ಕನ್ನಡಿಗರ ತೆರಿಗೆ ಹಣದಲ್ಲಿ 'ಪೆರಿಯಾರ್' ಭವನ: ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಬೆದರಿ ಹೆಸರು ಬದಲಿಸಿದ ಜಿಬಿಎ!

Published : Jul 28, 2026, 03:42 PM IST

ಬೆಂಗಳೂರಿನಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ ನಿರ್ಮಿಸಿದ ಸಮುದಾಯ ಭವನಕ್ಕೆ ತಮಿಳು ನಾಯಕ ಪೆರಿಯಾರ್ ಹೆಸರಿಟ್ಟಿದ್ದು ತೀವ್ರ ವಿವಾದಕ್ಕೆ ಕಾರಣವಾಯಿತು. ಕನ್ನಡಪರ ಸಂಘಟನೆಗಳ ಹೋರಾಟ ಮತ್ತು ಒತ್ತಡದ ನಂತರ, ಜಿಬಿಎ ಆಡಳಿತವು ಭವನಕ್ಕೆ 'ಇಂದಿರಾ ಗಾಂಧಿ ಕನ್ವೆನ್ಷನ್ ಹಾಲ್' ಎಂದು ಮರುನಾಮಕರಣ ಮಾಡಿದೆ.

PREV
15
ಕನ್ನಡಿಗರ ತೆರಿಗೆ ಹಣದಲ್ಲಿ ಪೆರಿಯಾರ್ ಪ್ರಚಾರ

ಬೆಂಗಳೂರು (ಜು.28): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ (Taxpayers Money) ನಿರ್ಮಿಸಲಾದ ಸಮುದಾಯ ಭವನವೊಂದಕ್ಕೆ ತಮಿಳುನಾಡಿನ ನಾಯಕ ಪೆರಿಯಾರ್ ಹೆಸರು ಇಟ್ಟಿರುವುದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕನ್ನಡಪರ ಸಂಘಟನೆಗಳ ತೀವ್ರ ಹೋರಾಟ, ಸ್ಥಳೀಯ ತಮಿಳಿಗರ ನಡುವಿನ ತೀವ್ರ ವಾಗ್ವಾದ ಹಾಗೂ ಪೊಲೀಸರ ಮಧ್ಯಪ್ರವೇಶದ ನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೊನೆಗೂ ಮಣಿದಿದ್ದು, ಭವನದ ಹೆಸರನ್ನು ಮರುನಾಮಕರಣ ಮಾಡಿದೆ.

25
ಏನಿದು 'ಪೆರಿಯಾರ್ ಭವನ' ವಿವಾದ?

ಬೆಂಗಳೂರಿನ ಶಿವಾಜಿನಗರ (Shivajinagar) ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಂ.ವಿ. ಗಾರ್ಡನ್‌ನಲ್ಲಿ (M.V. Garden) ಜಿಬಿಎ ಅನುದಾನದಲ್ಲಿ ಹೊಸ ಸಮುದಾಯ ಭವನವೊಂದನ್ನು ನಿರ್ಮಿಸಲಾಗಿತ್ತು. ಆದರೆ, ಕನ್ನಡಿಗರ ತೆರಿಗೆ ಹಣದಲ್ಲಿ ನಿರ್ಮಿಸಿದ ಈ ಭವನಕ್ಕೆ ತಮಿಳುನಾಡಿನ ಚಳವಳಿಗಾರ ಪೆರಿಯಾರ್ ಇ.ವಿ. ರಾಮಸಾಮಿ ಅವರ ಹೆಸರನ್ನು ಇಟ್ಟು 'ಪೆರಿಯಾರ್ ಕನ್ವೆನ್ಷನ್ ಹಾಲ್' (Periyar Convention Hall) ಎಂದು ನಾಮಕರಣ ಮಾಡಲಾಗಿತ್ತು. ಇದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.

