ಬೆಂಗಳೂರು: ಥಣಿಸಂದ್ರದಲ್ಲಿ ಭೀಕರ ಅಗ್ನಿ ದುರಂತ, ಕೋಟಿ ಕೋಟಿ ಮೌಲ್ಯದ 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸುಟ್ಟು ಭಸ್ಮ!

Published : Jul 27, 2026, 12:21 PM IST

ಬೆಂಗಳೂರಿನ ಥಣಿಸಂದ್ರದಲ್ಲಿರುವ ಕಾರು ಗ್ಯಾರೇಜ್‌ವೊಂದರಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಜಾಗ್ವಾರ್, ಆಡಿ ಸೇರಿದಂತೆ 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

PREV
15
25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸಂಪೂರ್ಣ ಭಸ್ಮ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಅತ್ಯಂತ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ನಗರದ ಥಣಿಸಂದ್ರದ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಾರುಗಳ ಗ್ಯಾರೇಜ್‌ವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಗ್ಯಾರೇಜ್‌ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ರೇಂಜ್ ರೋವರ್, ಆಡಿ, ಜಾಗ್ವಾರ್ ಸೇರಿದಂತೆ 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

25
ಬೆಳಗಿನ ಜಾವದ ಭೀಕರತೆ

ಸೋಮವಾರ ಮುಂಜಾನೆ ಸುಮಾರು 5 ರಿಂದ 5:30 ರ ಅವಧಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಟಿಂಕರಿಂಗ್, ಪೇಂಟಿಂಗ್ ಸೇರಿದಂತೆ ಸಣ್ಣಪುಟ್ಟ ರಿಪೇರಿ ಕೆಲಸಗಳಿಗಾಗಿ ಗ್ರಾಹಕರು ತಂದು ನಿಲ್ಲಿಸಿದ್ದ ಐಷಾರಾಮಿ ಕಾರುಗಳಿದ್ದ ಗ್ಯಾರೇಜ್‌ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಗ್ಯಾರೇಜ್‌ನಾದ್ಯಂತ ತೈಲ ಹಾಗೂ ಇತರೆ ದಹನಕಾರಿ ವಸ್ತುಗಳಿದ್ದ ಕಾರಣ ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಭಾರಿ ಪ್ರಮಾಣದಲ್ಲಿ ವ್ಯಾಪಿಸಿತು.

35
ಹಲವು ಹೈ-ಎಂಡ್ ಕಾರುಗಳು ಬೆಂಕಿಗೆ ಆಹುತಿ

ಈ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ದುಬಾರಿ ಜಾಗ್ವಾರ್ ಕಾರು ಸೇರಿದಂತೆ ಹಲವು ಹೈ-ಎಂಡ್ ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಅಷ್ಟೇ ಅಲ್ಲದೆ, ಗ್ಯಾರೇಜ್ ಪಕ್ಕದಲ್ಲೇ ಇದ್ದ ಶೆಡ್‌ಗೂ ಬೆಂಕಿ ಆವರಿಸಿದ್ದರಿಂದ ಅಲ್ಲಿ ನಿಲ್ಲಿಸಲಾಗಿದ್ದ 8 ಆಟೋರಿಕ್ಷಾಗಳು ಹಾಗೂ ಸಮೀಪದ ಫ್ಯಾಕ್ಟರಿಗೂ ಸಹ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.

45
ಅಗ್ನಿಶಾಮಕ ಸಿಬ್ಬಂದಿಯ ಹರಸಾಹಸ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ, ಐದು ಅಗ್ನಿಶಾಮಕ ವಾಹನಗಳ ಸಹಾಯದೊಂದಿಗೆ ಸತತ ಎರಡು ಗಂಟೆಗಳಿಗೂ ಹೆಚ್ಚು ಕಾಲ ಭಾರಿ ಕಾರ್ಯಾಚರಣೆ ನಡೆಸಿದರು. ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಬೆಂಕಿ ಪಕ್ಕದ ಇತರೆ ಕಟ್ಟಡಗಳಿಗೆ ವ್ಯಾಪಿಸುವುದನ್ನು ತಡೆಗಟ್ಟಲಾಯಿತು. ಸದ್ಯ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸುದೈವವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

55
ತನಿಖೆ ಕೈಗೆತ್ತಿಕೊಂಡ ಪೊಲೀಸರು

ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಬೆಂಕಿ ತಗುಲಲು ನಿಖರವಾದ ಕಾರಣವೇನೆಂಬುದು ಇನ್ನು ಪೂರ್ಣ ಪ್ರಮಾಣದಲ್ಲಿ ತಿಳಿದುಬಂದಿಲ್ಲ. ಸದ್ಯ ಗ್ಯಾರೇಜ್ ಸಿಬ್ಬಂದಿ ಸುಟ್ಟು ಕರಕಲಾಗಿರುವ ವಾಹನಗಳ ಅವಶೇಷಗಳನ್ನು ಹೊರತೆಗೆಯುತ್ತಿದ್ದು, ಕಾರಿನ ಮಾಲೀಕರಿಗೆ ಘಟನೆಯ ಬಗ್ಗೆ ಮಾಹಿತಿ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Read more Photos on
click me!

Recommended Stories