಹಿಂದಿನ ಕರಾಳ ಸತ್ಯವನ್ನು ಬಿಚ್ಚಿಟ್ಟಿದೆ. ರಂಜಿತಾ ಅವರು 'ಕಾರ್ಬನ್ ಮಾನಾಕ್ಸೈಡ್' (Carbon Monoxide) ಎಂಬ ವಿಷಕಾರಿ ಅನಿಲವನ್ನು ಸೇವಿಸಿದ ಕಾರಣ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಾತ್‌ರೂಮ್‌ನಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿದ್ದು, ಬಾತ್‌ರೂಮ್‌ನಲ್ಲಿ ಸರಿಯಾದ ವೆಂಟಿಲೇಶನ್ (ಗಾಳಿ-ಬೆಳಕಿನ ವ್ಯವಸ್ಥೆ) ಇಲ್ಲದ ಕಾರಣ ರಂಜಿತಾ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
56
ಮಾಲೀಕನ ಮೇಲೆ ಎಫ್‌ಐಆರ್
ಯುವತಿಯ ಸಾವಿಗೆ ಹೋಂಸ್ಟೇ ಮಾಲೀಕರ ನಿರ್ಲಕ್ಷ್ಯವೇ ನೇರ ಕಾರಣ ಎಂದು ರಂಜಿತಾ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಗ್ಯಾಸ್ ಗೀಸರ್ ಅಳವಡಿಸುವಾಗ ಪಾಲಿಸಬೇಕಾದ ಸುರಕ್ಷತಾ ಕ್ರಮಗಳನ್ನು ಮಾಲೀಕರು ಗಾಳಿಗೆ ತೂರಿದ್ದರು ಎಂಬುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹೋಂಸ್ಟೇ ಮಾಲೀಕ ಸುಧಾಕರ್ ಎಂಬುವವರ ವಿರುದ್ಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
66
ಪ್ರವಾಸಿಗರಿಗೆ ಎಚ್ಚರಿಕೆ
ಇತ್ತೀಚಿನ ದಿನಗಳಲ್ಲಿ ಹೋಂಸ್ಟೇಗಳಲ್ಲಿ ಅಗ್ಗದ ದರದ ಮತ್ತು ಹಳೆಯ ಮಾದರಿಯ ಗ್ಯಾಸ್ ಗೀಸರ್‌ಗಳನ್ನು ಬಳಸಲಾಗುತ್ತಿದ್ದು, ಇದು ಪ್ರವಾಸಿಗರ ಪ್ರಾಣಕ್ಕೆ ಸಂಚಕಾರ ತರುತ್ತಿದೆ. ಸರಿಯಾದ ಕಿಟಕಿಗಳಿಲ್ಲದ ಬಾತ್‌ರೂಮ್‌ಗಳಲ್ಲಿ ಗ್ಯಾಸ್ ಗೀಸರ್ ಬಳಸುವುದು ಅತ್ಯಂತ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಸದ್ಯ ಆಲ್ದೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮಾಲೀಕನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.