35
ಕರ್ನಾಟಕದ ಮಹನೀಯರ ಹೆಸರಿಡಲು ಆಗ್ರಹ:

'ಕನ್ನಡಿಗರ ದುಡ್ಡಿನಲ್ಲಿ ನಿರ್ಮಿಸಿದ ಭವನಕ್ಕೆ ತಮಿಳುನಾಡಿನ ನಾಯಕರ ಹೆಸರಿಡುವುದು ಎಷ್ಟು ಸರಿ? ಪೆರಿಯಾರ್ ಬದಲು ಕರ್ನಾಟಕದ ಸಾಹಿತಿಗಳು, ಕ್ರಾಂತಿಕಾರಿಗಳು ಅಥವಾ ಮಹನೀಯರ ಹೆಸರನ್ನು ಇಡಬೇಕು' ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಮುಖಂಡರು ಜಿಬಿಎ ಮುಖ್ಯ ಆಯುಕ್ತರನ್ನು (GBA Chief Commissioner) ಭೇಟಿಯಾಗಿ ಅಧಿಕೃತ ಮನವಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಹೆಸರು ಬದಲಾವಣೆ ಮಾಡಲು ತಕ್ಷಣಕ್ಕೆ ಮುಂದಾಗಲಿಲ್ಲ.

45
ಸ್ಥಳದಲ್ಲಿ ಪ್ರತ್ಯಕ್ಷ ಗಲಾಟೆ: ಪೊಲೀಸರ ಎಂಟ್ರಿ!

ಜಿಬಿಎ ಅಧಿಕಾರಿಗಳು ಹೆಸರು ಬದಲಿಸದ ಹಿನ್ನೆಲೆಯಲ್ಲಿ, ಇಂದು 'ಕನ್ನಡಿಗರ ರಕ್ಷಣಾ ವೇದಿಕೆ'ಯ (Kannadigara Rakshana Vedike) ಕಾರ್ಯಕರ್ತರು ಎಂ.ವಿ. ಗಾರ್ಡನ್‌ನ ಭವನದ ಬಳಿ ನೆರೆದು ಭಾರಿ ಪ್ರತಿಭಟನೆ (Protest) ನಡೆಸಿದರು. ಈ ವೇಳೆ ಸ್ಥಳೀಯ ತಮಿಳು ಮುಖಂಡರು ಹಾಗೂ ಕನ್ನಡಪರ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ಹಾಗೂ ಮಾತಿನ ಚಕಮಕಿ ನಡೆದು ವಾತಾವರಣ ಕಾವೇರಿತು. ಘಟನಾ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು (Bengaluru Police), ಗಲಾಟೆ ನಿಲ್ಲಿಸಿ ಎಲ್ಲರನ್ನೂ ಸ್ಥಳದಿಂದ ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

55
ಒತ್ತಡಕ್ಕೆ ಮಣಿದ ಜಿಬಿಎ: ಹೊಸ ಹೆಸರು ಘೋಷಣೆ!

ಕನ್ನಡಪರ ಸಂಘಟನೆಗಳ ತೀವ್ರ ಪ್ರತಿಭಟನೆ ಹಾಗೂ ಗಲಾಟೆಯ ತೀವ್ರತೆಯನ್ನು ಅರಿತ ಜಿಬಿಎ ಆಡಳಿತ ಮಂಡಳಿ, ಕೊನೆಗೂ ಕನ್ನಡ ಕಾರ್ಯಕರ್ತರ ಒತ್ತಾಯಕ್ಕೆ ಮಣಿದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು 'ಪೆರಿಯಾರ್ ಕನ್ವೆನ್ಷನ್ ಹಾಲ್' ಹೆಸರನ್ನು ತೆರವುಗೊಳಿಸಿ, ಅದರ ಬದಲಾಗಿ 'ಇಂದಿರಾ ಗಾಂಧಿ ಕನ್ವೆನ್ಷನ್ ಹಾಲ್' (Indira Gandhi Convention Hall) ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಶೀರ್ಷಿಕೆ ಸಮರಕ್ಕೆ ತೆರೆ ಬಿದ್ದಿದೆ.

Read more Photos on
click me!

Recommended Stories