ಬೆಂಗಳೂರಿನ ಬಂಡೆಪಾಳ್ಯದಲ್ಲಿ ನಡೆದ ರೌಡಿಶೀಟರ್ ಶಬ್ಬೀರ್ ಕೊಲೆ ಪ್ರಕರಣವು ಹಫ್ತಾ ವಸೂಲಿ ಮತ್ತು ಜಾಗದ ವಿವಾದದಿಂದ ನಡೆದಿದೆ. ಈ ವ್ಯವಸ್ಥಿತ ಕೃತ್ಯದಲ್ಲಿ ಭಾಗಿಯಾಗಿದ್ದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕಠಿಣ ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು (ಜ.26): ಸಿಲಿಕಾನ್ ಸಿಟಿಯ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ರೌಡಿಶೀಟರ್ ಶಬ್ಬೀರ್ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯಗಳು ಹೊರಬಿದ್ದಿವೆ. ಹಫ್ತಾ ವಸೂಲಿ ಮತ್ತು ಏರಿಯಾದಲ್ಲಿ ಹವಾ ಮೆಂಟೇನ್ ಮಾಡುವ ಕುರಿತಾಗಿ ಆರಂಭವಾದ ಜಗಳವೇ ಈ ಕೊಲೆಗೆ ಪ್ರಮುಖ ಕಾರಣವಾಗಿದೆ. ಈ ಕೊಲೆಗೆ ಸಂಬಂಧಿಸಿದಂತೆ, ಬಂಧಿತ 11 ಮಂದಿ ಆರೋಪಿಗಳ ವಿರುದ್ಧ ಕಠಿಣ 'ಕೋಕಾ' (KOKA) ಕಾಯ್ದೆ ಅಡಿ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಜ್ಜಾಗಿದೆ.
25
ಹವಾ ಮೆಂಟೇನ್ ಹಾಗೂ ಹಫ್ತಾ ಕಿರುಕುಳ
ಕೊಲೆಯಾದ ಶಬ್ಬೀರ್ ಬಂಡೆಪಾಳ್ಯ ಭಾಗದಲ್ಲಿ ರೌಡಿಶೀಟರ್ ಆಗಿದ್ದು, ತನ್ನ ಹವಾ ಮೆಂಟೇನ್ ಮಾಡಲು ಸಾರ್ವಜನಿಕರಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮುಖ್ಯವಾಗಿ ಸ್ಥಳೀಯ ಗುಜರಿ ಅಂಗಡಿ ಮಾಲೀಕರಿಂದ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಂದ ನಿಯಮಿತವಾಗಿ ಹಫ್ತಾ ವಸೂಲಿ ಮಾಡುತ್ತಿದ್ದ. ಇದರಿಂದ ಸ್ಥಳೀಯರು ತೀವ್ರವಾಗಿ ರೋಸಿ ಹೋಗಿದ್ದರು.
35
ಜಾಗದ ತಕರಾರು ಮತ್ತು ಸ್ಕೆಚ್
ಕೊಲೆಗೆ ಪ್ರಮುಖ ಕಾರಣವಾಗಿದ್ದು ಒಂದು ಜಾಗದ ವಿವಾದ. ಮಸೀದಿ ಪಕ್ಕದಲ್ಲಿದ್ದ ಆರೋಪಿ ಸನ್ನಿ ಎಂಬಾತನ ಸಹೋದರಿಯ ಜಾಗದ ಮೇಲೆ ಶಬ್ಬೀರ್ ಕಣ್ಣು ಹಾಕಿದ್ದ. 'ಈ ಜಾಗವನ್ನು ನನಗೆ ಬಿಟ್ಟುಕೊಡಬೇಕು, ಇಲ್ಲವಾದರೆ ನಾನೇ ಇಲ್ಲಿ ಕಾಂಪೌಂಡ್ ಹಾಕುತ್ತೇನೆ' ಎಂದು ಸನ್ನಿಗೆ ನೇರವಾಗಿ ಧಮ್ಕಿ ಹಾಕಿದ್ದ. ಶಬ್ಬೀರ್ ಕಿರುಕುಳ ಮಿತಿಮೀರಿದಾಗ, ಸನ್ನಿ ಮತ್ತು ಆತನ 10 ಮಂದಿ ಸಹಚರರು ಸೇರಿ ಶಬ್ಬೀರ್‌ನನ್ನು ಮುಗಿಸಲು ಗ್ಯಾರೇಜ್‌ವೊಂದರಲ್ಲಿ ಕುಳಿತು ಪ್ಲಾನ್ ಮಾಡಿದ್ದರು.
ಯೋಜನೆಯಂತೆ ಶಬ್ಬೀರ್ ಒಂಟಿಯಾಗಿರುವುದನ್ನು ಗಮನಿಸಿದ ಆರೋಪಿಗಳು, ಮೊದಲು ಆತನ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಶಬ್ಬೀರ್ ಚೇತರಿಸಿಕೊಳ್ಳುವಷ್ಟರಲ್ಲಿ 11 ಮಂದಿ ಹಂತಕರು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ರಕ್ತಸಿಕ್ತ ಮಾರಕಾಸ್ತ್ರಗಳನ್ನು ಒಂದು ಕಡೆ ಬಚ್ಚಿಟ್ಟು, ಆಟೋ ಮೂಲಕ ಕೆ.ಆರ್. ಪುರಂ ರೈಲ್ವೆ ನಿಲ್ದಾಣಕ್ಕೆ ತಲುಪಿದ್ದಾರೆ. ಅಲ್ಲಿಂದ ಮುಂಬೈ, ರಾಜಸ್ಥಾನ ಮತ್ತು ಹೈದರಾಬಾದ್‌ಗೆ ಪರಾರಿಯಾಗಿದ್ದರು.
55
ಪೊಲೀಸರಿಂದ ಬೇಟೆ ಮತ್ತು 'ಕೋಕಾ' ಎಚ್ಚರಿಕೆ
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್ ಅವರ ನೇತೃತ್ವದ ವಿಶೇಷ ತಂಡವು ತಾಂತ್ರಿಕ ಕಾರ್ಯಾಚರಣೆ ನಡೆಸಿ, ವಿವಿಧ ರಾಜ್ಯಗಳಲ್ಲಿ ಅವಿತಿದ್ದ ಎಲ್ಲಾ 11 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಮಾಹಿತಿ ನೀಡಿದ ಡಿಸಿಪಿ, 'ಇದು ವ್ಯವಸ್ಥಿತವಾಗಿ ನಡೆದ ಕೊಲೆಯಾಗಿದ್ದು, ಸಾರ್ವಜನಿಕ ಶಾಂತಿಗೆ ಭಂಗ ತಂದಿರುವ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಹಾಕಲು ಸಿದ್ಧತೆ ನಡೆಸಿದ್ದೇವೆ' ಎಂದು ತಿಳಿಸಿದ್ದಾರೆ.